'ಸಚಿವೆ ಶಶಿಕಲಾ ಜೊಲ್ಲೆಯನ್ನು ಸಂಪುಟದಿಂದ ಕೈಬಿಡಿ'
* ಮೊಟ್ಟೆ ಖರೀದಿಯಲ್ಲಿ ಅವ್ಯವಹಾರದ ಆರೋಪ
* ಅಂಗನವಾಡಿ ಕಾರ್ಯಕರ್ತೆಯರಿಂದ ಬಳ್ಳಾರಿಯಲ್ಲಿ ಪ್ರತಿಭಟನೆ
* ಅಂಗನವಾಡಿ ನೌಕರರಿಗೆ ಪರಿಹಾರ ಸೌಲಭ್ಯ ಕೂಡಲೇ ವಿತರಿಸಬೇಕು
ಬಳ್ಳಾರಿ(ಆ.18): ಮೊಟ್ಟೆ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿರುವ ಇಲಾಖೆಯ ಸಚಿವೆಯನ್ನು ಸಚಿವ ಸಂಪುಟದಿಂದ ಹೊರಗಿಡಬೇಕು. ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆಗಳನ್ನು ಕುಕ್ಕುಟೊದ್ಯಮ ಮಹಾಮಂಡಳಿಯಿಂದಲೇ ಸರಬರಾಜು ಮಾಡಬೇಕು. ಕೊರೋನಾ ವಾರಿಯರ್ಸ್‌ಗಳಾದ ಅಂಗನವಾಡಿ ನೌಕರರಿಗೆ ಪರಿಹಾರ ಸೌಲಭ್ಯಗಳನ್ನು ಕೂಡಲೇ ವಿತರಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಅಂಗನವಾಡಿ ಕೇಂದ್ರಕ್ಕೆ ಬರುವ ಕೊಡಬೇಕಾದ ಮೊಟ್ಟೆಯ ಖರೀದಿಗೆ ಹಣ ಮುಂಗಡವಾಗಿ ನೀಡುತ್ತಿಲ್ಲ. ಮೊಟ್ಟೆ ಹಣ ಹೆಚ್ಚಳವಾದಾಗ ಬಂದ ಹಣದಲ್ಲಿ ಅಡ್ಜಸ್ಟ್ ಮಾಡಿ ಎಂದು ಅಧಿಕಾರಿಗಳು ಹೇಳುತ್ತಾರೆ. ಮೊಟ್ಟೆ ಖರೀದಿಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಇದರಿಂದ ಅಂಗನವಾಡಿ ನೌಕರರು ಸಮಸ್ಯೆ ಎದುರಿಸುವಂತಾಗಿದೆ. ಈ ಹಿಂದೆ ಮೊಟ್ಟೆ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಶಶಿಕಲಾ ಜೊಲ್ಲೆ ಅವರಿಗೆ ಮತ್ತೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದು, ಸರ್ಕಾರ ಸಚಿವೆಯನ್ನು ಸಂಪುಟದಿಂದ ಹೊರಗಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಾನು ಯಾವ ತಪ್ಪನ್ನೂ ಮಾಡಿಲ್ಲ, ತನಿಖೆಗೂ ಸಿದ್ಧ: ಶಶಿಕಲಾ ಜೊಲ್ಲೆ
ಅಂಗನವಾಡಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ಜಿಲ್ಲಾಧ್ಯಕ್ಷೆ ಉಮಾದೇವಿ ಮಾತನಾಡಿ, ಮೊಟ್ಟೆಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವುದರಿಂದ ಕುಕ್ಕುಟೊದ್ಯಮ ಮಹಾಮಂಡಳಿಯಿಂದಲೇ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆಗಳನ್ನು ಸರಬರಾಜು ಮಾಡಬೇಕು. ಮೊಟ್ಟೆ ಖರೀದಿಸಿಲು ಮುಂಗಡವಾಗಿ ಹಣ ನೀಡಬೇಕು. ಕೊರೋನಾ ಸಂದರ್ಭದಲ್ಲಿ ನಿಧನರಾದ ಅಂಗನವಾಡಿ ನೌಕರ ಕುಟುಂಬದವರಿಗೆ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿ ಹುದ್ದೆ ನೀಡಬೇಕು. ಮೊಟ್ಟೆಗಳನ್ನು ಆಹಾರ ಪದಾರ್ಥಗಳ ಜೊತೆಯಲ್ಲಿ ಅಂಗನವಾಡಿಗಳಿಗೆ ಸರಬರಾಜು ಮಾಡಬೇಕು. 2016ರಿಂದ ನಿವೃತ್ತಿಯಾದ ಸುಮಾರು 7166 ಅಂಗನವಾಡಿ ನೌಕರರಿಗೆ ಬಾಕಿ ಇರುವ ಇಡುಗಂಟು ಕೊಡಬೇಕು. 2015 ರಿಂದ ಹೊಸದಾಗಿ ನೇಮಕರಾಗಿರುವವರಿಗೆ ಐಎಲ್ಸಿ ಆಧಾರಿತ ನಿವೃತ್ತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ. ಸತ್ಯಬಾಬು, ತಾಲೂಕು ಅಧ್ಯಕ್ಷೆ ಕಿರಣ ಕುಮಾರಿ, ಪ್ರಧಾನ ಕಾರ್ಯದರ್ಶಿ ಮಲ್ಲಮ್ಮ, ಜಿಲ್ಲಾ ಖಜಾಂಚಿ ಶಕುಂತಲಾ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಜೆ.ಚಂದ್ರಕುಮಾರಿ ಸೇರಿದಂತೆ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.