ಅಮೆರಿಕ ಅಧ್ಯಕ್ಷ ಟ್ರಂಪ್ ವರ್ಣಮಾಲೆಯಿಂದ ಗಾಂಧಿ ರೇಖಾಚಿತ್ರ: ಕಲಾವಿದನ ಕೈಚಳಕ
'Donald Trumph' ಹೆಸರಿನ ವರ್ಣಮಾಲೆ ಬಳಸಿ ಗಾಂಧಿ ರೇಖಾಚಿತ್ರ ಬಿಡಿಸಿದ್ದಾರೆ ಕಲಾವಿದ ಅಶೋಕ ಗುರೂಜಿ| ರೇಖಾಚಿತ್ರ ಪ್ರಧಾನ ಮಂತ್ರಿ ಕಚೇರಿ, ರಾಜ್ಯದ ಬಿಜೆಪಿ ಕಚೇರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರಿಗೆ ಇ ಮೇಲ್ ಸಂದೇಶ ರವಾನಿಸಿದ ಕಲಾವಿದ|
ಶೇಷಮೂರ್ತಿ ಅವಧಾನಿ
ಕಲಬುರಗಿ(ಫೆ.22): ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮೊದಲ ಬಾರಿಗೆ ಫೆ.24ರಂದು ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರು ಬಳಸುವ ಬೀಸ್ಟ್ ಕಾರು, ಅವರಿಗಾಗಿ ಹೆಣೆಯಲಾಗಿರುವ ಬಿಗಿ ಭದ್ರತೆ, ಬೆಂಗಾವಲು ಪಡೆ ಇತ್ಯಾದಿಗಳ ಬಗ್ಗೆ ಭಾರಿ ಚರ್ಚೆಗಳ ನಡುವೆಯೇ ಕಲಬುರಗಿಯ ರೇಖಾಚಿತ್ರ ಕಲಾವಿದ ಅಶೋಕ ಗುರೂಜಿ ಟ್ರಂಪ್ ಹೆಸರಲ್ಲಿನ 11 ಆಂಗ್ಲ ವರ್ಣಮಾಲೆ ಬಳಸಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸುಂದರ ರೇಖಾಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ.
ಜಗತ್ತಿನ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಬರುವ ಸುದ್ದಿ, ಗುಜರಾತ್‌ನ ಗಾಂಧೀಜಿ ಅವರ ಸಬರಮತಿ ಆಶ್ರಮಕ್ಕೆ ಭೇಟಿ ನೀಡುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಅಶೋಕ ಗುರೂಜಿ ತಲೆಯಲ್ಲಿ ಅಮೆರಿಕ ಅಧ್ಯಕ್ಷರ ಹೆಸರಿನಲ್ಲಿರುವ 11 ಆಂಗ್ಲ ಅಕ್ಷರ ಬಳಸಿ ಗಾಂಧೀಜಿ ಸುಂದರ ರೇಖಾಚಿತ್ರ ರಚಿಸುವ ಪರಿಕಲ್ಪನೆ ಚಿಗುರೊಡೆದು ಅದನ್ನವರು ನಿಜ ರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ ಸರ್ಕಾರ ನೆರವಾದೀತೆ?
ಅಶೋಕ ಗುರೂಜಿ ತಾವು ರಚಿಸಿರುವ ರಾಷ್ಟ್ರಪಿತನ ಅಪರೂಪದ ರೇಖಾಚಿತ್ರವನ್ನು ಸ್ಕ್ಯಾನ್ ಮಾಡಿ ಪ್ರಧಾನ ಮಂತ್ರಿ ಕಚೇರಿ, ರಾಜ್ಯದ ಬಿಜೆಪಿ ಕಚೇರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರಿಗೆ ಇ ಮೇಲ್ ಸಂದೇಶ ರವಾನಿಸಿದ್ದಾರೆ. ಎಲ್ಲಿಂದಲೂ ಇಂದಿಗೂ ಉತ್ತರ ಮಾತ್ರ ಬಂದಿಲ್ಲ. ಕರ್ನಾಟಕ ಸರ್ಕಾರದ ಸಚಿವಾಲಯ ಮಟ್ಟದಿಂದಲಾದಲೂ ತಮ್ಮ ಈ ರೇಖಾಚಿತ್ರ ಅಮೆರಿಕ ಅಧ್ಯಕ್ಷರ ಕೈ ಸೇರುವಲ್ಲಿ ನೆರವು ದೊರಕುವುದೆ? ಎಂಬ ನಿರೀಕ್ಷೆಯಲ್ಲಿದ್ದಾರೆ.
ಈ ರೇಖಾಚಿತ್ರ ಟ್ರಂಪ್ ಕೈ ಸೇರಲಿ
ಅಮೆರಿಕ ಅಧ್ಯಕ್ಷರ ಹೆಸರಿನ ವರ್ಣಮಾಲೆ ಬಳಸಿದ ಗಾಂಧೀಜಿ ರೇಖಾಚಿತ್ರ ಬಲು ಅಪರೂಪವಾಗಿದೆ. ಟ್ರಂಪ್, ಮೋದಿ ಗುಜರಾತ್ ಐತಿಹಾಸಿಕ ಭೇಟಿ ವೇಳೆ ಈ ರೇಖಾಚಿತ್ರ ಟ್ರಂಪ್ ಕೈ ಸೇರಿದರೆ ಈ ಪ್ರಸಂಗ ಇನ್ನಷ್ಟು ಐತಿಹಾಸಿಕವಾಗುತ್ತದೆ ಎನ್ನುತ್ತಾರೆ ಕಲಾವಿದ ಅಶೋಕ ಗುರೂಜಿ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
‘ಕನ್ನಡಪ್ರಭ’ ಹಾಗೂ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಗುರೂಜಿ ನಾಲ್ಕು ದಿನ, ನಾಲ್ಕು ರಾತ್ರಿ ಕುಳಿತು ಈ ರೇಖಾಚಿತ್ರ ಸೃಷ್ಟಿಸಿರುವೆ. ಭಾರತ, ಗುಜರಾತ್ ಸರ್ಕಾರದ ಪರವಾಗಿ ತಮ್ಮ ಕಲಾಕೃತಿ ದೊಡ್ಡಣ್ಣನ ಗಮನ ಸೆಳೆದಲ್ಲಿ ಅದಕ್ಕಿಂತ ಹೆಚ್ಚಿನ ಅದೃಷ್ಟ ಯಾವುದು ಇಲ್ಲ ಎಂದು ಧನ್ಯತೆಯಿಂದ ಹೇಳುತ್ತಾರೆ. ಸ್ವಾತಂತ್ರ್ಯ ಯೋಧ ವಿದ್ಯಾಧರ ಗುರೂಜಿ ಪುತ್ರ ಅಶೋಕ ಗುರೂಜಿ ಅವರು ರೇಖಾಚಿತ್ರಗಳ ಖ್ಯಾತ ಕಲಾವಿದರು. ಈ ಹಿಂದೆ ನರೇಂದ್ರ ಮೋದಿ ಹೆಸರಿನ ಹಿಂದಿ ವರ್ಣಮಾಲೆ ಬಳಸಿ ರಚಿಸಿರುವ ವೇಣು ಗೋಪಾಲ ಗೋಪಾಲಕೃಷ್ಣನ ರೇಖಾಚಿತ್ರ ಸಹಸ್ರಾರು ಕಲಾಸಕ್ತರ ಮೆಚ್ಚುಗೆ ಪಡೆದಿತ್ತು.
#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"