ಬೆಂಗಳೂರು(ಫೆ.20): ನಗರದ ಕೆ.ಜೆ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ಕಳೆದ ವರ್ಷ ನಡೆದ ಗಲಭೆಯಲ್ಲಿ ಆಸ್ತಿ ನಷ್ಟಅನುಭವಿಸುವವರು ತಮಗೆ ಆದ ನಷ್ಟದ ವಿವರದೊಂದಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸುವಂತೆ ಪ್ರಕರಣ ಸಂಬಂಧ ನೇಮಕವಾಗಿರುವ ಕ್ಲೈಮ್‌ ಕಮಿಷನರ್‌ ನ್ಯಾಯಮೂರ್ತಿ ಎಚ್‌.ಎಸ್‌.ಕೆಂಪಣ್ಣ ಮನವಿ ಮಾಡಿದ್ದಾರೆ.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ನಷ್ಟವನ್ನು ತಪ್ಪಿತಸ್ಥ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ವಸೂಲಿ ಮಾಡಿ ಭರಿಸಿಕೊಡಲು ಹೈಕೋರ್ಟ್‌ ಕ್ಲೈಮ್‌ ಕಮಿಷನ್‌ ನೇಮಕ ಮಾಡಿದೆ. ನಷ್ಟಕ್ಕೆ ಒಳಗಾಗಿರುವವರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದಲ್ಲಿ ಪರಿಶೀಲಿಸಿ ನ್ಯಾಯಾಲಯದ ಮೂಲಕ ಪರಿಹಾರ ಒದಗಿಸಲಾಗುವುದು ಎಂದರು.

ಘಟನೆಗೆ ಸಂಬಂಧಿಸಿದಂತೆ ಎರಡೂ ಪೊಲೀಸ್‌ ಠಾಣೆಗಳಲ್ಲಿ ಸುಮಾರು 50 ಜನ ದೂರು ದಾಖಲಿಸಿದ್ದಾರೆ. ಆದರೆ, ನಷ್ಟಭರಿಸಿಕೊಡುವಂತೆ ಈವರೆಗೂ ಕೇವಲ ಮೂರು ಅರ್ಜಿಗಳು ಮಾತ್ರ ಬಂದಿವೆ. ಫೆ.28 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ, ಆದರೆ, ಸಾರ್ವಜನಿಕರಿಗೆ ಅನುಕೂಲವಾಗಬೇಕೆಂಬ ಕಾರಣದಿಂದ ಅವಧಿ ಮುಗಿದ ಬಳಿಕ ಬಂದ ಅರ್ಜಿಗಳನ್ನೂ ಪರಿಗಣಿಸಲಾಗುವುದು ಎಂದು ಕೆಂಪಣ್ಣ ವಿವರಿಸಿದರು.

ಕ್ಲೈಮ್‌ ಕಮಿಷನ್‌ ರಚನೆ ಸಂಬಂಧ ಈಗಾಗಲೇ ಕನ್ನಡ, ಆಂಗ್ಲ ಮತ್ತು ಉರ್ದು ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಗಲಭೆ ನಡೆದ ಭಾಗಗಳಲ್ಲಿ ಭಿತ್ತಿ ಪತ್ರಗಳನ್ನು ಹಂಚಲಾಗಿದೆ. ಈಗಾಗಲೇ ಪೊಲೀಸ್‌ ಅಧಿಕಾರಿಗಳ ಜೊತೆಯಲ್ಲಿ ಸ್ಥಳ ಪರಿಶೀಲನೆ ಮಾಡಲಾಗಿದೆ. ಅರ್ಜಿಗಳು ಬಂದ ಬಳಿಕ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ ನಷ್ಟದ ಮೌಲ್ಯ ಮಾಪನ ಮಾಡಲಾಗುವುದು ಎಂದರು.

ಡಿಜೆ ಹಳ್ಳಿ ಗಲಭೆ: ಸಂಪತ್‌ ರಾಜ್‌ಗೆ ಷರತ್ತು ಬದ್ಧ ಜಾಮೀನು

ಪರಿಹಾರ ಕೊಡಿಸುವ ಸಂಬಂಧ ಶಾಸಕ ಅಖಂಡ ಶ್ರೀನಿವಾಸ್‌ಮೂರ್ತಿ ಭೇಟಿ ಮಾಡಿದ್ದು, ನಷ್ಟಪರಿಹಾರಕ್ಕೆ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ, ಅದೇ ರೀತಿ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಗೆ ದೊಡ್ಡ ಮಟ್ಟದ ನಷ್ಟವಾಗಿದ್ದು, ಈ ಸಂಬಂಧ ಅರ್ಜಿ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗಾಗಿ ನಡೆದ ಗಲಭೆಯಲ್ಲಿ ಅಪಾರ ಪ್ರಮಾಣದ ಆಸ್ತಿ ನಷ್ಟವಾದ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ.ಟಿ.ಕಾಮತ್‌ ಮತ್ತು ಹಿರಿಯ ವಕೀಲ ಪಾಲಿ ಎಸ್‌.ನಾರಿಮನ್‌ ಅವರ ನೇತೃತ್ವದ ಎರಡು ಸಮಿತಿಗಳ ವರದಿ ಆಧರಿಸಿ ಸುಪ್ರೀಂಕೋರ್ಟ್‌ ಹೊರಡಿಸಿರುವ 10 ಮಾರ್ಗಸೂಚಿ ಪ್ರಕಾರ ನಷ್ಟ ಪರಿಹಾರ ಕೊಡಿಸಲಾಗುವುದು ಎಂದು ಅವರು ತಿಳಿಸಿದರು.

ಅರ್ಜಿ ಸಲ್ಲಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್‌ ಐಡಿ, ಆಡಿಯೋ, ವಿಡಿಯೋ ದಾಖಲೆಗಳಿದ್ದಲ್ಲಿ ಅದನ್ನು ದೃಢಪಡಿಸುವ ಹೇಳಿಕೆಯೊಂದಿಗೆ ನಗರದ ಬಾಲಬ್ರೂಯಿ ಅತಿಥಿ ಗೃಹದಲ್ಲಿನ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಅರ್ಜಿದಾರರು ಲಿಖಿತ ಹೇಳಿಕೆ ಸಲ್ಲಿಸುವಾಗ ನೀಡಬೇಕಾದ ಮಾಹಿತಿ, ದಾಖಲೆಗಳು

*ಹೆಸರು, ಅಂಚೆ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್‌ ಐಡಿ.
*ಆಡಿಯೋ, ವಿಡಿಯೋ ಅಥವಾ ಇತರೆ ಧ್ವನಿ ಸುರಳಿ ಮತ್ತು ಅದರ ನೈಜ ಲಿಖಿತ ಹೇಳಿಕೆ.
*ಅಧಿಕಾರಿಗಳ ಮುಂದೆ ದೃಢೀಕರಿಸಿ ನೀಡಿರುವ ಪ್ರಮಾಣ ಪತ್ರ.
*ಹಾನಿಗೊಳಗಾದ ವಾಹನಗಳು, ಕಟ್ಟಡಗಳು ಅಥವಾ ಇತರೆ ಸ್ವತ್ತುಗಳ ಸ್ವರೂಪ ಹಾಗೂ ವಿವರಣೆ, ನೀಡಿರುವ ದಾಖಲಾತಿಗಳ ವಿವರ.
*ಹಾನಿಗೊಳಗಾದ ಸ್ವತ್ತಿನ ಮೌಲ್ಯ (ಈಗಾಗಲೇ ಮೌಲ್ಯಮಾಪನೆ ಮಾಡಿಸಿದ್ದಲ್ಲಿ)
*ಅರ್ಜಿದಾರರ ಲಿಖಿತ ಹೇಳಿಕೆ ಬೆಂಬಲಿಸುವ ಸಾಕ್ಷಿದಾರರಿದ್ದಲ್ಲಿ ಅವರ ಹೆಸರು ಮತ್ತು ವಿಳಾಸ.
*ಆಸ್ತಿಗಳ ನಷ್ಟದ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಲ್ಲಿ ದೂರಿನ ಸಂಖ್ಯೆ, ದಿನಾಂಕ ಹಾಗೂ ಠಾಣೆಯ ಹೆಸರು.