ಮಂಗಳೂರು ಮಹಾನಗರ ಪಾಲಿಕೆ: ಚುನಾವಣೆ ನಡೆಸದೆ ಮೀಸಲಾತಿ ಪ್ರಕಟ..!
ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಪ್ರಕರಣವೊಂದರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್- ಉಪಮೇಯರ್ ಚುನಾವಣೆಯನ್ನು ತಡೆಹಿಡಿಯಲಾಗಿತ್ತು.
ಮಂಗಳೂರು(ಆ.25): ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ಗೊಂದಲ ಈಗ ಮತ್ತಷ್ಟುಕಗ್ಗಂಟಾಗಿದೆ. ಪಾಲಿಕೆಯ 23ನೇ ಅವಧಿಯ (2022-23) ಮೇಯರ್ ಚುನಾವಣೆ ಇನ್ನೂ ನಡೆಯದೆ ಬಾಕಿ ಉಳಿದಿರುವಾಗಲೇ 24ನೇ ಅವಧಿಯ ಮೇಯರ್- ಉಪಮೇಯರ್ ಮೀಸಲಾತಿ ಪ್ರಕಟಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಪ್ರಕರಣವೊಂದರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್- ಉಪಮೇಯರ್ ಚುನಾವಣೆಯನ್ನು ತಡೆಹಿಡಿಯಲಾಗಿತ್ತು. ಹೀಗಾಗಿ 22ನೇ ಅವಧಿಯ ಮೇಯರ್ ಪ್ರೇಮಾನಂದ ಶೆಟ್ಟಿಹಾಗೂ ಉಪಮೇಯರ್ ಸುಮಂಗಲಾ ಅವರು ಅವಧಿ ಪೂರ್ಣಗೊಳಿಸಿದ ಬಳಿಕವೂ ಈಗಲೂ ಅದೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. 23ನೇ ಅವಧಿಯ ಚುನಾವಣೆ ಪ್ರಕ್ರಿಯೆ ನಡೆಸದೆ 24ನೇ ಅವಧಿಯ ಚುನಾವಣೆಗೆ ಮೀಸಲಾತಿ ಪ್ರಕಟಿಸಿರುವುದು ಇನ್ನಷ್ಟುಗೊಂದಲಕ್ಕೆ ಕಾರಣವಾಗಿದೆ.
ಮಂಗಳೂರು ಪಾಲಿಕೆಯಲ್ಲಿ ಈಗ ಹೊಸಬರ ಹವಾ!
‘ಸಾಮಾನ್ಯ’ವಾದ ಮೀಸಲಾತಿ: 23ನೇ ಅವಧಿಯ ಮೇಯರ್ ಸ್ಥಾನ ‘ಸಾಮಾನ್ಯ’, ಉಪಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಿರಿಸಿ ಆಗಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ 24ನೇ ಅವಧಿಯ ಮೇಯರ್ ಹುದ್ದೆಯನ್ನು ಮತ್ತೆ ‘ಸಾಮಾನ್ಯ’ಕ್ಕೆ ಹಾಗೂ ಉಪಮೇಯರ್ ಹುದ್ದೆಯನ್ನು ‘ಸಾಮಾನ್ಯ ಮಹಿಳೆ’ಗೆ ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಇವೆರಡು ಅವಧಿಗೂ ಮೊದಲು 22ನೇ ಅವಧಿಯಲ್ಲೂ ಮೇಯರ್ ಸ್ಥಾನವನ್ನು ‘ಸಾಮಾನ್ಯ’ ಅಭ್ಯರ್ಥಿಗೇ ಮೀಸಲಿರಿಸಲಾಗಿತ್ತು. ಇದು ಕೂಡ ಚರ್ಚೆಗೆ ಗ್ರಾಸವಾಗಿದೆ.
ಇದೀಗ 24ನೇ ಅವಧಿಯ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ 23ನೇ ಅವಧಿಯ ಮೇಯರ್ ಚುನಾವಣೆ ಮಾಡುವ ನಿಟ್ಟಿನಲ್ಲಿ ಪ್ರಾದೇಶಿಕ ಆಯುಕ್ತರಿಗೆ ಕೋರಲಾಗಿದೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಸ್ಪಷ್ಟನೆ ಸಿಗಲಿದೆ ಅಂತ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.