ದೇವಾಲಯದಲ್ಲಿ ಡಿಸಿ, ಎಸ್ ಪಿ ಕಾವಲು : ಅಜ್ಞಾತ ಸ್ಥಳದಲ್ಲಿ ಕೋಣ ಬಲಿ
ಇತ್ತ ದೇವಾಲಯದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿ ಕಾವಲು ಕುಳಿತಿದ್ದರೆ ಅತ್ತ ಅಜ್ಞಾತ ಸ್ಥಳಕ್ಕೆ ತೆರಳಿ ಕೋಣದ ಬಲಿ ಕೊಟ್ಟಿದ್ದಾರೆ.
ದಾವಣಗೆರೆ [ಮಾ.05]: ಅಜ್ಞಾತ ಸ್ಥಳವೊಂದರಲ್ಲಿ ಬುಧವಾರ ನಸುಕಿನ ಜಾವ ಬರೋಬ್ಬರಿ 13 ಏಟಿಗೆ ಕೋಣ ಬಲಿ ನೀಡುವ ಮೂಲಕ ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ರಂಗೇರಿತು.
ಪ್ರಾಣಿ ಬಲಿ ನಿಷೇಧ ಕಾಯ್ದೆ, ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ದೇವಸ್ಥಾನ ಸುತ್ತಮುತ್ತಲ ಪ್ರದೇಶದಲ್ಲಿ ಸಾವಿರಾರು ಪೊಲೀಸ್ ಸಿಬ್ಬಂದಿ ನಿಯೋಜನೆ ಮಧ್ಯೆಯೂ ಅಜ್ಞಾತ ಸ್ಥಳದಲ್ಲಿ ಕೋಣದ ತಲೆ ಕತ್ತರಿಸುವ ಮೂಲಕ ಅನಾದಿ ಕಾಲದಿಂದ ಬಂದ ಬಲಿ ಆಚರಣೆ ಮುಂದುವರಿಯಿತು.
ಪೊಲೀಸರ ಸರ್ಪಗಾವಲಿನ ಮಧ್ಯೆಯೂ ಹತ್ತಾರು ಸಾವಿರ ಜನರು ದುಗ್ಗಮ್ಮ ದೇವಸ್ಥಾನ ಬಳಿ ಬಲಿ ಪ್ರಕ್ರಿಯೆ ವೀಕ್ಷಿಸಲೆಂದು ಸೇರಿದ್ದರು. ಭಾರೀ ಜನಸ್ತೋಮದಲ್ಲಿ ಸಿಸಿ ಕ್ಯಾಮೆರಾಗಳ ಕಣ್ಗಾವಲು, ಪೊಲೀಸರ ಹದ್ದುಗಣ್ಣಿನ ಮಧ್ಯೆಯೂ ತಾಡಪಾಲು ಹಾಕಿದ್ದ ವಾಹನದಲ್ಲಿ ಕಟ್ಟಲಾಗಿದ್ದ ದುಗ್ಗಮ್ಮನ ಕೋಣವನ್ನು ವಿವಿಧ ರಸ್ತೆಗಳಲ್ಲಿ ಕೊಂಡೊಯ್ದು, ಅಂತಿಮವಾಗಿ ಅಜ್ಞಾತ ಸ್ಥಳದಲ್ಲಿ ದೇವಿ ಹೆಸರಿನಲ್ಲಿ ಬಲಿ ಕೊಡಲಾಯಿತು.
ಪ್ರತಿ ವರ್ಷವೂ ಕೋಣ ಬಲಿಗೆ ಇರುತ್ತಿದ್ದ ವ್ಯಕ್ತಿಗಳ ಮೇಲೆ ಪೊಲೀಸ್ ಇಲಾಖೆ ನಿಗಾವಹಿಸಿತ್ತು. ಅಲ್ಲದೆ, ಕೆಲವರಿಗಂತೂ ಬೆಂಬಿಡದಂತೆ ಪೊಲೀಸರು ಬೆನ್ನು ಹತ್ತಿದ್ದರು. ಆದರೆ, ಮಂಗಳವಾರ ಸಂಜೆಯೇ ನಗರಕ್ಕೆ ಆಗಮಿಸಿದ್ದ ಅಜ್ಞಾತ ಲಾರಿಯೊಂದರಲ್ಲಿ ಸುತ್ತಲೂ ಟಾರ್ಪಾಲಿನ್ ಕಟ್ಟಿ, ಒಳಗೆ ಕೋಣ ಕಟ್ಟಿಡಲಾಗಿತ್ತು.
ಕೋಣ ಬಲಿ ತಡೆಯಲು ದೇವಸ್ಥಾನದಲ್ಲಿ ಕಾವಲು ಕುಳಿತ ಡಿಸಿ, ಎಸ್ಪಿ...
ಸಮಯ ನೋಡಿಕೊಂಡು, ಕಾಲಾವಕಾಶಕ್ಕೆ ಕಾದು, ಬುಧವಾರ ನಸುಕಿನ 3.10ಕ್ಕೆ ಸರಿಯಾಗಿ ಅಜ್ಞಾತ ಸ್ಥಳವೊಂದರ ಕತ್ತಲಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ 13 ಹೊಡೆತಕ್ಕೆ ಧರೆಗುರುಳಿದ ದುಗ್ಗಮ್ಮನ ಕೋಣದ ರುಂಡವನ್ನು ಪುಟ್ಟಿಯಲ್ಲಿ ಇಟ್ಟುಕೊಂಡು, ಅದರ ಬಾಯಿಗೆ ಕೋಣದ ಕಾಲನ್ನು ಕತ್ತರಿಸಿ ಇಡುವ ಮೂಲಕ ರಣಕೇಕೆ ಹಾಕಿಕೊಂಡು ಜನರು ಮುಂದೆ ಸಾಗಿದರು.
ಕೋಣ ಬಲಿಯಾದ ವಿಚಾರ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸುವಷ್ಟರಲ್ಲಿ ಕೋಣದ ರುಂಡ ಒಂದು ಕಡೆ, ದೇಹದ ಭಾಗವೇ ಒಂದು ಕಡೆ ಸಾಗಿಸಿಯಾಗಿತ್ತು. ಕೋಣ ಬಲಿಯಾಗುತ್ತಿದ್ದಂತೆಯೇ ಮುಂದಿನ ಧಾರ್ಮಿಕ ಪ್ರಕ್ರಿಯೆ ಎಲ್ಲೆಲ್ಲಿ ನಡೆಯಬೇಕಿದ್ದವೋ ಅಲ್ಲಲ್ಲಿ ನಡೆದವು.
ಅಲ್ಲದೆ, ಕೋಣ ಬಲಿಯಾಗುವ ಹೊತ್ತಿಗೂ ಮುಂಚೆ ಅರ್ಚಕರೂ ಸೇರಿ ಎಲ್ಲರೂ ಹೊರಬಂದು, ದೇವಸ್ಥಾನದ ಬಾಗಿಲು, ಗೇಟುಗಳನ್ನು ಬಂದ್ ಮಾಡಿದರು. ಯಾವಾಗ ಕೋಣ ಬಲಿ ಕೊಟ್ಟವಿಚಾರ ಗೊತ್ತಾಯಿತೋ ಆ ನಂತರ ನಸುಕಿನ ಹೊತ್ತಿಗೆ ದೇವಸ್ಥಾನದಲ್ಲಿ ಧಾರ್ಮಿಕ ಪ್ರಕ್ರಿಯೆ ಮುಂದುವರಿದವು. ಆ ನಂತರವಷ್ಟೇ ದೇವಿಗೆ ಅಭಿಷೇಕ, ಅಲಂಕಾರ, ಪೂಜೆಯಾದಿಗಳು ಶ್ರದ್ಧಾ, ಭಕ್ತಿಯಿಂದ ನೆರವೇರಿದವು.
ಪ್ರಾಣಿ ಬಲಿ ನಿಷೇಧ, ಪ್ರಾಣಿ ಬಲಿ ಕೊಡಬಾರದೆಂಬ ಹೈಕೋರ್ಟ್ ಆದೇಶದ ಮಧ್ಯೆಯೂ ದೇವಸ್ಥಾನ ಸಮೀಪ ಅಲ್ಲದಿದ್ದರೂ, ಅಜ್ಞಾತ ಸ್ಥಳವೊಂದರಲ್ಲಿ ದುಗ್ಗಮ್ಮನ ಕೋಣ ಬಲಿಯಾಗಿದ್ದಂತೂ ಸತ್ಯ. ಇದನ್ನು ಪುಷ್ಟೀಕರಿಸುವಂತೆ ಕೋಣವನ್ನು ಬಲಿ ಕೊಡುವ ದೃಶ್ಯಗಳೂ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡತೊಡಗಿವೆ. ದುಗ್ಗಮ್ಮನಿಗೆ ಕೋಣ ಬಲಿ ಕೊಟ್ಟರಷ್ಟೇ ದೇವಿ ಸಂತೃಪ್ತಿಯಾಗುತ್ತಾಳೆಂದು ನಂಬಿದ ಭಕ್ತರ ಮೊಗದಲ್ಲಿ ಮಂದಹಾಸ ಮೂಡಿತ್ತು.
ಕೋಣ ಬಲಿ ಕೊಡದೆ ದುಗ್ಗಮ್ಮನ ಜಾತ್ರೆ ನಡೆಯದು ಎಂಬ ಸ್ಥಳೀಯರ ಪದ್ಧತಿಯಂತೆ ಕೋಣವಂತೂ ಬಲಿ ಆಯ್ತು. ಕೋಣದ ಬಲಿ ನಂತರ ಕೋಣದ ರಕ್ತದಲ್ಲಿ ಜೋಳವನ್ನು ಬೆರೆಸಿ, ನಗರದ ಗಡಿ ಭಾಗಕ್ಕೆ ಸಾವಿರಾರು ಸಂಖ್ಯೆಯಲ್ಲಿ ಯುವಕರು ಚರಗ ಚೆಲ್ಲುತ್ತಾ, ಹುಲಿಗ್ಯೋ....,ಉಧೋ..ಉಧೋ...ಎಂದು ಕೂಗುತ್ತಾ ಪುಟ್ಟಿಹಿಡಿದು ಓಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರತಿ 2 ವರ್ಷಕ್ಕೊಮ್ಮೆ ನಡೆಯುವ ದುಗ್ಗಮ್ಮನ ಜಾತ್ರೆಯಲ್ಲಿ ಪ್ರಾಣಿ ಬಲಿಯನ್ನು ಜಿಲ್ಲಾಡಳಿತ ಸಂಪೂರ್ಣ ನಿಷೇಧಿಸಿತ್ತು. ಆದರೂ, ಆಡಳಿತ ಯಂತ್ರ, ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ, ಅಜ್ಞಾತ ಸ್ಥಳವೊಂದರಲ್ಲಿ ದೇವಿಯ ಕೋಣದ ಬಲಿ ಪ್ರಕ್ರಿಯೆ ಆಗಿ, ಚರಗ ಚೆಲ್ಲುವ ಆಚರಣೆಯೂ ಮುಗಿಯಿತು. ಇದರೊಂದಿಗೆ ದಾವಣಗೆರೆ ಮಹಾನಗರಾದ್ಯಂತ ದುಗ್ಗಮ್ಮನ ಜಾತ್ರೆಯೂ ತೀವ್ರತೆ ಪಡೆಯಿತು.
ಸ್ವತಃ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಜೊತೆಯಾಗಿಯೇ ಇದ್ದು, ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದ ಮೇಲೆ ನಿಗಾ ಇಟ್ಟಿದ್ದರು. ಅಲ್ಲದೆ, ಎಎಸ್ಪಿ, ಡಿವೈಎಸ್ಪಿಗಳು, ವೃತ್ತ ನಿರೀಕ್ಷಕರು, ಸಬ್‌ಇನ್‌ಸ್ಪೆಕ್ಟರ್‌ಗಳು, ಸಾವಿರಾರು ಎಎಸ್‌ಐ, ಮುಖ್ಯಪೇದೆ, ಪೇದೆಗಳು, ಹೋಂಗಾರ್ಡ್ಸ್ ಸಿಬ್ಬಂದಿ ಸಹ ಪ್ರಾಣಿ ಬಲಿ ತಡೆಗೆ, ಬಂದೋಬಸ್ತ್ ಗಾಗಿ ನಿಯೋಜಿಸಲ್ಪಟ್ಟಿದ್ದರು.
ದುಗ್ಗಮ್ಮನ ಗುಡಿ ಬಳಿಯೇ ಕೋಣ ಬಲಿ ಆಗುತ್ತದೆಂಬ ಸುದ್ದಿ ಹಬ್ಬಿದ್ದರಿಂದ ಪೊಲೀಸ್ ಇಲಾಖೆಯೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಲ್ಲೆಲ್ಲಾ ವ್ಯಾಪಕ ಬಂದೋಬಸ್‌್ತ ಮಾಡಿತ್ತು. ಆದರೆ, ಆಡಳಿತ ಯಂತ್ರದ ಕಣ್ತಪ್ಪಿಸಿ, ಅಜ್ಞಾತ ಸ್ಥಳದಲ್ಲಿ ಕೋಣ ಬಲಿ ಕೊಟ್ಟು, ಅದರ ತಲೆಯ ಮೇಲೆ ದೇವಿ ಹೆಸರಿನಲ್ಲಿ ದೀಪ ಹಚ್ಚಿ, ನೈವೇದ್ಯ ಅರ್ಪಿಸಲಾಯಿತು. ಒಟ್ಟಾರೆ 2 ವರ್ಷಕ್ಕೊಮ್ಮೆ ನಡೆಯುವ ದುಗ್ಗಮ್ಮನ ಜಾತ್ರೆಗೆ ದೇವಿ ಹೆಸರಿನಲ್ಲಿ ಮತ್ತೊಂದು ಕೋಣ ಬಲಿಯಾದಂತಾಗಿದೆ.
ಇದು ನಗರ ದೇವತೆ ದುಗ್ಗಮ್ಮನ ಕೋಣದ ಬಲಿ ವಿಚಾರವಾದರೆ, ಎಂ.ಬಿ.ಕೇರಿ, ವಿನೋಬ ನಗರದ ಚೌಡೇಶ್ವರಿ ದೇವಸ್ಥಾನ, ದಾವಣಗೆರೆ ತಾಲೂಕಿನ ಹದಡಿ ಗ್ರಾಮದ ಮಾರಿಕಾಂಬ ದೇವಿ ಜಾತ್ರೆಯಲ್ಲೂ ಪ್ರಾಣಿ ಬಲಿ ನೀಡಲಾಗಿದೆ. ಲಕ್ಷಾಂತರ, ಹತ್ತಾರು ಸಾವಿರ ಸಂಖ್ಯೆಯಲ್ಲಿ ಭಕ್ತರು ಸೇರುವ ಜಾತ್ರೆಯಲ್ಲಿ ಪ್ರಾಣಿ ಬಲಿ ನೀಡದಿದ್ದರೆ ದೇವಿ ಸಂತುಷ್ಟಳಾಗುವುದಿಲ್ಲ ಎಂಬ ನಂಬಿಕೆ ಜನರ ಮನಸ್ಸಿನಲ್ಲೂ ಆಳವಾಗಿ ಬೇರೂರಿದೆ.