Asianet Suvarna News

ತುಳುನಾಡ ಜನಪ್ರಿಯ ಕಂಬಳ ಈ ಸಲ ನಡೆಯುತ್ತಾ?

ಡಿಸೆಂಬರ್‌ ಬಂತು ಅಂದರೆ ತುಳುನಾಡಿನಲ್ಲಿ ಕಂಬಳದ್ದೇ ಮಾತು. ಕಳೆದ ಕೆಲವು ವರ್ಷಗಳಿಂದ ವಿವಾದವೂ ಈ ಜನಪದ ಕ್ರೀಡೆಯ ಜೊತೆಗೆ ಥಳಕು ಹಾಕಿಕೊಂಡಿದೆ. ಪ್ರಾಣಿ ದಯಾ ಸಂಘ ಈ ಸಲವೂ ಕಂಬಳಕ್ಕೆ ತಡೆ ಕೋರಿ ಕೋರ್ಟ್‌ ಮೆಟ್ಟಿಲೇರಿದೆ. ಇತ್ತ ಸ್ಥಳೀಯರು ಕಂಬಳ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಅನ್ನುತ್ತಿದ್ದಾರೆ. ಅಷ್ಟಕ್ಕೂ ಯಾಕೀ ವಿವಾದ, ಕಂಬಳ ಹೇಗೆ ನಡೆಯುತ್ತೆ ಅನ್ನೋದರ ಬಗ್ಗೆ ಈ ಲೇಖನ.

All you need to know about kambala festival in Tulunadu karnataka
Author
Bangalore, First Published Nov 26, 2019, 2:05 PM IST
  • Facebook
  • Twitter
  • Whatsapp

ಧೀರಜ್‌ ಪೊಯ್ಯೆಕಂಡ

ಕಂಬಳ ಕೇವಲ ಜಾನಪದ ಕ್ರೀಡೆಯಲ್ಲ, ಇದು ತುಳುನಾಡಿನ ಕೃಷಿ ಬದುಕಿನ ಅವಿಭಾಜ್ಯ ಅಂಗ ಅನ್ನುತ್ತಾರೆ ಇಲ್ಲಿನ ಹಿರಿಯರು. ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ವರ್ಷಕ್ಕೆ ಸುಮಾರು 230 ಕಂಬಳಗಳು ನಡೆಯುತ್ತವೆ. ನವೆಂಬರ್‌ ಅಂತ್ಯದಿಂದ ಮಾಚ್‌ರ್‍ವರೆಗೆ ಕಂಬಳ ಆಯೋಜನೆಗೊಳ್ಳುತ್ತದೆ. ಕಂಬಳ ಗದ್ದೆಯಲ್ಲಿ ಒಂಟಿ ಗದ್ದೆಯ ಕಂಬಳ ಮತ್ತು ಜೋಡಿ ಗದ್ದೆ ಅಥವಾ ಜೋಡು ಕರೆ ಕಂಬಳ ಎನ್ನುವ ಎರಡು ವಿಧಗಳಿವೆ. ಕಂಬಳದ ಓಟದಲ್ಲಿ ಕೆನೆಹಲಗೆ ಓಟ, ಅಡ್ಡ ಹಲಗೆ ಓಟ, ನೇಗಿಲು ಓಟ, ಹಗ್ಗದ ಓಟ ಎಂಬಿತ್ಯಾದಿ ವಿಧಗಳಿವೆ.

ಓಟಕ್ಕೆ ನಿಂತ್ರೆ ಮೀರಿಸುವವರೇ ಇಲ್ಲ; ಇವನೇ ಕಂಬಳದ ಸೂಪರ್ ಸ್ಟಾರ್

ತುಳುನಾಡಿನ ಪ್ರಮುಖ ಕಂಬಳಗಳು

ಲವ-ಕುಶ (ಮಿಯಾರು), ಸೂರ್ಯ-ಚಂದ್ರ ಕಂಬಳ (ವೇಣೂರು, ಶಿರ್ವ, ಬಾರಾಡಿ, ಬಂಗಾಡಿ, ತಲಪಾಡಿ), ಕೋಟಿ-ಚೆನ್ನಯ (ಮೂಡುಬಿದಿರೆ, ಪುತ್ತೂರು), ಜಯ-ವಿಜಯ (ಈದು, ಜಪ್ಪಿನಮೊಗರು), ವಿಜಯ-ವಿಕ್ರಮ (ಉಪ್ಪಿನಂಗಡಿ), ನೇತ್ರಾವತಿ-ಫಲ್ಗುಣಿ (ಪಿಲಿಕುಳ), ವೀರ-ವಿಕ್ರಮ (ಹೊಕ್ಕಾಡಿಗೋಳಿ), ಕಾಂತಬಾರೆ-ಬೂದಬಾರೆ (ಐಕಳ), ಮೂಡು-ಪಡು (ಮೂಲ್ಕಿ, ಕಟಪಾಡಿ), ಮತ್ಸ್ಯೇಂದ್ರನಾಥ-ಗೋರಕನಾಥ (ಕದ್ರಿ), ಕ್ಷೇತ್ರಪಾಲ-ನಾಗರಾಜ (ಆಲ್ತಾರು)

ದಾಖಲೆ ಮಾಡಿದ ಕೋಣಗಳು

ಕೆಸರು ನೆಲದಲ್ಲಿ ಕಾಲು ಎತ್ತಿ ಹಾಕಿ ನಡೆಯುವುದೇ ಕಷ್ಟ. ಅಂಥದ್ದರಲ್ಲಿ ಕೋಣಗಳನ್ನು ಮುನ್ನಡೆಸುತ್ತಾ ಮಿಂಚಿನ ವೇಗದಲ್ಲಿ ಓಡುವುದು ಅಸಾಮಾನ್ಯವೇ ಸರಿ. ಕಂಬಳದ ಓಟದಲ್ಲಿ 144 ಮೀಟರ್‌ ದೂರವನ್ನು ಕೇವಲ 13.57 ಸೆಕೆಂಡುಗಳಲ್ಲಿ ಕ್ರಮಿಸಿದ ದಾಖಲೆ ಇದೆ. ನಂದಳಿಕೆ ಶ್ರೀಕಾಂತ್‌ ಭಟ್‌ ಅವರ ರಾಕೆಟ್‌ ಮೋಡ ಹಾಗೂ ಕುಟ್ಟಿಹೆಸರಿನ ಜೋಡಿ ಕೋಣಗಳು 2014ರಲ್ಲಿ ಮಿಯಾರಿನಲ್ಲಿ ನಡೆದ ಲವ ಕುಶ ಕಂಬಳದಲ್ಲಿ ಈ ದಾಖಲೆ ಬರೆದಿದೆ.

ಪ್ರತಿಷ್ಠೆಯ ಸಂಕೇತ

ಕಂಬಳ ಕೋಣಗಳ ಯಜಮಾನರು ಕಂಬಳವನ್ನು ಹಣ ಗಳಿಸುವ ದೃಷ್ಟಿಯಿಂದ ನೋಡುತ್ತಿಲ್ಲ. ಕಂಬಳ ಪರಂಪರೆ ಹಾಗೂ ಪ್ರತಿಷ್ಠೆಯ ವಿಚಾರ. ಕಂಬಳ ಗೆದ್ದವರಿಗೆ ಗೌರವ ಸಿಗುತ್ತದೆ. ಒಂದು ಜೋಡಿ ಕಂಬಳದ ಕೋಣಕ್ಕೆ 15ರಿಂದ 25 ಲಕ್ಷ ರುಪಾಯಿ ಬೆಲೆ ಇದೆ. ಅದರ ನಿರ್ವಹಣಾ ವೆಚ್ಚವೂ ಲಕ್ಷ ರುಪಾಯಿಗಳಲ್ಲಿ ಇದೆ. ಒಂದು ಕಂಬಳಕ್ಕೆ ಕೋಣವನ್ನು ಕೊಂಡೊಯ್ಯಬೇಕಾದರೆ 50 ಸಾವಿರ ರುಪಾಯಿ ಖರ್ಚು ಇದೆ. ಆದರೆ ಅಲ್ಲಿ ಗೆದ್ದರೆ ಒಂದು ಅಥವಾ ಎರಡು ಪವನ್‌ ಚಿನ್ನ ಸಿಗುತ್ತದೆಯೇ ಹೊರತು ಲಾಭದಾಯಕ ಅನ್ನುವಷ್ಟುಹಣ ಸಿಗುವುದಿಲ್ಲ. ಕಂಬಳ ಕೋಣಗಳ ಮಾಲೀಕರು ಇಂದಿಗೂ ಅವುಗಳನ್ನು ಆದಾಯ ಮೂಲಗಳನ್ನಾಗಿ ನೋಡಿಲ್ಲ.

ವಿವಾದದ ಕರಿನೆರಳು

ಆರು ವರ್ಷದ ಹಿಂದೆ ಕಂಬಳದಲ್ಲಿ ಕೋಣಗಳನ್ನು ಹಿಂಸಿಸಲಾಗುತ್ತದೆ ಎಂದು ಪ್ರಾಣಿ ದಯಾ ಸಂಘ(ಪೇಟಾ) ಕೋರ್ಟಿಗೆ ಹೋಗಿ ಕಂಬಳಕ್ಕೆ ಸ್ಟೇ ತಂದಿತ್ತು. ಈ ಸಂದರ್ಭ ಅಶೋಕ್‌ ಕುರ್ಮಾ ರೈ ಕೋಡಿಂಬಾಡಿ ಅವರು ಕಾನೂನಾತ್ಮಕ ಹೋರಾಟಕ್ಕಿಳಿದು ಸ್ಟೇ ತೆರವುಗೊಳಿಸಲು ಮುಂದಾಗಿದ್ದರು. ಪೇಟಾ ತನ್ನ ಪ್ರಯತ್ನ ಬಿಡದೆ ಒಂದು ವರ್ಷ ಕಂಬಳ ನಡೆಯದಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಕಂಬಳ ನಿಷೇಧವಾಗುವ ಭೀತಿ ಹಾಗೂ ತುಳುನಾಡಿನ ಜಾನಪದ ಕ್ರೀಡೆಯನ್ನು ಉಳಿಸಿಕೊಳ್ಳಬೇಕು ಅನ್ನುವ ಪ್ರೀತಿ ತುಳುನಾಡಿನ ಜನರನ್ನು ಸಾಂಘಿಕ ಹೋರಾಟಕ್ಕೆ ಇಳಿಸಿತ್ತು. ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಅವರೂ ಕಂಬಳದ ಪರವಾಗಿ ಟ್ವೀಟ್‌ ಮಾಡಿದ್ದರು. ಇದನ್ನುಳಿಸಲು ಸುದೀರ್ಘ ಕಾನೂನು ಹೋರಾಟಗಳೂ ನಡೆದಿದ್ದವು. 2017ರ ನವೆಂಬರ್‌ನಲ್ಲಿ ಪೇಟಾ ಕಂಬಳ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸುವ ಮೂಲಕ ಕಂಬಳಕ್ಕೆ ಗ್ರೀನ್‌ ಸಿಗ್ನಲ್‌ ನೀಡಿತ್ತು. ಈ ಅವಧಿಯಲ್ಲಿ ಕಂಬಳದ ಬಗ್ಗೆ ಹಲವಾರು ನಿಯಮಾವಳಿಗಳು ರೂಪುಗೊಂಡವು. 2018ರಲ್ಲಿ ಕಂಬಳದ ಪರ ವಿಧೇಯಕಕ್ಕೆ ರಾಷ್ಟ್ರಪತಿಗಳ ಸಹಿಯೂ ಬಿದ್ದಿತು.

ಪೇಟಾದಿಂದ ಸುಪ್ರೀಂ ಕೋರ್ಟಿಗೆ 1360 ಪುಟದ ವರದಿ

ಸುಪ್ರೀಂ ಕೋರ್ಟ್‌ ಗ್ರೀನ್‌ ಸಿಗ್ನಲ್‌ ಕೊಟ್ಟನಂತರ ಕಂಬಳ ಮತ್ತೆ ಆರಂಭವಾಗಿತ್ತು. ಈ ವರ್ಷದ ಕಂಬಳ ವೇಳಾಪಟ್ಟಿಪ್ರಕಟಗೊಂಡಿದ್ದು, ಶನಿವಾರದಿಂದ ವಿವಿಧೆಡೆಗಳಲ್ಲಿ ಕಂಬಳ ಆರಂಭವಾಗಲಿದೆ. ಆದರೆ ಪ್ರಾಣಿ ದಯಾ ಸಂಘ(ಪೇಟಾ) ಈ ಬಾರಿ ಮತ್ತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಕಳೆದ ಬಾರಿ ಮೂಡುಬಿದಿರೆ, ಬಾರಾಡಿ, ಕೂಳೂರು ಹಾಗೂ ವಾಮಂಜೂರಿನಲ್ಲಿ ನಡೆದ ಕಂಬಳದಲ್ಲಿ ನಿಯಮಬಾಹಿರವಾಗಿ ನಡೆದುಕೊಳ್ಳಲಾಗಿದೆ ಎಂದು ಪೇಟಾ ದೂರಿದೆ. ಈ ಬಗ್ಗೆ 1360 ಪುಟದ ವರದಿಯನ್ನು ವಿಡಿಯೋ ಹಾಗೂ ಫೆäಟೋಗಳ ಜೊತೆಗೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ. ಕಂಬಳ ಆರಂಭವಾಗುವ ಹೊತ್ತಿಗೆ ಪೇಟಾ ಕೋರ್ಟ್‌ ಮೆಟ್ಟಿಲೇರಿದ್ದು ಕಂಬಳ ಪ್ರೇಮಿಗಳಲ್ಲಿ ಆತಂಕ ಸೃಷ್ಟಿಸಿದೆ.

ಕಂಬಳಕ್ಕೆ ನಿಯಮಗಳನ್ನು ರೂಪಿಸಲಾಗಿತ್ತು....

ಕಂಬಳ ವಿವಾದ ಆರಂಭವಾದ ನಂತರ, ಕಂಬಳ ನಡೆಸಲು ಹಲವು ನಿಯಮಗಳನ್ನು ರೂಪಿಸಲಾಗಿತ್ತು.

ಕೋಣಗಳಿಗೆ ಮೂಗುದಾರ ಹಾಕಬಾರದು, ಹೊಡೆಯಬಾರದು, ಓಟದ ಸಂದರ್ಭ ಕೋಲು ಹಿಡಿಯಬಾರದು, ಕೋಣಗಳ ಬಾಲ ತಿರುಚಬಾರದು, ನೂರು ಮೀಟರ್‌ಗಿಂತ ಹೆಚ್ಚು ಓಡಿಸಬಾರದು, 24 ಗಂಟೆಗಳಲ್ಲಿ ಕಂಬಳ ಮುಗಿಸಬೇಕು, ಬಿಸಿಲಿನ ಸಮಯದಲ್ಲಿ ಕೋಣಗಳನ್ನು ಓಡಿಸಬಾರದು ಮುಂತಾದ ನಿಯಮಗಳನ್ನು ಮಾಡಲಾಗಿತ್ತು. ಇದಕ್ಕೆ ಪೂರಕವಾಗಿ ಕೋಲು ಹಿಡಿಯದೆ ಕಂಬಳವನ್ನು ನಡೆಸಿದ್ದೂ ಇದೆ. ಆದರೆ ಮಾಹಿತಿಯ ಕೊರತೆಯಿಂದ ಕೆಲವು ಕಡೆ ಲೋಪದೋಷಗಳಾಗಿದ್ದು, ಪೇಟಾದವರು ಇದನ್ನೇ ಕಾರಣವಾಗಿಟ್ಟುಕೊಂಡು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ ಎನ್ನಲಾಗುತ್ತಿದೆ.

ಪೇಟಾದ ನಡೆಯ ವಿರುದ್ಧ ಜನರ ಆಕ್ರೋಶ

ಕಂಬಳಕ್ಕೆ ತಡೆ ನೀಡಲು ಪ್ರಯತ್ನಿಸುತ್ತಿರುವ ಪೇಟಾದ ವಿರುದ್ಧ ಕಂಬಳ ಪ್ರೇಮಿಗಳು ಆಕ್ರೋಶಿತರಾಗಿದ್ದಾರೆ. ಜಾನುವಾರುಗಳ ಮೇಲೆ ಪ್ರೀತಿಯಿದ್ದರೆ ಗೋ ಹತ್ಯೆ ನಿಷೇಧದ ಬಗ್ಗೆ ಮಾತನಾಡಲಿ. ಗೋ ಕಳ್ಳ ಸಾಗಣೆಯ ಬಗ್ಗೆ ಹೋರಾಟ ಮಾಡಲಿ. ಬೀಡಾಡಿ ದನಗಳನ್ನು ಸಾಕಲು ಗೋ ಶಾಲೆಗಳನ್ನು ನಿರ್ಮಿಸಲಿ. ಅದು ಬಿಟ್ಟು, ಪ್ರತಿಯೊಬ್ಬರೂ ಒಪ್ಪಿಕೊಂಡ ಜಾನಪದ ಕ್ರೀಡೆ ಕಂಬಳವನ್ನು ಬೆರಳೆಣಿಕೆಯ ಜನರ ಗುಂಪೊಂದು ವಿರೋಧಿಸುವುದು ಸರಿಯಲ್ಲ ಎನ್ನುವುದು ಕಂಬಳ ಪ್ರೇಮಿಗಳ ವಾದ.

Follow Us:
Download App:
  • android
  • ios