ಬೆಂಗಳೂರು [ಮಾ.07]:  ‘ಓದಲು ಕಲಿಸಿದರೆ ಮಗಳು ಏನೇನೋ ಅವಾಂತರ ಮಾಡಿಕೊಂಡಿದ್ದಾಳೆ. ನಾವು ಬುದ್ಧಿ ಹೇಳಿದರೂ ಆಕೆ ಕೇಳದೆ ಹೋದಳು. ಈಗ ಜೈಲು ಸೇರುವಂತಾಗಿದೆ..!’

ಹೀಗೆ ಪಶ್ಚಿಮ ವಿಭಾಗದ ಪೊಲೀಸರ ಮುಂದೆ ಪಾಕಿಸ್ತಾನಕ್ಕೆ ಜಿಂದಾಬಾದ್‌ ಕೂಗಿದ ವಿವಾದದಲ್ಲಿ ಬಂಧಿತಳಾಗಿರುವ ವಿದ್ಯಾರ್ಥಿನಿ ಅಮೂಲ್ಯ ಲಿಯೋನ ತಾಯಿ ದುಃಖ ವ್ಯಕ್ತಪಡಿಸಿದ್ದಾರೆ.

ತಪ್ಪನ್ನು ಸಮರ್ಥಿಸುವುದಿಲ್ಲ:  ಈ ಪ್ರಕರಣದ ಸಂಬಂಧ ತನಿಖಾಧಿಕಾರಿ ನೋಟಿಸ್‌ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಲಿಯೋನ ತಾಯಿ, ಮಗಳ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ನಾವು ಮಗಳ ತಪ್ಪನ್ನು ಸಮರ್ಥಿಸುವುದಿಲ್ಲ. ದೇಶ ವಿರೋಧಿ ನಡವಳಿಕೆಯನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

‘ನಾವು ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಸಮೀಪ ಗ್ರಾಮದವರು. ಮಗಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಆಸೆ ಇತ್ತು. ಹಾಗಾಗಿ ಆಕೆಯ ಓದಿಗೆ ಪ್ರೋತ್ಸಾಹಿಸಿದ್ದೇವು. ಮೈಸೂರಿನ ಬಳಿಕ ಬೆಂಗಳೂರಿಗೆ ಓದುವ ಸಲುವಾಗಿ ಮಗಳನ್ನು ಕಳುಹಿಸಿದ್ದೇವು. ಆದರೆ ಏನೇನೋ ಅವಾಂತರ ಮಾಡಿಕೊಂಡಿದ್ದಾಳೆ’ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.

ಅಮೂಲ್ಯ ಲಿಯೋನಾ ಬಂಧನ ಅವಧಿ ವಿಸ್ತರಣೆ...

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ನೊಂದಣಿ ಅಭಿಯಾನ (ಎನ್‌ಆರ್‌ಸಿ) ಹೀಗೆ ಸರ್ಕಾರದ ವಿರುದ್ಧ ಹೋರಾಟ ಎಲ್ಲ ಬಿಟ್ಟು ಓದಿನ ಕಡೆ ಲಕ್ಷ್ಯ ಕೊಡುವಂತೆ ಮಗಳಿಗೆ (ಅಮೂಲ್ಯ) ಬುದ್ಧಿ ಮಾತು ಹೇಳಲಾಗಿತ್ತು. ಆದರೆ ನಮ್ಮ ಮಾತು ಕೇಳದೆ ಮನಸ್ಸಿನಂತೆ ನಡೆದುಕೊಂಡಳು. ಮುಂದೆ ಈ ರೀತಿ ನಡೆದುಕೊಳ್ಳದಂತೆ ಅವಳಿಗೆ ತಿಳಿ ಹೇಳುತ್ತೇವೆ. ತಪ್ಪು ಮಾಡಿದ್ದಾಳೆ. ಆದರೆ ತಿದ್ದಿಕೊಳ್ಳುವ ಅವಕಾಶ ಸಹ ನೀಡಿದರೆ ಬದಲಾಗಬಹುದು ಎಂದು ಅಮೂಲ್ಯ ತಾಯಿ ಕಣ್ಣೀರಿಟ್ಟಿರುವುದಾಗಿ ಮೂಲಗಳು ಹೇಳಿವೆ.

ತಂದೆ ಗೈರು:  ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಅಮೂಲ್ಯ ಪೂರ್ವಾಪರ ಮಾಹಿತಿ ಕಲೆ ಹಾಕುತ್ತಿರುವ ಪಶ್ಚಿಮ ವಿಭಾಗದ ಪೊಲೀಸರು, ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಆಕೆಯ ಹೆತ್ತವರಿಗೆ ನೋಟಿಸ್‌ ಜಾರಿಗೊಳಿಸಿದ್ದರು. ಅದರಂತೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಆಕೆ ತಾಯಿ ಹೇಳಿಕೆ ದಾಖಲಿಸಿದ್ದು, ಗೈರಾಗಿರುವ ಅಮೂಲ್ಯ ತಂದೆಗೆ ಮತ್ತೆ ನೋಟಿಸ್‌ ಜಾರಿಗೊಳಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಆರ್ದ್ರಾ ಸಹ ಇದ್ದಳು? :  ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಕೂಗಿದ ಕಾರ್ಯಕ್ರಮದಲ್ಲಿ ಸ್ವತಂತ್ರ ಕಾಶ್ಮೀರ ಫಲಕ ಪ್ರದರ್ಶನ ಪ್ರಕರಣದ ಆರೋಪಿ ಆದ್ರ್ರಾ ಕೂಡಾ ಇದ್ದಳು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿ ಹೋರಾಟದಲ್ಲಿ ಅಮೂಲ್ಯ ಮತ್ತು ಆದ್ರ್ರಾ ಸಕ್ರಿಯವಾಗಿದ್ದರು. ಈ ರಾರ‍ಯಲಿಗಳಲ್ಲಿ ಅಮೂಲ್ಯ ಪ್ರಧಾನ ಭಾಷಣಕಾರಳಾಗಿ ಗುರುತಿಸಿಕೊಂಡಿದ್ದಳು. ಅಂತೆಯೇ ಫೆ.20ರಂದು ಫ್ರೀಡಂ ಪಾರ್ಕ್ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನಾ ಕಾರ್ಯಕ್ರಮಕ್ಕೆ ಅಮೂಲ್ಯ ಆಹ್ವಾನಿತಳಾಗಿದ್ದಳು. ಆದರೆ ಆದ್ರ್ರಾ ಸಭಿಕರ ಸಾಲಿನಲ್ಲಿ ಕುಳಿತಿದ್ದಳು ಎಂಬ ಮಾಹಿತಿ ಸಿಕ್ಕಿದೆ ಎಂದು ಉನ್ನತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.