ಬೆಂಗಳೂರು [ಜು.1] :  ಲೋಕಸಭಾ ಚುನಾವಣೆಯ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಆರು ಬಾರಿ ಗೆಲುವು ಸಾಧಿಸಿದ್ದ ಅನಂತಕುಮಾರ್‌ ಅವರನ್ನು ಆ ಕ್ಷೇತ್ರದ ಬಿಜೆಪಿ ಮುಖಂಡರು ಮರೆತುಬಿಟ್ಟರೇ?

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಘಟಕಗಳ ವತಿಯಿಂದ ಚುನಾವಣೆಯ ಗೆಲುವಿನ ಹಿನ್ನೆಲೆಯಲ್ಲಿ ಕೃತಜ್ಞತಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದ ವೇದಿಕೆಯ ಮೇಲಾಗಲಿ ಅಥವಾ ಸಭಾಂಗಣದಲ್ಲಾಗಲಿ ಅನಂತಕುಮಾರ್‌ ಅವರ ಒಂದು ಸಣ್ಣ ಭಾವಚಿತ್ರವನ್ನೂ ಹಾಕಿರಲಿಲ್ಲ. ಅಲ್ಲದೆ, ಅನಂತಕುಮಾರ್‌ ಅವರ ಪತ್ನಿ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅವರಿಗೆ ಆಹ್ವಾನವನ್ನೇ ನೀಡಿರಲಿಲ್ಲ ಎಂಬ ಸಂಗತಿ ಇದೀಗ ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹಾಗೆ ನೋಡಿದರೆ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈಗ ಅಧಿಕಾರದ ಗದ್ದುಗೆಯಲ್ಲಿ ಕುಳಿತಿರುವ ವಿಧಾನಸಭಾ ಸದಸ್ಯ ವಿ.ಸೋಮಣ್ಣ, ವಿಧಾನ ಪರಿಷತ್‌ ಸದಸ್ಯ ಎ.ದೇವೇಗೌಡ ಹಾಗೂ ಅನೇಕ ಬಿಬಿಎಂಪಿ ಸದಸ್ಯರ ಗೆಲುವಿನಲ್ಲಿ ಅನಂತಕುಮಾರ್‌ ಅವರ ಪಾತ್ರ ದೊಡ್ಡದಾಗಿತ್ತು. ಇವರೆಲ್ಲರ ಗೆಲುವಿಗಾಗಿ ಅನಂತಕುಮಾರ್‌ ಅವರ ಹಗಲಿರುಳು ಓಡಾಡಿದ್ದರು. ಆದರೆ, ಅನಂತ್‌ ಅಕಾಲಿಕ ನಿಧನದ ನಂತರ ಎದುರಾದ ಮೊದಲ ಚುನಾವಣೆಯಲ್ಲಿ ಪಕ್ಷಕ್ಕೆ ಆ ಗೆಲುವು ಸಿಕ್ಕರೂ ಅವರನ್ನು ಮಾತ್ರ ಮರೆತುಬಿಟ್ಟರು ಎಂಬ ಅಸಮಾಧಾನ ಕಾಣಿಸಿಕೊಂಡಿದೆ.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಕೆಲವು ಮುಖಂಡರು ಅನಂತಕುಮಾರ್‌ ಅವರನ್ನು ಸ್ಮರಿಸಿಕೊಂಡರು. ಭಾವಚಿತ್ರ ಇಲ್ಲದ ಬಗ್ಗೆ ಇತರ ಮುಖಂಡರು ಪ್ರಶ್ನಿಸಲೂ ಹೋಗಲಿಲ್ಲ. ಈ ಬೆಳವಣಿಗೆ ಬಗ್ಗೆ ಅನಂತಕುಮಾರ್‌ ಅವರ ಬೆಂಬಲಿಗರು ತೀವ್ರ ಬೇಸರಗೊಂಡಿದ್ದಾರೆ ಎಂದು ತಿಳಿದು ಬಂದಿದೆ.