ಮುಸ್ಲಿಂ ಬಂಧುಗಳೇ ಯಾವತ್ತೂ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷವನ್ನು ನಂಬಬೇಡಿ, ಅವರಿಂದ ನಿಮ್ಮ ಅಭಿವೃದ್ಧಿ ಸಾಧ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್‌ನ್ನು ಬೆಂಬಲಿಸಿ, ಅಧಿಕಾರಕ್ಕೆ ತರುವ ಮೂಲಕ ನಿಮ್ಮ ಸರ್ವಾಂಗೀಣ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದರು.

ತಿಪಟೂರು : ಮುಸ್ಲಿಂ ಬಂಧುಗಳೇ ಯಾವತ್ತೂ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷವನ್ನು ನಂಬಬೇಡಿ, ಅವರಿಂದ ನಿಮ್ಮ ಅಭಿವೃದ್ಧಿ ಸಾಧ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್‌ನ್ನು ಬೆಂಬಲಿಸಿ, ಅಧಿಕಾರಕ್ಕೆ ತರುವ ಮೂಲಕ ನಿಮ್ಮ ಸರ್ವಾಂಗೀಣ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದರು.

ನಗರದ ಗಾಂಧಿನಗರದಲ್ಲಿ ಜೆಡಿಎಸ್‌ ಪಕ್ಷದ ವತಿಯಿಂದ ಆಯೋಜಿಸಿದ್ದ ಅಲ್ಪಸಂಖ್ಯಾತ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.

ಜೆಡಿಎಸ್‌ ರಾಜ್ಯ ವಕ್ತಾರೆ ನಜ್ಮಾ ನಜೀರ್‌ ಮಾತನಾಡಿ, ಈ ಹಿಂದೆ ಜೆಡಿಎಸ್‌ ಅಧಿಕಾರ ಪಡೆದ ಸಂದರ್ಭದಲ್ಲಿ 4ರಷ್ಟುಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ನೀಡಿದೆ. ಅಲ್ಪಸಂಖ್ಯಾತರ ಪರವಾಗಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಎಚ್‌.ಡಿ. ಕುಮಾರಸ್ವಾಮಿಯವರಿದ್ದು ನಿಮ್ಮ ಧ್ವನಿಯಾಗಿ ನಿಂತಿದ್ದಾರೆ. ಅವರನ್ನು ಮತ್ತೆ ಅಧಿಕಾರಕ್ಕೆ ತರಬೇಕಾದರೆ ತಿಪಟೂರಿನಲ್ಲಿ ಶಾಂತಕುಮಾರ್‌ನ್ನು ಬೆಂಬಲಿಸಬೇಕೆಂದರು.

ಜೆಡಿಎಸ್‌ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್‌ ಮಾತನಾಡಿ, ಈಗಾಗಲೇ ಎಚ್‌.ಡಿ.ಕೆ ಅಬ್ಬರ ರಾಜ್ಯದಲ್ಲಿ ಶುರುವಾಗಿದ್ದು ಜನತೆಯೂ ಸಹ ಬದಲಾವಣೆ ಬಯಸುತ್ತಿದ್ದಾರೆ. ಈ ಬಾರಿಯ ಪಂಚರತ್ನ ಕಾರ್ಯಕ್ರಮಗಳ ಮೂಲಕ ಅನೇಕ ಯೋಜನೆಗಳನ್ನು ಜಾರಿಗೆ ತರಲು ಹೊರಟಿದ್ದಾರೆ. ಗಾಂಧಿನಗರದ ಮೂಲಭೂತ ಸಮಸ್ಯೆಗಳು ಶಾಶ್ವತವಾಗಿ ಪರಿಹಾರವಾಗಬೇಕಾದರೆ ನಿಮ್ಮೆಲ್ಲರ ಸಹಕಾರ ಜೆಡಿಎಸ್‌ಗೆ ಕೊಟ್ಟರೆ ಗಾಂಧಿನಗರದ ಚಿತ್ರಣವನ್ನೇ ಬದಲಾಯಿಸಿ ನೆಮ್ಮದಿಯಿಂದ ಜೀವನ ನಡಸುವ ವಾತಾವರಣವನ್ನು ನಾನು ಕಲ್ಪಿಸಿಕೊಡುತ್ತೇನೆಂದು ಮನವಿ ಮಾಡಿದರು.

ಸಮಾವೇಶದಲ್ಲಿ ರಾಜ್ಯ ಉಪಾಧ್ಯಕ್ಷ ಗಂಗಣ್ಣ, ಜಿಲ್ಲಾಧ್ಯಕ್ಷ ಅಂಜನಪ್ಪ, ತಾಲೂಕು ಅಧ್ಯಕ್ಷ ಗುರುಮೂರ್ತಿ, ಅಲ್ಪಸಂಖ್ಯಾತ ಮುಖಂಡರಾದ ತನ್ವೀರ್‌ ರೆಹಮಾನ್‌, ತಾಹಿರಾ ಕುಲ್ಸಮ್‌, ನವೀದ್‌ ಜಕಾರಿಯ, ನಗರಸಭಾ ಮಾಜಿ ಸದಸ್ಯೆ ರೇಖಾ ಅನೂಪ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ, ಮುಖಂಡರಾದ ಗೋವಿಂದಸ್ವಾಮಿ, ಮಾದಿಹಳ್ಳಿ ತಿಮ್ಮೇಗೌಡ, ಜಗದೀಶ್‌, ಪ್ರಶಾಂತ್‌, ಎನ್‌ಸಿ ರಮೇಶ್‌, ಉದಯ್‌, ಜಗದೀಶ್‌, ಹೇಮೇಶ್‌, ಧನಂಜಯ್‌, ನಟರಾಜು, ಶಿವಶಂಕರ್‌, ವಸಂತ್‌ ಮತ್ತಿತರರಿದ್ದರು.

ನಮ್ಮ ಸರ್ಕಾರವಿದ್ದಿದ್ದರೆ 24 ಗಂಟೆಯೊಳಗೆ ಹೆಚ್ಚು ಬೆಂಬಲ ಬೆಲೆ ನೀಡಿ ಕೊಬ್ಬರಿ ಖರೀದಿ ಮಾಡುತ್ತಿದ್ದೇವು. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಪಂಚರತ್ನ ರಥಯಾತ್ರೆಯಲ್ಲಿರುವ ಎಲ್ಲಾ ಯೋಜನೆಗಳಲ್ಲದೆ ಯವಕರಿಗೆ, ನಿರುದ್ಯೋಗಿಗಳಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿ ಸದೃಢ ರಾಜ್ಯವನ್ನಾಗಿ ಮಾಡಲಿದೆ. ಆದ್ದರಿಂದ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿಸಲು ಇಲ್ಲಿನ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್‌ನ್ನು ಅತಿ ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿ ಶಾಸಕರನ್ನಾಗಿಸಿ.

ಸಿ.ಎಂ. ಇಬ್ರಾಹಿಂ ಜೆಡಿಎಸ್‌ ರಾಜ್ಯಾಧ್ಯಕ್ಷ 

ಜೆಡಿಎಸ್‌ನವರು ಮಾತ್ರ ರಾಜ್ಯದ ಜನರ ಆಶಾಕಿರಣ

ತುರುವೇಕೆರೆ : ಬಿಜೆಪಿಯ ಚುಕ್ಕಾಣಿ ಹಿಡಿದಿದ್ದ ಬಿ.ಎಸ್‌.ಯಡಿಯೂರಪ್ಪನವರ ಹಿಂದೆಯೇ ಬಿಜೆಪಿಯೂ ಹೋಯ್ತು. ಜೈಲು ಮತ್ತು ಬೇಲು ಇಲ್ಲದವರೆಂದರೆ ಅದು ಜೆಡಿಎಸ್‌ನವರು ಮಾತ್ರ. ಹಾಗಾಗಿ ರಾಜ್ಯದ ಜನರ ಆಶಾಕಿರಣವಾಗಿರುವುದು ಜೆಡಿಎಸ್‌ ಮಾತ್ರ ಎಂದು ರಾಜ್ಯ ಜೆಡಿಎಸ್‌ನ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ಪಟ್ಟಣದ ಗುರುಭವನ ಆವರಣದಲ್ಲಿ ನಡೆದ ತಾಲೂಕು ಜೆಡಿಎಸ್‌ ಅಲ್ಪಸಂಖ್ಯಾತರ ಘಟಕದ ಸಮಾವೇಶದಲ್ಲಿ ಮಾತನಾಡಿದರು.

ಕುಮಾರಸ್ವಾಮಿಯವರು ಹಮ್ಮಿಕೊಂಡಿರುವ ಪಂಚರತ್ನ ಯೋಜನೆಯ ರೀತಿ ಐವತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಮಾಡಲು ಏಕೆ ಆಗಲಿಲ್ಲ. ಈಗ ಮನೆಗೆ 200 ಯುನಿಟ್‌ ವಿದ್ಯುತ್‌ ಫ್ರೀ, ಮನೆ ಯಜಮಾನಿಗೆ 2000 ರು. ಫ್ರೀ ಅಂತ ಹೇಳ್ತಾ ಇದ್ದಾರೆ. ಇದು ಮನೆಯಲ್ಲಿ ಜಗಳ ತಂದಿಡುವ ಸ್ಕೀಂ. ಕಾಂಗ್ರೆಸ್‌ನವರ ಸ್ಕೀಂನಿಂದ ಮನೆ ಮುರಿಯುತ್ತದೆ. ಆದರೆ ಕುಮಾರಸ್ವಾಮಿ ಸ್ಕೀಂನಿಂದ ಮನೆ, ಊರು ಎಲ್ಲವೂ ತಣ್ಣಗಿರುತ್ತದೆ ಎಂದು ಹೇಳಿದರು.

ರಾಜ್ಯಾದ್ಯಂತ ಜೆಡಿಎಸ್‌ ಅಲೆ ಇದೆ. ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ನಿಚ್ಚಳ ಬಹುಮತ ಪಡೆದು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ನೂರಕ್ಕೆ ನೂರು ಖಚಿತ. ರಾಜ್ಯದ ಜನತೆ ಬಿಜೆಪಿ ಮತ್ತು ಕಾಂಗ್ರೆಸ್‌ ಸರ್ಕಾರದ ಸಾಧನೆಯನ್ನು ನೋಡಿ ಸಾಕಾಗಿ ಹೋಗಿದ್ದಾರೆ. ಐದು ವರ್ಷಗಳ ಕಾಲ ಜೆಡಿಎಸ್‌ಗೆ ಅಧಿಕಾರ ನೀಡಿದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಜೆಡಿಎಸ್‌ನಲ್ಲಿದ್ದು ನಂತರ ಕಾಂಗ್ರೆಸ್‌ಗೆ ಹೋದ ಬೆಮಲ್‌ ಕಾಂತರಾಜ್‌ರವರ ಮಾತು ಕೇಳಿ ಗುಬ್ಬಿ ಶಾಸಕ ಶ್ರೀನಿವಾಸ್‌ರವರು ತಮ್ಮ ರಾಜಕೀಯ ಜೀವನವನ್ನು ಹಾಳು ಮಾಡಿಕೊಂಡರು. ಈಗ ಜೆಡಿಎಸ್‌ನಲ್ಲೂ ಇಲ್ಲದೇ ಅತ್ತ ಕಾಂಗ್ರೆಸ್‌ಗೂ ಸೇರಲಾಗದೇ ಅತಂತ್ರರಾಗಿದ್ದಾರೆಂದು ಹೇಳಿದರು.