ಬೆಂಗಳೂರು(ಜು.19): ಕೊರೋನಾ ಸೋಂಕಿನಿಂದ ಮೃತಪಟ್ಟಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಿರ್ದಿಷ್ಟಅವಧಿಯೊಳಗೆ ಪೂರ್ಣಗೊಳ್ಳುವಂತೆ ಕಾಲಾವಧಿ ನಿಗದಿ ಮಾಡುವ ಹಾಗೂ ಪರೀಕ್ಷಾ ಫಲಿತಾಂಶ ತ್ವರಿತವಾಗಿ ಪಡೆಯಲು ಮೃತ ದೇಹಕ್ಕೂ ಆ್ಯಂಟಿಜನ್‌ ಪರೀಕ್ಷೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ. ಸ್ವಯಂ ಜಮೀನಿನಲ್ಲಿಯೂ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಸ್ಕಾರಕ್ಕೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಬದಲಾವಣೆ ತರಲು ಮುಂದಾಗಿದೆ. ಪ್ರಮುಖವಾಗಿ ಕೊರೋನಾ ಸೋಂಕಿತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ ಇನ್ನು ಮುಂದೆ ಬಿಬಿಎಂಪಿ ಅಧಿಕಾರಿ ಹೋಗಿ ದೃಢಿಕರಿಸುವ ಅವಶ್ಯಕತೆ ಇಲ್ಲ. ಬದಲಾಗಿ ಆಸ್ಪತ್ರೆಯ ವೈದ್ಯರೇ ದೃಢಿಕರಿಸಿದರೆ ಸಾಕು. ಇದರಿಂದ ಮೃತ ವ್ಯಕ್ತಿಯ ಅಂತ್ಯಕ್ರಿಯೆ ಪ್ರಕ್ರಿಯೆ ವೇಗವಾಗಿ ನಡೆಯಲಿದೆ. 

ಶಂಕಿತ ಮೃತರಿಗೂ ಆ್ಯಂಟಿಜೆನ್‌ ಟೆಸ್ಟ್‌:

ಕೊರೋನಾ ಸೋಂಕು ಶಂಕಿತರು ಮೃತಪಟ್ಟರೆ ಕೊರೋನಾ ಸೋಂಕಿನ ಸ್ವಾಬ್‌ ಪರೀಕ್ಷೆ ಫಲಿತಾಂಶ ಬರುವವರೆಗೆ ಅಂತ್ಯಕ್ರಿಯೆಗೆ ಅವಕಾಶ ದೊರೆಯುತ್ತಿರಲಿಲ್ಲ. ಈ ಫಲಿತಾಂಶ ಕೈ ಸೇರಲು ನಾಲ್ಕೈದು ದಿನ ವಿಳಂಬವಾಗುತ್ತಿತ್ತು. ಹೀಗಾಗಿ ಬಿಬಿಎಂಪಿ ಆ್ಯಂಟಿಜೆನ್‌ ಪರೀಕ್ಷೆ ಮಾಡುವುದಕ್ಕೆ ತೀರ್ಮಾನಿಸಿದೆ. ಇದರಿಂದ ಕೇವಲ 30 ನಿಮಿಷದಲ್ಲಿ ಫಲಿತಾಂಶ ಲಭ್ಯವಾಗಲಿದ್ದು, ಸೋಂಕು ಇಲ್ಲ ಎಂದು ತಿಳಿದರೆ ಕುಟುಂಬ ಸದಸ್ಯರೇ ಅಂತ್ಯಕ್ರಿಯೆ ಮಾಡಿಕೊಳ್ಳಬಹುದು. ಸೋಂಕು ದೃಢಪಟ್ಟರೆ ಮೃತ ದೇಹವನ್ನು ಸರ್ಕಾರದ ನಿಯಮ ಪ್ರಕಾರ ಅಂತ್ಯಕ್ರಿಯೆ ಮಾಡಲಾಗುತ್ತದೆ.

ಅಂತ್ಯಕ್ರಿಯೆಗೆ ಸಮಯ ನಿಗದಿ

ಕೊರೋನಾ ಸೋಂಕು ದೃಢಪಟ್ಟವ್ಯಕ್ತಿ ಮೃತಪಟ್ಟರೆ ಅಂತ್ಯಕ್ರಿಯೆ ತ್ವರಿತವಾಗಿ ಆಗುತ್ತಿಲ್ಲ ಎಂಬ ಸಾಕಷ್ಟುದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟರೆ ಆ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಇಂತಿಷ್ಟುಸಮಯದಲ್ಲಿ ಮುಗಿಸುವಂತೆ ಸಮಯ ನಿಗದಿ ಪಡಿಸಲು ಬಿಬಿಎಂಪಿ ಯೋಜಿಸಲಾಗುತ್ತಿದೆ.

ಸ್ವಯಂ ಜಮೀನಿನಲ್ಲಿಯೂ ಅಂತ್ಯಕ್ರಿಯೆಗೆ ಅವಕಾಶ

ಕೊರೋನಾ ಸೋಂಕಿತ ಮೃತಪಟ್ಟರೆ ಆ ವ್ಯಕ್ತಿಯನ್ನು ಬಿಬಿಎಂಪಿ ಸಿಬ್ಬಂದಿಯೇ ಚಿತಾಗಾರ ಅಥವಾ ರುದ್ರಭೂಮಿಗಳಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದರು. ಇದೀಗ ಮೃತರ ಸಂಬಂಧಿಕರು ತಮ್ಮ ಸ್ವಂತ ಜಮೀನಿನಲ್ಲಿ ಸೋಂಕಿನ ಅಂತ್ಯಕ್ರಿಯೆ ಮಾಡಲು ಮನವಿ ಮಾಡಿದರೆ, ಕೆಲವು ಷರತ್ತುಗಳ ಅಡಿಯಲ್ಲಿ ಕೊರೋನಾ ಸೋಂಕಿತ ಮೃತದೇಹವನ್ನು ಅಂತ್ಯಕ್ರಿಯೆಗೆ ಅವಕಾಶ ನೀಡಲು ತೀರ್ಮಾನಿಸಿದೆ.

ಮನೆಯಿಂದ ಮೃತದೇಹ ಆಸ್ಪತ್ರೆಗೆ ತರಬೇಕಾಗಿಲ್ಲ

ಕೊರೋನಾ ಸೋಂಕು ಅಥವಾ ಇನ್ನಿತರ ಆರೋಗ್ಯ ಸಮಸ್ಯೆಯಿಂದ ವ್ಯಕ್ತಿ ಮನೆಯಲ್ಲಿಯೇ ಮೃತಪಟ್ಟರೆ ಅಂತಹ ಮೃತದೇಹವನ್ನು ಮತ್ತೆ ಆಸ್ಪತ್ರೆಗೆ ರವಾನೆ ಮಾಡುವ ಅವಶ್ಯಕತೆ ಇಲ್ಲ. ಸಾವಿನ ಬಗ್ಗೆ ಬಿಬಿಎಂಪಿಗೆ ವಿಷಯ ತಿಳಿಸಿದರೆ ಸಾಕು. ಪಾಲಿಕೆ ವೈದ್ಯಾಧಿಕಾರಿಗಳೇ ಮೃತರ ಮನೆಗೆ ಬಂದು ಕೊರೋನಾ ಸೋಂಕು ಪರೀಕ್ಷೆ ಮಾಡಿ ಅಲ್ಲಿಂದಲೇ ಮುಂದಿನ ಕ್ರಮಕ್ಕೆ ಅವಕಾಶ ನೀಡಲಿದ್ದಾರೆ.

ಪತಿ ಸೋಂಕಿಗೆ ಬಲಿಯಾಗಿ ವಾರದಲ್ಲಿ ಪತ್ನಿ, ಬಿಎಂಟಿಸಿ ಸಿಬ್ಬಂದಿ ಕೊರೋನಾಗೆ ಬಲಿ

ಕೊರೋನಾ ಸೋಂಕಿನಿಂದ ಮೃತಪಟ್ಟವರಿಗೆ ಸರ್ಕಾರದ ನಿಯಮಾನುಸಾರ ಅಂತ್ಯಕ್ರಿಯೆ ಮಾಡುತ್ತೇವೆ. ಚಿತಾಗಾರ ಮತ್ತು ಮಣ್ಣಿನಲ್ಲಿ ಹೂಳುವುದಕ್ಕೆ ಎರಡೂ ಅವಕಾಶವಿದೆ. ಬಿಬಿಎಂಪಿಯ ಎಲ್ಲ ಚಿತಾಗಾರದಲ್ಲಿ ಕೊರೋನಾ ಸೋಂಕಿತ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಅಂತ್ಯಕ್ರಿಯೆ ಸಂಬಂಧಿಸಿದಂತೆ ಕೆಲವು ನಿಯಮ ಸರಳಗೊಳಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್‌ ಹೇಳಿದ್ದಾರೆ.