ಕೊಡಗು: ಅಂಚೆ ಮತಪತ್ರದ ಮೂಲಕ ಮತದಾನಕ್ಕೆ ಅವಕಾಶ

ಅಂಚೆ ಮತದಾರನು ಒಂದು ಬಾರಿ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸುವುದಾಗಿ ಆಯ್ಕೆ ಮಾಡಿಕೊಂಡಲ್ಲಿ, ಯಾವುದೇ ಕಾರಣಕ್ಕೂ ಮತಗಟ್ಟೆಗೆ ಹೋಗಿ ಮತಚಲಾಯಿಸಲು ಆಗುವುದಿಲ್ಲ: ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ. 

Allowed for Voting by Postal Ballot in Kodagu Says DC BC Satish grg

ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಮಾ.21): ಎಂಬತ್ತು ವರ್ಷ ಮೇಲ್ಪಟ್ಟ ಹಿರಿಯರು, ವಿಕಲಚೇತನರು, ಕೋವಿಡ್-19 ಸೋಂಕಿತ ವ್ಯಕ್ತಿಗಳು ಹಾಗೂ ಅಗತ್ಯ ಸೇವೆಯಲ್ಲಿರುವವರು, ಮತಗಟ್ಟೆ ಕೇಂದ್ರಕ್ಕೆ ತೆರಳಲು ಆಗದಿರುವ ಮತದಾರರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿದೆ.  ಈ ಅವಕಾಶವನ್ನು ಅರ್ಹರು ಪಡೆದುಕೊಳ್ಳಬಹುದಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರಮುಖರ ಜೊತೆ ಇಂದು(ಮಂಗಳವಾರ) ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಮಾತನಾಡಿದರು. 

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ವಿಧಾನಸಭಾ ಚುನಾವಣೆ 2023 ರ ಸಂಬಂಧ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನರು, ಕೋವಿಡ್-19 ನಿಂದ ಬಾದಿತ ವ್ಯಕ್ತಿಗಳು ಹಾಗೂ ಅಗತ್ಯ ಸೇವೆಯಲ್ಲಿರುವ ವಿದ್ಯುತ್, ಬಿಎಸ್‍ಎನ್‍ಎಲ್, ರೈಲ್ವೆ, ದೂರದರ್ಶನ, ಆಕಾಶವಾಣಿ, ಆರೋಗ್ಯ, ವಿಮಾನಯಾನ, ರಾಜ್ಯ ರಸ್ತೆ ಸಾರಿಗೆ ನಿಗಮ, ಅಗ್ನಿಶಾಮಕ, ಮಾಧ್ಯಮ, ಸಂಚಾರಿ ಪೊಲೀಸ್ ಹಾಗೂ ಆಂಬ್ಯುಲೆನ್ಸ್‌ನಲ್ಲಿ ಸೇವೆ ನಿರ್ವಹಿಸುತ್ತಿರುವವರು ‘ಅಂಚೆ ಮತಪತ್ರ’ ಪಡೆದು ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು. 

ಕೊಡಗಿಗೆ ಬಂದು ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಿ, ಸಿದ್ದರಾಮಯ್ಯಗೆ ಶಾಸಕ ಅಪ್ಪಚ್ಚು ರಂಜನ್ ಸವಾಲ್

ಬೂತ್ ಮಟ್ಟದ ಅಧಿಕಾರಿಗಳು ಮತದಾನ ಕೇಂದ್ರವಿರುವ ಪ್ರದೇಶದಲ್ಲಿ ಚುನಾವಣಾಧಿಕಾರಿಯು ಒದಗಿಸಿದ ವಿವರಗಳ ಅನುಸಾರ ಎವಿಎಸ್‍ಸಿ ಮತ್ತು ಎವಿಸಿಓ ಪ್ರವರ್ಗಗಳಲ್ಲಿನ ಗೈರು ಹಾಜರಿ ಮತದಾರರ ಮನೆಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ಮತದಾರರಿಗೆ ನಮೂನೆ 12 ಡಿ ಯನ್ನು ವಿತರಿಸಿ, ನಂತರ ಮತದಾರರಿಂದ ನಮೂನೆ 12 ಡಿ ಯನ್ನು ಪಡೆಯಲಾಗುವುದು. ಈ ಉದ್ದೇಶಕ್ಕಾಗಿಯೇ ಪ್ರತ್ಯೇಕ ಪಟ್ಟಿ ತಯಾರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

ಸೆಕ್ಟರ್ ಅಧಿಕಾರಿಗಳು ನಮೂನೆ 12 ಡಿ ಅರ್ಜಿಗಳನ್ನು ವಿತರಿಸುವ ಹಾಗೂ ಸಂಗ್ರಹಿಸುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಈ ಎಲ್ಲಾ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆಯನ್ನು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದು ಡಾ.ಬಿ.ಸಿ.ಸತೀಶ ಅವರು ನುಡಿದರು. 

‘ಅಂಚೆ ಮತದಾರನು ಒಂದು ಬಾರಿ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸುವುದಾಗಿ ಆಯ್ಕೆ ಮಾಡಿಕೊಂಡಲ್ಲಿ, ಯಾವುದೇ ಕಾರಣಕ್ಕೂ ಮತಗಟ್ಟೆಗೆ ಹೋಗಿ ಮತಚಲಾಯಿಸಲು ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸ್ಪಷ್ಟಪಡಿಸಿದರು.’ 

ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕದಂದು, ಆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ಚುನಾವಣೆಯು ಮುಕ್ತಾಯಗೊಳ್ಳುವವರೆಗೂ ಆ ಪಟ್ಟಿಯಲ್ಲಿ ಯಾವುದೇ ಹೆಚ್ಚುವರಿ ಸೇರ್ಪಡೆ ಅಥವಾ ತೆಗೆದುಹಾಕುವಿಕೆ ಮಾಡುವುದಿಲ್ಲ ಎಂದರು. 

ಕೋವಿಡ್-19 ಪ್ರವರ್ಗಕ್ಕೆ ಸೇರಿದ ಗೈರು ಹಾಜರಿ ಮತದಾರರ ಸಂದರ್ಭದಲ್ಲಿ ಅಂಚೆ ಮತದಾನಕ್ಕಾಗಿ ನಮೂನೆ-12 ಡಿ ಯನ್ನು ಅನುಮೋದಿಸುವ ಮುಂಚೆ ಚುನಾವಣಾಧಿಕಾರಿಯು ಸಕ್ಷಮ ಪ್ರಾಧಿಕಾರವು ನೀಡಿದ ಪ್ರಮಾಣ ಪತ್ರ ಪರಿಶೀಲಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

ಚುನಾವಣಾಧಿಕಾರಿಯು ಮತದಾರರ ಪಟ್ಟಿ ಗುರುತು ಮಾಡಿದ ಪ್ರತಿಯನ್ನು ಅವರ ಹೆಸರಿನ ಮುಂದೆ ‘ಪಿಬಿ’ (ಪೊಸ್ಟಲ್ ಬ್ಯಾಲೆಟ್) ಎಂದು ನಮೂದಿಸುತ್ತಾರೆ. ಅಂಚೆ ಮತಪತ್ರವನ್ನು ನೀಡಲಾದ ಮತದಾರನಿಗೆ ಮತದಾನ ಕೇಂದ್ರದಲ್ಲಿ ಮತ ಹಾಕಲು ಅನುಮತಿ ನೀಡುವುದಿಲ್ಲ ಎಂದರು. 

ಕಾಂಗ್ರೆಸ್ ಪಕ್ಷದ ತೆನ್ನಿರಾ ಮೈನಾ ಮತ್ತು ಬಿಜೆಪಿಯ ಸತೀಶ್ ಅವರು ಮತದಾನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಲವು ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಚುನಾವಣಾ ಆಯೋಗಕ್ಕೆ ಕೈಜೋಡಿಸಲಾಗುವುದು. 80 ವರ್ಷ ಮೇಲ್ಪಟ್ಟವರು ಹಾಗೂ ಇತರರನ್ನು ಸಂಪರ್ಕಿಸಿ ಮತಗಟ್ಟೆಗೆ ತೆರಳಲು ಅಸಾಧ್ಯವಾಗಿರುವವರಿಗೆ ಅಂಚೆ ಮತಪತ್ರ ಪಡೆದು ಮತದಾನ ಮಾಡಲು ಉತ್ತೇಜಿಸಲಾಗುವುದು ಎಂದು ಅವರು ಹೇಳಿದರು.
ಕೊಡಗು ಜಿಲ್ಲೆಯ ಹಲವು ಹಾಡಿಯ ಕುಟುಂಬಗಳು ಇನ್ನೂ ಸಹ ಮತದಾರರ ಗುರುತಿನ ಚೀಟಿ ಪಡೆದಿಲ್ಲ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ ಎಂದು ತೆನ್ನಿರ ಮೈನಾ ಅವರು ಕೋರಿದರು.

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಎರಡು ಬಾರಿ ಮನೆ ಮನೆ ಸಮೀಕ್ಷೆ ಮಾಡಲಾಗಿದೆ. ಈ ಹಿಂದೆ ನವೆಂಬರ್ ತಿಂಗಳಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸಂಬಂಧ ಅಭಿಯಾನ ನಡೆದಿತ್ತು. ಈಗಲೂ ಸಹ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡದಿರುವವರು, ಹೆಸರು ಸೇರ್ಪಡೆ ಮಾಡಬೇಕು ಎಂದು ತಿಳಿಸಿದರು.  

ಕಾಂಗ್ರೆಸ್‌ನಿಂದ ಆದಿವಾಸಿಗಳಿಗಾಗಿಯೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ: ವಿರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ

ಹಾಡಿಗಳಲ್ಲಿ ಈಗಾಗಲೇ ಎರಡು ಬಾರಿ ಮನೆ ಮನೆಗೆ ಭೇಟಿ ನೀಡಿ 1002 ಕ್ಕೂ ಹೆಚ್ಚು ಮಂದಿಯ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಇನ್ನೂ ಯಾರಾದರೂ 18 ವರ್ಷ ಮೇಲ್ಪಟ್ಟವರು ಬಿಟ್ಟು ಹೋಗಿದ್ದಲ್ಲಿ ಹತ್ತಿರದ ಬಿಎಲ್‍ಒಗಳನ್ನು ಅಥವಾ ವೋಟರ್ ಹೆಲ್ಪ್‌ಲೈನ್ ಆ್ಯಪ್ ಮೂಲಕ ಹೆಸರು ನೋಂದಾಯಿಸಬಹುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಬಾನಾ ಎಂ.ಶೇಕ್, ಚುನಾವಣಾ ತಹಶೀಲ್ದಾರ್ ರವಿಶಂಕರ ಇತರರು ಇದ್ದರು.

Latest Videos
Follow Us:
Download App:
  • android
  • ios