ಕೊರೋನಾ ವಾರಿ​ಯ​ರ್ಸ್‌: ‘ಗಂಡ-ಮಕ್ಕಳೂ ಸಹ ಅನುಮಾನದಿಂದ ನೋಡ್ತಾರೆ’

ಕೊರೋನಾ ವೈರಸ್‌ ಸೆಣಸಾಟದ ನೇತೃತ್ವ ವಹಿಸಿದ ಧೀರೆಯರು| ಪುಟ್ಟ ಮಕ್ಕಳಿದ್ದರೂ ಜವಾಬ್ದಾರಿ ನಿರ್ವಹಿಸ್ತಾರೆ| ಸರ್ಕಾರ ನೀಡುವ ಗೌರವಧನ ವಿಷಯ ಮುಖ್ಯವಲ್ಲ. ನಮ್ಮ ಸೇವೆ ಜನರಿಗೆ ಅಗತ್ಯವಿದೆ| ಕೊರೋನಾ ತಡೆಯುವಲ್ಲಿ ನಮ್ಮದು ಪ್ರಮುಖ ಪಾತ್ರ ಎಂಬ ಹೆಮ್ಮೆ ನಮಗೂ ಇದೆ: ಆಶಾ ಕಾರ್ಯಕರ್ತೆ ಗೀತಾ|

Asha Worker Geeta Talks Over Coronavirus duty in Ballari

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಏ.17): ಕೊರೋನಾ ವೈರಸ್‌ ನಿಯಂತ್ರಿಸುವ ಸಂಬಂಧ ಮನೆಮನೆ ಸಮೀಕ್ಷೆ ನಡೆಸಿ, ಮರಳಿ ಮನೆಗೆ ಬಂದಾಗ ಗಂಡ-ಮಕ್ಕಳು ಸಹ ನಮ್ಮನ್ನು ಅನುಮಾನದಿಂದ ನೋಡ್ತಾರೆ!
ಕೊರೋನಾ ವೈರಸ್‌ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಆಶಾ ಕಾರ್ಯಕರ್ತರು ತಮ್ಮ ದೈನಂದಿನ ಕಾರ್ಯ ಹಾಗೂ ಆತಂಕದ ಮಾತಿದು.

ನಾವು ಇಡೀ ದಿನ ಅಪಾಯದ ವಲಯದಲ್ಲಿ ಕೆಲಸ ಮಾಡ್ತೀವಿ. ಯಾರಿಗೆ ವೈರಸ್‌ ಇದೆಯೋ ಗೊತ್ತಾಗೋದಿಲ್ಲ. ದುಡಿಯಾಕಂತ ಬೆಂಗಳೂರು, ಮೈಸೂರಿನಿಂದ ಬಂದವರ ಮನೆಗೂ ಹೋಗಿ ಸಮೀಕ್ಷೆ ಮಾಡ್ತೀವಿ. ಆಗ ನಿಜಕ್ಕೂ ನಮಗೆ ಜೀವ ಭಯ ಎದುರಾಗುತ್ತದೆ. ಆಗ ಕುಟುಂಬ ಸದಸ್ಯರು ನೆನಪಾಗ್ತಾರೆ. ಏನಾದರೂ ಅಪಾಯ ಆದ್ರೆ ಮಕ್ಕಳ ಗತಿ ಏನು ಎಂದು ಆತಂಕ ಆಗುತ್ತದೆ. ಆದಾಗ್ಯೂ ನಮ್ಮ ಕೆಲಸದಿಂದ ದೂರ ಉಳಿಯದೆ, ನಮಗೂ ದೇಶ ಸೇವೆಗೆ ಸಿಕ್ಕಿರುವ ಅವಕಾಶ ಎಂದೇ ಕೆಲಸ ಮಾಡ್ತಾ ಇದ್ದೀವಿ.

ಕೊರೋನಾ ವಾರಿಯರ್ಸ್‌ ಅಂತರಾಳದ ಮಾತು: 'ಒಂದೇ ಮನ್ಯಾಗಿದ್ರೂ ಅಪರಿಚಿತರಂತೆ ಇರ್ತೇನ್ರಿ'

ಕುರುಗೋಡಿನ ಆಶಾ ಕಾರ್ಯಕರ್ತೆ ರಾಜೇಶ್ವರಿ. ನಮಗೂ ಜೀವಭಯ ಐತೆ. ಅದರಂತೆ ನಮ್ಮ ಮನೆಯ ಕುಟುಂಬ ಸದಸ್ಯರಿಗೂ ಸಹ ನಮ್ಮಿಂದ ವೈರಾಣು ಬರಬಹುದು ಎಂಬ ಆತಂಕ ಇದ್ದೇ ಇದೆ. ಹೀಗಾಗಿ ಅನೇಕ ಆಶಾ ಕಾರ್ಯಕರ್ತೆಯರ ಮನೆಗಳಲ್ಲಿ ಕೆಲಸಕ್ಕೆ ಹೋಗಬೇಡಿ. ಬರೋ ಒಂದಷ್ಟುಗೌರವಧನಕ್ಕೆ ಜೀವ ಹಾಳ್‌ ಮಾಡ್ಕೋ ಬ್ಯಾಡ್ರೀ ಅಂತ ಮನೆಯವರು ಜಗಳವಾಡುವ ಪ್ರಸಂಗಗಳು ಸಹ ನಡೆದಿವೆ. ಅಷ್ಟಾಗಿಯೂ ಯಾರೂ ಸಹ ವೃತ್ತಿಯಿಂದ ದೂರ ಉಳಿದಿಲ್ಲ. ಮನೆಯವರು ಎಷ್ಟೇ ಬೈದರೂ ಅವರಿಗೆ ತಿಳಿ ಹೇಳಿ, ಸುರಕ್ಷತೆಯ ಕ್ರಮಗಳನ್ನು ಕೈಗೊಂಡಿರುವುದಾಗಿ ಧೈರ್ಯ ತುಂಬಿ ಕೆಲಸಕ್ಕೆ ಹೊರ ಬರುತ್ತೇವೆ ಎನ್ನುತ್ತಾರೆ.

ಮಾಹಿತಿ ಕೊಡದೆ ಸತಾಯಿಸುತ್ತಾರೆ

ಬಿಸಿಲು ಹೆಚ್ಚಾಗುತ್ತಿರುವುದರಿಂದ ಬೆಳಗ್ಗೆ 7 ಗಂಟೆಯಿಂದಲೇ ಕೆಲಸ ಶುರು ಮಾಡ್ತೀವಿ. ಮಧ್ಯಾಹ್ನ 12.30ರ ತನಕ ಕೆಲಸ ಮುಗಿಸಿ, ಮನೆಗೆ ಹೋಗ್ತೀವಿ. ಸಂಜೆ 3 ಗಂಟೆಯಿಂದ ಸಂಜೆ 5ರ ವರೆಗೆ ಮನೆ ಮನೆ ಸಮೀಕ್ಷೆಯಲ್ಲಿರ್ತೀವಿ. ಇದು ಇಷ್ಟಕ್ಕೆ ಮುಗಿಯೋದಿಲ್ಲ. ಟಾಸ್ಕ್‌ಫೋರ್ಸ್‌ನಿಂದ ಯಾರಾದರೂ ಬಂದ್ರೂ ಹೋಗಬೇಕು. ಪೊಲೀಸರು ಬಂದ್ರೂ ಹೋಗಿ ಬೇರೆ ಜಿಲ್ಲೆ, ರಾಜ್ಯಗಳಿಂದ ಬಂದವರ ಮಾಹಿತಿ ಹಾಗೂ ಅವರ ಮನೆಗಳನ್ನು ತೋರಿಸಬೇಕು. ಅನೇಕರು ಮಾಹಿತಿ ಕೊಡದೆ ಸತಾಯಿಸುತ್ತಾರೆ. ದೆಹಲಿಗೆ ಹೋಗಿ ಬಂದವರನ್ನು ಆರೋಗ್ಯ ತಪಾಸಣೆ ಮಾಡಿಸಿ. ಅವರ ಆರೋಗ್ಯದ ಕಡೆ ಗಮನ ನೀಡಿ ಎಂಬ ಸೂಚನೆ ಇದೆ. ಆದರೆ, ದೆಹಲಿಗೆ ಹೋಗಿ ಬಂದವರು ಸೇರಿದಂತೆ ಹೊರ ಜಿಲ್ಲೆ, ರಾಜ್ಯಗಳಿಗೆ ಕೆಲಸಕ್ಕೆ ವಲಸೆ ಹೋಗಿದ್ದವರು ಸಹ ಅನೇಕರು ಮಾಹಿತಿ ನೀಡುವುದಿಲ್ಲ.

‘ನಾವು ಆರೋಗ್ಯವಾಗಿದ್ದೇವೆ. ನಮಗೇನಾಗಿದೆ?’ ಎಂದು ನಮ್ಮನ್ನೇ ಬೈದಾಡುತ್ತಾರೆ. ಹಾಗಂತ ನಾವು ಸುಮ್ಮನೆ ಬಿಡಲು ಬರುವುದಿಲ್ಲ. ಪೊಲೀಸರಿಗೆ ಫೋನಾಯಿಸಿ ಕರೆಸಿಕೊಳ್ಳಬೇಕು. ಪೊಲೀಸರ ನೆರವು ಪಡೆದು ಅವರ ಆರೋಗ್ಯ ತಪಾಸಣೆ ಮಾಡಿಸಬೇಕು. ಇದು ಆಶಾ ಕಾರ್ಯಕರ್ತೆಯರಿಗೆ ತಲೆನೋವಾಗಿ ಪರಿಣಮಿಸಿದೆ.

ಕಡಿಮೆ ಗೌರವಧನ.....

ಕಡಿಮೆ ಗೌರವಧನದಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರ ಪೈಕಿ ಅನೇಕರು ವಿಧವೆಯರು ಹಾಗೂ ಪತಿಯಿಂದ ದೂರ ಉಳಿದವರು ಇದ್ದಾರೆ. ಇವರ ಜೀವನೋಪಾಯಕ್ಕೆ ಸರ್ಕಾರ ನೀಡುವ ಗೌರವ ಧನವೇ ಆಧಾರ. ಹೀಗಾಗಿ ಎಷ್ಟೇ ಅಪಾಯ ಎನಿಸಿದರೂ ಕೆಲಸ ಮಾಡದೆ ವಿಧಿಯಿಲ್ಲ. ಪುಟ್ಟ ಮಕ್ಕಳನ್ನು ಆಸುಪಾಸಿನ ಮನೆಯವರಿಗೆ ಕೊಟ್ಟು ಕೆಲಸಕ್ಕೆ ಬರುತ್ತಿದ್ದು, ಮಗುವಿಗೆ ಹಾಲುಣಿಸಲು ಆಗಾಗ್ಗೆ ಹೋಗಿ ಬಂದು ಮತ್ತೆ ಕೆಲಸದಲ್ಲಿ ನಿರತವಾಗುತ್ತಾರೆ. ಮಕ್ಕಳಿಗೆ ವೈರಾಣು ಬಂದರೆ ಗತಿ ಏನು ಎಂಬ ಆತಂಕದ ನಡುವೆಯೂ ದೇವರ ಮೇಲೆ ಭಾರ ಹಾಕಿ ಕೆಲಸ ಮಾಡುತ್ತಿದ್ದಾರೆ. ಬದುಕಿನ ಅನಿವಾರ್ಯತೆ ಜೀವಭಯದ ಆತಂಕಗಳನ್ನು ಮೆಟ್ಟಿಕೆಲಸ ಮಾಡುವಂತಾಗಿದೆ.

ಈ ಸಂದರ್ಭದಲ್ಲಿ ಸರ್ಕಾರ ನೀಡುವ ಗೌರವಧನ ವಿಷಯ ಮುಖ್ಯವಲ್ಲ. ನಮ್ಮ ಸೇವೆ ಜನರಿಗೆ ಅಗತ್ಯವಿದೆ. ಅದನ್ನು ಮಾಡುತ್ತಿದ್ದೇವೆ. ಕೊರೋನಾ ತಡೆಯುವಲ್ಲಿ ನಮ್ಮದು ಪ್ರಮುಖ ಪಾತ್ರ ಎಂಬ ಹೆಮ್ಮೆ ನಮಗೂ ಇದೆ. ಆ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದೇವೆ ಎನ್ನುತ್ತಾರೆ ಹರಗಿನಡೋಣಿ ಗ್ರಾಮದ ಆಶಾ ಕಾರ್ಯಕತೆ ಗೀತಾ.
 

Latest Videos
Follow Us:
Download App:
  • android
  • ios