ಕೊಬ್ಬರಿಗೆ 20 ಸಾವಿರ ನಿಗದಿಪಡಿಸಿ: ಬೆಮಲ್
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕೊಬ್ಬರಿ ಬೆಲೆ ಪಾತಾಳಕ್ಕೆ ಇಳಿದಿದ್ದು, ಸರ್ಕಾರ ಕೂಡಲೇ ಪ್ರತಿ ಕ್ವಿಂಟಲ್ ಕೊಬ್ಬರಿಗೆ 20 ಸಾವಿರ ರು.ಗಳನ್ನು ನಿಗದಿ ಮಾಡಬೇಕೆಂದು ಒತ್ತಾಯಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಬೆಮಲ್ ಕಾಂತರಾಜ್ ಮತ್ತು ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡರ ನೇತೃತ್ವದಲ್ಲಿ ತಾಲೂಕು ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಲಾಯಿ
ತುರುವೇಕೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕೊಬ್ಬರಿ ಬೆಲೆ ಪಾತಾಳಕ್ಕೆ ಇಳಿದಿದ್ದು, ಸರ್ಕಾರ ಕೂಡಲೇ ಪ್ರತಿ ಕ್ವಿಂಟಲ್ ಕೊಬ್ಬರಿಗೆ 20 ಸಾವಿರ ರು.ಗಳನ್ನು ನಿಗದಿ ಮಾಡಬೇಕೆಂದು ಒತ್ತಾಯಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಬೆಮಲ್ ಕಾಂತರಾಜ್ ಮತ್ತು ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡರ ನೇತೃತ್ವದಲ್ಲಿ ತಾಲೂಕು ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು.
ತಾಲೂಕಿನ ಪ್ರಧಾನ ಬೆಳೆಯಾಗಿರುವ ಕೊಬ್ಬರಿ ಮತ್ತು ಅಡಿಕೆ ಬೆಲೆ ತೀವ್ರ ಕುಸಿತ ಕಂಡಿದೆ. ಇದನ್ನೇ ನಂಬಿ ಬದುಕುತ್ತಿರುವ ತೆಂಗು ಮತ್ತು ಅಡಿಕೆ ಬೆಳೆಗಾರರ ಬದುಕು ಬೀದಿಗೆ ಬಿದ್ದಿದೆ. ಹಿಂದಿನ ವರ್ಷ ಕ್ವಿಂಟಲ್ ಕೊಬರಿ ಬೆಲೆ 18 ಸಾವಿರ ಇದ್ದದ್ದು ಇದೀಗ 9000 ರು.ಗೆ ಇಳಿದಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ. ಈ ವೇಳೆ ರೈತರಿಗೆ ಬೆಂಬಲವಾಗಿ ನಿಲ್ಲಬೇಕಿರುವ ರಾಜ್ಯ ಸರ್ಕಾರ ಜಾಣ ಕುರುಡುತನ ತಾಳಿದೆ. ಕೂಡಲೇ ಕೊಬ್ಬರಿಗೆ 15 ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು ಮತ್ತು ಪ್ರೋತ್ಸಾಹ ಧನವಾಗಿ ಪ್ರತಿ ಕ್ವಿಂಟಲ್ ಗೆ 5 ಸಾವಿರ ರು. ಗಳನ್ನು ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ರೈತರೊಡಗೂಡಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಮಾಡುವುದಾಗಿ ಬೆಮೆಲ್ ಕಾಂತರಾಜು ಎಚ್ಚರಿಕೆ ನೀಡಿದರು.
ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಆಡಳಿತ ನಡೆಸುತ್ತಿವೆ. ಇವರ ದುರಾಡಳಿತದಿಂದಾಗಿ ರೈತಾಪಿಗಳ ಜೀವನ ಸಂಕಷ್ಠಕ್ಕೆ ಸಿಲುಕಿದೆ. ಮುಂಬರುವ ಚುನಾವಣೆಯಲ್ಲಿ ಜನರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.
ತಾಲೂಕು ಕಚೇರಿಯ ಉಪ ತಹಸೀಲ್ದಾರ್ ಸುನಿಲ್ ಕುಮಾರ್‌ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್, ನಾಗೇಶ್, ಕಾಂಗ್ರೆಸ್ ಮುಖಂಡರಾದ ನಂಜುಂಡಪ್ಪ, ಹನುಮಂತಯ್ಯ, ಶಶಿಶೇಖರ್, ಕೆಂಪರಾಜು, ಲಕ್ಷ್ಮೇದೇವಮ್ಮ, ರೇವಣ್ಣ, ಶ್ರೀನಿವಾಸ್, ತಿಮ್ಮೇಶ್, ಗೋಣಿ ತುಮಕೂರು ಲಕ್ಷ್ಮೇಕಾಂತ್, ಟಾಕೀಸ್‌ಸತೀಶ್, ಹುಣೀಸೇಮಾರನಹಳ್ಳಿ ನಟರಾಜು ಸೇರಿದಂತೆ ಇತರರು ಇದ್ದರು.
10 ಟಿವಿಕೆ 2 - ತುರುವೇಕೆರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೊಬ್ಬರಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ನೇತೃತ್ವದಲ್ಲಿ ತಾಲೂಕು ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.