ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳನ್ನು ನಡೆಸಲು ಹಾಗೂ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಷರತ್ತುಬದ್ಧ ಅವಕಾಶ ನಿಬಂಧನೆಗಳೊಂದಿಗೆ ಅನುಮತಿ ನೀಡಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಸೋಮವಾರ ದೇವಳದಿಂದ ಆದೇಶ

 ಸುಬ್ರಹ್ಮಣ್ಯ (ಸೆ.21):  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳನ್ನು ನಡೆಸಲು ಹಾಗೂ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಷರತ್ತುಗಳನ್ನು ಪಾಲಿಸಿಕೊಂಡು ನಿಬಂಧನೆಗಳೊಂದಿಗೆ ಅನುಮತಿ ನೀಡಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಸೋಮವಾರ ದೇವಳದಿಂದ ಆದೇಶಿಸಲಾಗಿದೆ.

ಪಂಚಾಮೃತ ಮಹಾಭಿಷೇಕಕ್ಕೆ ದಿನಕ್ಕೆ 4 ಸೇವೆಗಳನ್ನು ನೆರವೇರಿಸಲು ಅವಕಾಶ, ಸರ್ಪಸಂಸ್ಕಾರ ದಿನವೊಂದಕ್ಕೆ 100 ಸೇವೆಗಳಿಗೆ ಅವಕಾಶ, ಸೇವೆವೊಂದಕ್ಕೆ ಇಬ್ಬರು ಸೇವಾ ಕರ್ತೃಗಳಿಗೆ ಭಾಗವಹಿಸಲು ಅವಕಾಶ, ದಿನಕ್ಕೆ ಆನ್‌ಲೈನ್‌ ಸೇವೆ, ಡಿಡಿ, ಎಂ.ಟಿ., ಎಂ.ಒ. ಇತ್ಯಾದಿ 10, ಗಣ್ಯ ವ್ಯಕ್ತಿಗಳಿಗೆ 30ರಂತೆ ಸೇವೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸೇವಾರ್ಥಿಗಳ ಸಂಖ್ಯೆ ಕಡಿಮೆ ಇದ್ದಲ್ಲಿ ದಿನದಲ್ಲಿ ಆಗಮಿಸಿದ ಭಕ್ತರಿಗೆ ಸೇವೆ ನೆರವೇರಿಸಲು ಅವಕಾಶ ನೀಡಲಾಗಿದೆ. ಈಗಾಗಲೇ 2020ರಿಂದ ಬುಕ್ಕಿಂಗ್‌ ಆಗಿರುವ ಸರ್ಪಸಂಸ್ಕಾರ ಸೇವಾ ಭಕ್ತಾದಿಗಳಿಗೆ ಆದ್ಯತೆ ನೆಲೆಯಲ್ಲಿ ಅವಕಾಶ ನೀಡಲಾಗಿದೆ.

ಕೊರೋನಾ ಇಳಿಮುಖ: ಧರ್ಮಸ್ಥಳ, ಕುಕ್ಕೆ ವಾರಾಂತ್ಯ ನಿರ್ಬಂಧ ತೆರವು

ನಾಗಪ್ರತಿಷ್ಠೆ ದಿನಕ್ಕೆ 20 ಸೇವಾ ರಶೀದಿಗಳಿಗೆ ಅವಕಾಶ ನೀಡಲಾಗಿದ್ದು, ಸರ್ಪ ಸಂಸ್ಕಾರ ಸೇವೆ ನಿಗದಿತ ಸಂಖ್ಯೆಯಲ್ಲಿ ನೆರವೇರದೇ ಇದ್ದ ದಿನಗಳಲ್ಲಿ ಆಯಾ ದಿನಗಳಲ್ಲಿ ನಾಗಪ್ರತಿಷ್ಠೆ ಸೇವೆಯ ರಶೀದಿಗಳನ್ನು ಸರ್ಪ ಸಂಸ್ಕಾರ ಸೇವೆಗಳಿಗೆ ಸರಿದೂಗಿಸಿಕೊಂಡು ಹೆಚ್ಚುವರಿಯಾಗಿ ನೀಡುವುದು.

ಆಶ್ಲೇಷ ಬಲಿ ಸೇವೆ ದಿನವೊಂದಕ್ಕೆ ನಾಲ್ಕು ಪಾಳಿಗಳಲ್ಲಿ ನಡೆಯಲಿದ್ದು, ಪಾಳಿ ಒಂದರಲ್ಲಿ 70 ಸೇವೆಗಳಿಗೆ ಅವಕಾಶ ನೀಡಲಾಗಿದೆ. ಆಶ್ಲೇಷ ಬಲಿ ಸೇವೆ ಬೆಳಗ್ಗೆ ಗಂಟೆ 7ರಿಂದ 8.15, 8.30ರಿಂದ 9.45, 10ರಿಂದ 11.15 ಹಾಗೂ ಸಂಜೆ ಗಂಟೆ 5ರಿಂದ 6.30ರ ಸಮಯದಲ್ಲಿ ನಡೆಯಲಿದೆ.

ಸೇವಾ ಕರ್ತರು ಕನಿಷ್ಠ ಕೋವಿಡ್‌ ಲಸಿಕೆ ಪಡೆದಿರುವ ಬಗ್ಗೆ ಹಾಗೂ ಆರ್‌ಟಿ ಪಿಸಿಆರ್‌ ಪರೀಕ್ಷೆ ನಡೆಸಿರುವ ಬಗ್ಗೆ ವರದಿ ಸಲ್ಲಿಸುವುದು, ಮಾಸ್ಕ್‌ ಧರಿಸುವುದು. ಸರ್ಪಸಂಸ್ಕಾರ ಸೇವಾ ಕ್ರಿಯಾಕರ್ತೃಗಳಿಗೆ ಕೋವಿಡ್‌ ಲಸಿಕೆ ಆರ್‌ಟಿ ಪಿಸಿಆರ್‌, ಮಾಸ್ಕ್‌ ಧರಿಸುವುದು, ಅಂತರ ಕಾಪಾಡುವುದು ಕಡ್ಡಾವಾಗಿದ್ದು, ದೇವಳದ ವಿವಿಧ ವಿಭಾಗಗಳ ಮೇಲ್ವಿಚಾರಣೆಗೆ ವಿವಿಧ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಅವರು ಸೂಚನೆಯಂತೆ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ.