Asianet Suvarna News Asianet Suvarna News

ಬಳ್ಳಾರಿ: ಗಣಿನಾಡು ಸಂಡೂರಿಗೆ ಕಾಲಿಟ್ಟ ಸೇಬು ಕೃಷಿ..!

ಸೇಬು ಕೃಷಿಗೆ 20-25 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರಬೇಕಾಗುತ್ತದೆ. ಅರೆ ಮಲೆನಾಡಿನಂತಿರುವ ತಾಲೂಕಿನಲ್ಲಿ ಈಗಾಗಲೆ ಅಡಕೆ ಗಿಡಗಳು ಉತ್ತಮ ಬೆಳವಣಿಗೆ ಕಂಡಿದೆ. ಇದೀಗ ತಾಲೂಕಿನಲ್ಲಿ 15-20 ರೈತರು ಸೇಬು ಗಿಡಗಳನ್ನು ಬೆಳೆಸಿದ್ದಾರೆ: ಸಹಾಯಕ ತೋಟಗಾರಿಕೆ ನಿರ್ದೇಶಕ ಹನುಮಂತಪ್ಪ

Apple Cultivation Started at Sandur in Ballari grg
Author
First Published Jul 17, 2023, 4:00 AM IST

ವಿ.ಎಂ. ನಾಗಭೂಷಣ

ಸಂಡೂರು(ಜು.17):  ಅರೆ ಮಲೆನಾಡಿನಂತಿರುವ ಗಣಿನಾಡು ಸಂಡೂರು ತಾಲೂಕಿಗೆ ಇತ್ತೀಚೆಗಿನ ವರ್ಷಗಳಲ್ಲಿ ಅಡಕೆ, ಅಂಜೂರ, ನೇರಳೆ ಮುಂತಾದ ವಿಶೇಷ ಬೆಳೆಗಳು ಪ್ರವೇಶ ಪಡೆದಿವೆ. ಅವುಗಳಲ್ಲಿ ಈಗಾಗಲೆ ಅಡಕೆ ಕೃಷಿ ವರ್ಷದಿಂದ ವರ್ಷಕ್ಕೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇವುಗಳ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡಿರುವುದು ಸೇಬು ಕೃಷಿ! ತಾಲೂಕಿನಲ್ಲಿ ನೀರಾವರಿ ವ್ಯವಸ್ಥೆಯನ್ನು ಹೊಂದಿರುವ 15-20 ರೈತರು ಸೇಬು ಸಸಿಗಳನ್ನು ನೆಟ್ಟಿದ್ದಾರೆ. 2 ವರ್ಷಗಳ ಹಿಂದೆ ನೆಟ್ಟಿದ್ದ ಗಿಡಗಳು ಈಗ ಫಲ ನೀಡತೊಡಗಿವೆ.

ತಾಲೂಕಿನ ಭುಜಂಗ ನಗರದ ರೈತ ಮೂಡೆ ಶೇಖರಪ್ಪ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಅಡಕೆ ಗಿಡಗಳ ನಡುವೆ ಸೇಬು ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಈ ಗಿಡಗಳು ಈ ವರ್ಷ ಫಲ ನೀಡತೊಡಗಿವೆ. ತಮ್ಮ ಸೇಬು ಕೃಷಿಯ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ರೈತ ಮೂಡೆ ಶೇಖರಪ್ಪನವರು ‘ಯೂಟ್ಯೂಬ್‌ನಲ್ಲಿ ನೋಡಿ ಸೇಬು ಕೃಷಿಯ ಬಗ್ಗೆ ಆಸಕ್ತಿ ತಾಳಿ, ಶಿರಾದಿಂದ 300 ಸೇಬು ಸಸಿಗಳನ್ನು ತಂದು ಒಂದು ಎಕರೆ ಅಡಕೆ ಬೆಳೆಯ ಜತೆ ನಾಟಿ ಮಾಡಿದ್ದೆವು. ಸಸಿ ನೆಟ್ಟು ಎರಡು ವರ್ಷಗಳಾಗಿವೆ. ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದೇವೆ. ಈ ವರ್ಷ ಸೇಬು ಗಿಡಗಳು ಫಲ ನೀಡತೊಡಗಿವೆ. ಹಣ್ಣುಗಳು ರುಚಿಕರವಾಗಿವೆ. ಕೆಲವೊಂದು ಗಿಡಗಳಲ್ಲಿ 20-30 ಕಾಯಿಗಳು ಬಿಟ್ಟಿದ್ದರೆ, ಕೆಲವೊಂದರಲ್ಲಿ 10-15 ಕಾಯಿಗಳು ಬಿಟ್ಟಿವೆ. ಕೆಲವೊಂದರಲ್ಲಿ ಕಾಯಿಗಳಿಲ್ಲ ಎಂದರು.

ಮಳೆಯಲ್ಲೇ ಹಂಪಿ ವೀಕ್ಷಿಸಿದ G-20 ರಾಷ್ಟ್ರಗಳ ಪ್ರತಿನಿಧಿಗಳು!

15-20 ರೈತರಿಂದ ಸೇಬು ಕೃಷಿ:

ಸಹಾಯಕ ತೋಟಗಾರಿಕೆ ನಿರ್ದೇಶಕ ಹನುಮಂತಪ್ಪ ಅವರು ಮಾತನಾಡಿ, ಸೇಬು ಕೃಷಿಗೆ 20-25 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರಬೇಕಾಗುತ್ತದೆ. ಅರೆ ಮಲೆನಾಡಿನಂತಿರುವ ತಾಲೂಕಿನಲ್ಲಿ ಈಗಾಗಲೆ ಅಡಕೆ ಗಿಡಗಳು ಉತ್ತಮ ಬೆಳವಣಿಗೆ ಕಂಡಿದೆ. ಇದೀಗ ತಾಲೂಕಿನಲ್ಲಿ 15-20 ರೈತರು ಸೇಬು ಗಿಡಗಳನ್ನು ಬೆಳೆಸಿದ್ದಾರೆ ಎಂದರು.

ಸಾಂಪ್ರದಾಯಿಕ ಬೆಳೆಗಳ ಜತೆಗೆ ಗಣಿ ನಾಡಿನ ರೈತರು ಹೊಸ ಮತ್ತು ವಿಶೇಷವಾದ ಬೆಳೆಗಳನ್ನು ಬೆಳೆಯುವ ಪ್ರಯತ್ನ ನಡೆಸಿ, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಇಂತಹ ವಿಶೇಷ ಬೆಳೆಗಳ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಸೇಬು ಕೃಷಿ ಈ ನಾಡಿನಲ್ಲಿ ಹೇಗೆ ತನ್ನ ಪ್ರಭಾವವನ್ನು ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ನೆಟ್ಟಿದ್ದ 300 ಗಿಡಗಳಲ್ಲಿ ವಾತಾವರಣದಲ್ಲಿನ ಬದಲಾವಣೆಯಿಂದ ಸುಮಾರು 120 ಗಿಡಗಳು ಒಣಗಿವೆ. ಈಗ ಪುನಃ 15-20 ಗಿಡಗಳು ಒಣಗುತ್ತಿವೆ. ಎಷ್ಟೇ ಔಷಧ ಸಿಂಪರಣೆ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ವರ್ಷ ಕೆಲವು ಗಿಡಗಳಲ್ಲಿ ಮಾತ್ರ ಕಾಯಿಗಳು ಬಿಟ್ಟಿರುವುದರಿಂದ ಅವುಗಳನ್ನು ಇನ್ನೂ ಮಾರಾಟ ಮಾಡಿಲ್ಲ. ಉತ್ತಮ ಫಸಲು ಬಂದರೆ ಅನುಕೂಲವಾಗಲಿದೆ. ಕಾದು ನೋಡಬೇಕಿದೆ ಅಂತ ಸೇಬುಹಣ್ಣು ಬೆಳೆಗಾರ ಮೂಡೆ ಶೇಖರಪ್ಪ ತಿಳಿಸಿದ್ದಾರೆ. 

Follow Us:
Download App:
  • android
  • ios