Asianet Suvarna News Asianet Suvarna News

ಮೂರ್ನಾಲ್ಕು ವರ್ಷಗಳಲ್ಲಿ ಆಲಮಟ್ಟಿ ಅಣೆಕಟ್ಟೆ ಎತ್ತರ: ಸಿಎಂ

ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸುವುದರಿಂದ 20 ಗ್ರಾಮಗಳು ಬಾಧಿತವಾಗಲಿವೆ| 1.30 ಲಕ್ಷ ಎಕರೆ ಜಮೀನು ಮುಳುಗಡೆ ಸೇರಿದಂತೆ ಪುನರ್ವಸತಿ ಹಾಗೂ ಪುನರ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು| ಈ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಬರುವ ಬಜೆಟ್‌ನಲ್ಲಿ 20,000 ಕೋಟಿ ಅನುದಾನ ಮೀಸಲಿಡಲಾಗುವುದು ಎಂದು ಸಿಎಂ ಯಡಿಯೋರಪ್ಪ ಅವರು ತಿಳಿಸಿದ್ದಾರೆ| 

Almatti Dam Height Next Three Four Years
Author
Bengaluru, First Published Oct 6, 2019, 2:48 PM IST

ವಿಜಯಪುರ(ಅ.5): ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಯೋಜನೆಯನ್ನು ಬರುವ ಮೂರ್ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಹೇಳಿದ್ದಾರೆ.

ಶನಿವಾರ ಆಲಮಟ್ಟಿಯಲ್ಲಿ ಕೃಷ್ಣಾ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸುವುದರಿಂದ 20 ಗ್ರಾಮಗಳು ಬಾಧಿತವಾಗಲಿವೆ. 1.30 ಲಕ್ಷ ಎಕರೆ ಜಮೀನು ಮುಳುಗಡೆ ಸೇರಿದಂತೆ ಪುನರ್ವಸತಿ ಹಾಗೂ ಪುನರ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಬರುವ ಬಜೆಟ್‌ನಲ್ಲಿ 20,000 ಕೋಟಿ ಅನುದಾನ ಮೀಸಲಿಡಲಾಗುವುದು ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಯೋಜನೆಗೆ ತಗಲುವ ಸಂಪೂರ್ಣ ಖರ್ಚು ವೆಚ್ಚದ ಕ್ರಿಯಾಯೋಜನೆ ರೂಪಿಸಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆದ್ಯತೆ ಮೇರೆಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸಬೂಬು ಹೇಳದೆ ನೀರು ಬಿಡಲು ಅವಕಾಶವಿದ್ದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು.ಹಣಕಾಸಿನ ಅವಶ್ಯವಿದ್ದಲ್ಲಿ ನೀಡಲಾಗುವುದು. ಜನಪ್ರತಿನಿಧಿಗಳು ಕೂಡ ಯೋಜನೆಗಳ ಸಮರ್ಪಕ ಜಾರಿಗಾಗಿ ಅಧಿಕಾರಿಗಳಿಂದ ಕೆಲಸ ಪಡೆಯಬೇಕು ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಅನುದಾನ ದುರ್ಬಳಕೆಯಾಗಿರುವ ಬಗ್ಗೆ ಶಾಸಕರು ದೂರು ನೀಡಿರುವ ಹಿನ್ನೆಲೆಯಲ್ಲಿ ತಾಂತ್ರಿಕ ತಜ್ಞರನ್ನು ನೇಮಿಸಿ ಸೂಕ್ತ ಪರಿಶೀಲಿಸ​ಲಾ​ಗು​ವುದು. ಅಲ್ಲದೆ ಯಾವುದೇ ದೂರುಗಳಿದ್ದಲ್ಲಿ ಸಲ್ಲಿಸುವಂತೆ ತಿಳಿಸಿ​ದರು.

ನೆರೆ ಹಾವಳಿಯಿಂದ ಮುದ್ದೇಬಿಹಾಳ ತಾಲೂಕಿನ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಬಾಧಿತವಾಗಿರುವ ಗ್ರಾಮಗಳ ಸ್ಥಳಾಂತರಕ್ಕೆ ಸಂಬಂಧಪಟ್ಟಂತೆ ಆಯಾ ಗ್ರಾಮಗಳ ಗ್ರಾಮಸ್ಥರು ಸ್ಥಳಾಂತರಗೊಳ್ಳಲು ಸಿದ್ಧಗೊಂಡಲ್ಲಿ ಸ್ಥಳಾಂತರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಜಮಖಂಡಿ, ತೇರದಾಳ, ಮುಧೋಳ ಹಾಗೂ ಬೀಳಗಿಗೆ ನೀರು ಪೂರೈಸುವ ಸಸಾಲಟ್ಟಿ ಏತ ನೀರಾವರಿ ಯೋಜನೆ ಸಮರ್ಪಕವಾಗಿ ಜಾರಿಯಾಗದೆ ಸರ್ಕಾರಕ್ಕೆ ಅನುದಾನ ಹಿಂತಿರುಗಿ ಹೋಗಿದೆ. ಈ ಯೋಜನೆಗೆ ಸಂಬಂಧಪಟ್ಟಂತೆ ಯೋಜನಾ ವರದಿ ಸಚಿವ ಸಂಪುಟಕ್ಕೆ ಸಲ್ಲಿಸುವಂತೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ನೆರೆ ಸಂತ್ರಸ್ತ ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಣೆ, ಮಾಜಿ ಸಚಿವ ಶಿವಾನಂದ ಪಾಟೀಲ, ಕೃಷ್ಣಾ ಮೇಲ್ದಂಡೆ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಅನುದಾನ ಸಮರ್ಪಕ ಬಳಕೆ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಕೃಷ್ಣಾ ಮತ್ತು ಭೀಮಾ ನದಿಗಳ ಪ್ರವಾಹದಿಂದ ಹಾನಿಗೊಳಗಾದ ಬೆಳೆಗೆ ಸೂಕ್ತ ಪರಿಹಾರ ಹಾಗೂ ಪ್ರವಾಹ ಪರಿಸ್ಥಿತಿಯ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಸಮನ್ವಯ ಕೊರತೆ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ, ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ, ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಬಾಧಿತವಾಗಿರುವ ಗ್ರಾಮಗಳ ಸ್ಥಳಾಂತರ, ಸುರಪುರ ಶಾಸಕ ರಾಜುಗೌಡ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ 33 ಕೋಟಿ ವೆಚ್ಚಕ್ಕೆ ಅನುಮೋದನೆ, ಶಾಸಕ ವೀರಣ್ಣ ಚರಂತಿಮಠ, ಬಾಗಲಕೋಟೆ ಜಿಲ್ಲೆಯ ನೀರಾವರಿ ಯೋಜನೆ ಮತ್ತು ನೆರೆ ಪರಿಹಾರಕ್ಕೆ ಸಂಬಂಧಪಟ್ಟ ವಿಷಯಗಳ ಕುರಿತು ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಜಯಪುರ-ಬಾಗಲಕೋಟೆಗೆ ಜಿಲ್ಲೆಯ ರೈತರಿಗೆ ದಿನದ 24 ಗಂಟೆ 3 ಫೇಸ್‌ ವಿದ್ಯುತ್‌ ಸರಬರಾಜು ಹಾಗೂ ಕೈಗಾ ಮಾದರಿಯಲ್ಲಿ ವಿಜಯಪುರ- ಬಾಗಲಕೋಟೆ ಜಿಲ್ಲೆಗಳಿಗೆ ಎನ್‌ಟಿಪಿಸಿಯಿಂದ ದಿನದ 24 ತಾಸು ವಿದ್ಯುತ್‌ ಪೂರೈಸುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
 

Follow Us:
Download App:
  • android
  • ios