Asianet Suvarna News Asianet Suvarna News

ಉಡುಪಿ: ಕಡಲಿನ ನಡುವೆ ನೂರಾರು ಬೋಟುಗಳಲ್ಲಿ ಕೋಟಿ ಕಂಠ ಗಾಯನ

Koti Katha Gayana Udupi: ಕಡಲತಡಿಯಲ್ಲಿ ಕೋಟಿ ಕಂಠ ಗಾಯನ  ವಿಶಿಷ್ಟವಾಗಿ ನಡೆಯಿತು. ಜಲಮಾರ್ಗದಲ್ಲಿ ಸಾವಿರಾರು ಜನರು ಏಕಕಾಲದಲ್ಲಿ ಕನ್ನಡ ಗೀತೆಗಳನ್ನು ಹಾಡಿದರು

Around 5000 people participate in Koti Kantha Gayana in udupi mnj
Author
First Published Oct 28, 2022, 3:17 PM IST

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಅ. 28): ಕಡಲತಡಿಯಲ್ಲಿ ಕೋಟಿ ಕಂಠ ಗಾಯನ  (Koti Katha Gayana) ವಿಶಿಷ್ಟವಾಗಿ ನಡೆಯಿತು. ಜಲಮಾರ್ಗದಲ್ಲಿ ಸಾವಿರಾರು ಜನರು ಏಕಕಾಲದಲ್ಲಿ ಕನ್ನಡ ಗೀತೆಗಳನ್ನು ಹಾಡಿದರು. ಮಲ್ಪೆ ಸೀ ವಾಕ್‌ನಿಂದ ಸೈಂಟ್ ಮೇರಿಸ್ ವರೆಗೂ ಸಮುದ್ರ ಮಾರ್ಗದಲ್ಲಿ  ತೆರಳಿದ 150ಕ್ಕೂ ಅಧಿಕ ಬೋಟುಗಳಲ್ಲಿ, ಅಂದಾಜು 5000 ಜನ ಕನ್ನಡ ಗೀತ ಗಾಯನ ನಡೆಸಿದರು.  ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ (Sunil Kumar)ತವರು ಜಿಲ್ಲೆಯಲ್ಲಿ, ಕೋಟಿಕಂಠ ಗಾಯನ ವಿಶಿಷ್ಟವಾಗಿ ಆಯೋಜನೆಯಾಗಿತ್ತು. ಕಳೆದ ಬಾರಿ ಕೇವಲ ಬೆರಳೆಣಿಕೆಯ ಬೋಟುಗಳಲ್ಲಿ ಗೀತ ಗಾಯನ ನಡೆದಿದ್ದರೆ, ಈ ಬಾರಿ 150ಕ್ಕೂ ಅಧಿಕ ಬೃಹತ್ ಗಾತ್ರದ ಬೋಟುಗಳಲ್ಲಿ ಅಂದಾಜು 5,000 ಜನ ಕನ್ನಡ ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮೀನುಗಾರರ ಮಹಿಳೆಯರು ಕೂಡ ಕನ್ನಡ ಬಾವುಟ (Karnataka Flag) ಹಿಡಿದು ಹಾಡು ಹಾಡಿದರು.

ಶ್ರಮಜೀವಿಗಳಾದ ಮೀನುಗಾರರು ಮುಂಜಾನೆ ನಾಲ್ಕೈದು ಗಂಟೆಗೆಲ್ಲ ಮೀನು ಹಿಡಿಯಲು ದೊಡ್ಡ ದೊಡ್ಡ ಬೋಟುಗಳಲ್ಲಿ ತೆರಳುತ್ತಾರೆ. ಆದರೆ ಇಂದು ಬೆಳಗಿನ ಮೀನುಗಾರಿಕೆಯನ್ನು ನಡೆಸದೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ಬಾರಿ ನೆಲ, ಜಲ, ಆಕಾಶ ಮಾರ್ಗದಲ್ಲಿ ಗಾಯನ ನಡೆಸಬೇಕು ಅನ್ನುವುದು ಇಲಾಖೆಯ ಹಂಬಲವಾಗಿತ್ತು. ಸಚಿವರ ಈ ಆಶಯಕ್ಕೆ ಕೈಜೋಡಿಸಿದ ಮೀನುಗಾರರು, ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಂಡು ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ನಾಡಪ್ರೇಮ ಮೆರೆದ ಮೀನುಗಾರರು: ಭಾರಿ ಗಾತ್ರದ ದೊಡ್ಡ ಬೋಟುಗಳು, ತಲಾ 10 ಕಿ.ಮೀ ನಷ್ಟು ಜಲಮಾರ್ಗದಲ್ಲಿ ಸಂಚರಿಸಿದವು. ಈ ವೇಳೆ ಪ್ರತಿ ಬೋಟಿಗೂ ಡೀಸೆಲ್‌ಗಾಗಿ ಅಂದಾಜು 5000 ರುಪಾಯಿಗೂ ಅಧಿಕ ಹಣ ವ್ಯಯಿಸಲಾಗಿತ್ತು. ಸದ್ಯ ಕಡಲ ತೀರದಲ್ಲಿ ಹೇರಳ ಮೀನುಗಳು ಲಭ್ಯವಾಗುತ್ತಿದೆ, ಮುಂಜಾನೆ ಮೀನುಗಾರಿಕೆಗೆ ತೆರಳಿದರೆ ಲಕ್ಷಾಂತರ ರೂಪಾಯಿಯ ಮೀನು ಹಿಡಿಯಬಹುದು. ಆದರೆ ಕೋಟಿಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮೀನುಗಾರರು, ನಾಡ ಪ್ರೇಮ ಮೆರೆದರು. 

ಇದನ್ನೂ ಓದಿ: ಬೆಂಗಳೂರು: ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಮೊಳಗಿದ ಕನ್ನಡದ ಹಾಡು..!

ಸಂಚರಿಸುವ ಬೋಟುಗಳಲ್ಲಿ ನಡೆದ ಗಾಯನ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾಗಿತ್ತು. ಅಪಾರ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ಭಾಗಿಗಳಾಗಿದ್ದರು. ಜಿಲ್ಲೆಯ ಹಿರಿಯ ಕಲಾವಿದರು ಕಾರ್ಯಕ್ರಮದಲ್ಲಿ ಹಾಡಿದರು. ಇತ್ತೀಚೆಗಷ್ಟೇ ಬಿಡುಗಡೆಯಾದ ಜನಪ್ರಿಯ ಕನ್ನಡ ಚಲನಚಿತ್ರ ಕಾಂತರಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಡುಪಿಯ ನಟಿ ಮಾನಸಿ ಸುಧೀರ್, ಕೋಟಿ ಕಂಠ ಗಾಯನದಲ್ಲಿ ಭಾಗಿಯಾಗಿ ಹಾಡಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿನಿಯರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. 

ಜಿಲ್ಲಾಧಿಕಾರಿ ಕೂರ್ಮಾ ರಾವ್ ವಿದ್ಯಾರ್ಥಿಗಳೊಂದಿಗೆ ಹಾಡಿ, ಕುಣಿದು ಖುಷಿ ಪಟ್ಟರು. ಮೀನುಗಾರ ಮುಖಂಡ ಯಶ್ ಪಾಲ್ ಸುವರ್ಣ, ಈ ವಿಶೇಷ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಅದ್ದೂರಿಯಾಗಿ ಕಾರ್ಯಕ್ರಮ ನಡೆಸುವುದಾಗಿ ಯಶ್ ಪಾಲ್ ಸುವರ್ಣ ತಿಳಿಸಿದರು.

Follow Us:
Download App:
  • android
  • ios