ಹುಬ್ಬಳ್ಳಿ: ಬರೋಬ್ಬರಿ 10 ತಿಂಗಳ ಬಳಿಕ ಸಿದ್ಧಾರೂಢ ಮಠದಲ್ಲಿ ಅನ್ನದಾಸೋಹ ಪ್ರಾರಂಭ
ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ಮತ್ತೆ ಪ್ರಾರಂಭವಾಯ್ತು ಅನ್ನದಾಸೋಹ| 10 ತಿಂಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಪ್ರಸಾದ ವಿತರಣೆ ಪ್ರಾರಂಭ| ಕಳೆದ ವರ್ಷ ಮಾರ್ಚ್‌ನಲ್ಲಿ ಕೊರೋನಾ ವಕ್ಕರಿಸಿದ ಮೇಲೆ ಅನ್ನದಾಸೋಹ ಸ್ಥಗಿತ| ಕೊರೋನಾ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಅನ್ನದಾಸೋಹಕ್ಕೆ ಮತ್ತೆ ಚಾಲನೆ|
ಹುಬ್ಬಳ್ಳಿ(ಫೆ.04): ಉತ್ತರ ಕರ್ನಾಟಕದ ಪ್ರಮುಖ ಆಧ್ಯಾತ್ಮಿಕ ಕೇಂದ್ರವೆನಿಸಿರುವ ಇಲ್ಲಿನ ಶ್ರೀ ಸಿದ್ಧಾರೂಢ ಮಠದಲ್ಲಿ ಕೊರೋನಾದಿಂದಾಗಿ ಸ್ಥಗಿತಗೊಂಡಿದ್ದ ಅನ್ನದಾಸೋಹ ಮತ್ತೆ ಪ್ರಾರಂಭವಾಗಿದೆ. ಫೆ. 1ರಿಂದ ಕೋವಿಡ್ ನಿಯಮಗಳೊಂದಿಗೆ ಅನ್ನದಾಸೋಹವನ್ನು ಮತ್ತೆ ಶುರು ಮಾಡಿದಂತಾಗಿದೆ. ಇದರಿಂದ ಬರೋಬ್ಬರಿ 10 ತಿಂಗಳ ಬಳಿಕ ಮಠದಲ್ಲಿ ಅನ್ನದಾಸೋಹ ಪ್ರಾರಂಭವಾದಂತಾಗಿದೆ.
ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿಗೆ ಬಂದು ನಾಲ್ಕೈದು ವರ್ಷಗಳ ಬಳಿಕ ಮಠಕ್ಕೆ ಬಂದ ನಂತರದಿಂದ ಅನ್ನದಾಸೋಹ, ಜ್ಞಾನದಾಸೋಹಕ್ಕೆ ಚಾಲನೆ ನೀಡಿದ್ದರು. ಆಗಿನಿಂದಲೂ ಅನ್ನದಾಸೋಹ ಬಂದ್ ಆಗಿರಲಿಲ್ಲ. 140 ವರ್ಷಗಳಿಗೂ ಅಧಿಕ ಕಾಲದಿಂದ ನಿರಂತರವಾಗಿ ನಡೆದುಕೊಂಡು ಬಂದಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ಕೊರೋನಾ ವಕ್ಕರಿಸಿದ ಮೇಲೆ ಇಲ್ಲಿನ ಅನ್ನದಾಸೋಹ ಸ್ಥಗಿತಗೊಳಿಸಲಾಗಿತ್ತು. ಮಾರ್ಚ್ 22ರಿಂದ ಸ್ಥಗಿತಗೊಂಡಿತ್ತು. ಏಪ್ರಿಲ್, ಮೇನಲ್ಲೂ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಆದರೆ ಜೂನ್‌ನಿಂದ ಮಠದ ಹೊರಗೆ ಬಂದ ಭಕ್ತರಿಗೆ ಬರೀ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ಮೊದಲಿನಂತೆ ಅನ್ನದಾಸೋಹಕ್ಕೆ ಚಾಲನೆ ನೀಡಿರಲಿಲ್ಲ. ಇದೀಗ ಕೊರೋನಾ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಅನ್ನದಾಸೋಹಕ್ಕೆ ಮತ್ತೆ ಚಾಲನೆ ನೀಡಲಾಗಿದೆ. ಮೊದಲ ದಿನವಾಗಿದ್ದ ಸೋಮವಾರ (ಫೆ. 1) ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅನ್ನದಾಸೋಹ ನಡೆಸಲಾಗಿತ್ತು.
ಸಿದ್ಧಾರೂಢ ಮಠದಲ್ಲಿ ಸರಳವಾಗಿ ಜರುಗಿದ ತೆಪ್ಪೋತ್ಸವ
ಮಂಗಳವಾರದಿಂದ ಪೂರ್ಣ ಪ್ರಮಾಣದಲ್ಲಿ ಅನ್ನದಾಸೋಹ ನಡೆಸಲಾಗುತ್ತಿದೆ. ಪ್ರತಿ ಪಂಕ್ತಿಯಲ್ಲಿ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 5 ಅಡಿಗಳಿಗೆ ಪ್ರತ್ಯೇಕ ಬಾಕ್ಸ್‌ಗಳನ್ನು ಬರೆದು ಅದರಲ್ಲಿಯೇ ಕುಳಿತು ಊಟ ಮಾಡಿಸುವ ವ್ಯವಸ್ಥೆ ಮಾಡಲಾಗಿದೆ. 100 ಜನ ಊಟ ಮಾಡಿಕೊಂಡು ಹೊರಹೋದ ಮೇಲೆಯೇ ಮುಂದಿನ ನೂರು ಜನರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಮೊದಲ ದಿನ ಪ್ರಸಾದ ಸ್ವೀಕರಿಸಿದವರ ಸಂಖ್ಯೆ ಕಡಿಮೆಯಿತ್ತು. ಆದರೆ ಮಂಗಳವಾರ ಹಾಗೂ ಬುಧವಾರ ಸರಿಸುಮಾರು 1500ರವರೆಗೂ ಜನರೂ ಪ್ರಸಾದ ಸ್ವೀಕರಿಸಿದ್ದಾರೆ. ಬೆಳಗ್ಗೆ 7.45ಕ್ಕೆ ಪ್ರಸಾದ ಪ್ರಾರಂಭವಾಗಿ ರಾತ್ರಿ 10.45ರವರೆಗೆ ನಿರಂತರ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಮಠದಲ್ಲಿ ಮತ್ತೆ ಅನ್ನದಾಸೋಹ ಪ್ರಾರಂಭವಾಗಿರುವುದು ಭಕ್ತರಲ್ಲಿ ಸಂತಸವನ್ನುಂಟು ಮಾಡಿದೆ.
ಹೌದು ಕೊರೋನಾ ನಿಯಮಗಳನ್ನು ಅಳವಡಿಸಿಕೊಂಡು ಅನ್ನದಾಸೋಹ ಪ್ರಾರಂಭಿಸಲಾಗಿದೆ. ಪ್ರತಿ ಪಂಕ್ತಿಯಲ್ಲಿ ಬರೀ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಸಹ ಯಾವುದೇ ಗೊಂದಲ ಮಾಡದೇ ಶಾಂತರೀತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಸಾದ ಸ್ವೀಕರಿಸುತ್ತಿದ್ದಾರೆ ಎಂದು ಶ್ರೀಮಠದ ಟ್ರಸ್ಟ್ ಚೇರಮನ್ ಡಿ.ಡಿ. ಮಾಳಗಿ ಹೇಳಿದ್ದಾರೆ.