ಜೀತ ನಿರ್ಮೂಲನೆ ಎಲ್ಲರೂ ಕೈಜೋಡಿಸಬೇಕು : DC ಎನ್.ಎಂ.ನಾಗರಾಜ್
ಜಿಲ್ಲೆಯಲ್ಲಿ ಜೀತ ಪದ್ಧತಿಗೆ ಸಿಲುಕಿದ್ದವರನ್ನು ಗುರುತಿಸಿ ಅವರಿಗೆಲ್ಲರಿಗೂ ಸರ್ಕಾರದಿಂದ ಪುನರ್ ವಸತಿ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಜಿಲ್ಲಾಡಳಿತದಿಂದ ಪ್ರಾಮಾಣಿಕವಾಗಿ ಮಾಡುತ್ತಿದ್ದು, ಜೀತಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮನವಿ ಮಾಡಿದರು.
ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಜೀತ ಪದ್ಧತಿಗೆ ಸಿಲುಕಿದ್ದವರನ್ನು ಗುರುತಿಸಿ ಅವರಿಗೆಲ್ಲರಿಗೂ ಸರ್ಕಾರದಿಂದ ಪುನರ್ ವಸತಿ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಜಿಲ್ಲಾಡಳಿತದಿಂದ ಪ್ರಾಮಾಣಿಕವಾಗಿ ಮಾಡುತ್ತಿದ್ದು, ಜೀತಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮನವಿ ಮಾಡಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ, ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಜೀತಪದ್ಧತಿ ನಿಷೇಧ:
ಸಮಾಜದಲ್ಲಿ ಜೀತಪದ್ಧತಿ ಅಮಾನವೀಯವಾದದು. ಸಂವಿಧಾನದ ಅನುಚ್ಚೇದ 23 ರಲ್ಲಿ ಬಲವಂತದ ದುಡಿಮೆಯನ್ನು ನಿಷೇಧಿಸಲಾಗಿದೆ. ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಎಲ್ಲಾ ಇಲಾಖೆಗಳ ಹಾಗೂ ನಮ್ಮೇಲ್ಲರ ಜವಾಬ್ದಾರಿ. ರಾಜ್ಯದಲ್ಲಿ ಜೀತ ವಿಮುಕ್ತಿ ಕರ್ನಾಟಕ ಎಂಬ ಸಂಘಟನೆಯು ಸಮಾಜದಲ್ಲಿ ಜೀತ ಪದ್ಧತಿಗೆ ತುತ್ತಾಗಿದ್ದವರನ್ನು ಗುರುತಿಸಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಡುತ್ತಿದ್ದು, ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಜಿಪಂ ಸಿಇಒ ಪಿ.ಶಿವಶಂಕರ್ ಮಾತನಾಡಿ, ಶಿಕ್ಷಣದ ಕೊರತೆಯಿಂದ ಅಜ್ಞಾನ, ಅಜ್ಞಾನದಿಂದ ಬಡತನ ಸೇರಿ ಜೀತ ಪದ್ಧತಿ ನಡೆದುಕೊಂಡು ಬಂದಿದೆ. ಇದು ಸಮಾಜದ ಅನಿಷ್ಟಪದ್ದತಿಯಾಗಿದೆ. ಇದನ್ನು ನಿರ್ಮೂಲನೆಗೊಳಿಸಲು ಸರ್ಕಾರ ಜೀತ ಪದ್ದತಿ ಕಾಯ್ದೆ ಜಾರಿಗೊಳಿಸಲಾಗಿದೆ ಎಂದರು.
ಜೀತ ಶಿಕ್ಷಾರ್ಹ ಅಪರಾಧ:
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಲಕ್ಷ್ಮೀಕಾಂತ್ ಜೆ.ಮಿಸ್ಕಿನ್ ಅವರು ಮಾತನಾಡಿ, ಜೀತ, ಮಕ್ಕಳನ್ನು ದುಡಿಸುವುದು, ಶೋಷಿಸುವುದು ಕಾನೂನಿನ ಅನ್ವಯ ಶಿಕ್ಷಾರ್ಹ ಅಪರಾಧವಾಗಿದೆ. ಇವರಿಗೆ ಕಾನೂನಿನ್ವಯ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಸರ್ಕಾರಿ ವಕೀಲರಾದ ಆರ್.ಪ್ರಕಾಶ್ ಅವರು ಕಾನೂನು ಕುರಿತು ವಿಶೇಷ ಉಪನ್ಯಾಸ ನೀಡಿದರು. ಜೀವಿಕ ಸಂಘಟನೆಯ ಮುಖ್ಯಸ್ಥರಾದ ರತ್ನಮ್ಮ ಮಾತನಾಡಿದರು. ಈ ವೇಳೆ ಜಿಪಂ ಹೊರತಂದಿರುವ ಜೀತ ವಿಮುಕ್ತರಿಗೆ ಪುನರ್ ವಸತಿ ಕಲ್ಪಿಸುವ ಮಾಹಿತಿಯ ಸಂಕ್ಷಿಪ್ತ ಕೈಪಿಡಿ-2023, ಕ್ಯಾಲೆಂಡರ್, ಡೈರಿ ಹಾಗೂ ಐಇಸಿ ಚಟುವಟಿಕೆಗಳ ಭಿತ್ತಿಪತ್ರಗಳನ್ನು ಲೋಪಾರ್ಪಣೆ ಮಾಡಲಾಯಿತು.
ಜಿಪಂ ಯೋಜನಾ ನಿರ್ದೇಶಕ ಗಿರೀಜಾ ಶಂಕರ್, ಸಹಾಯಕ ಯೋಜನಾಧಿಕಾರಿ ಡಾ.ಮೈತ್ರಿ, ಎಲ್ಲಾ ತಾಲೂಕುಗಳ ಇಒಗಳು, ಉಪನ್ಯಾಸಕಾರದ ಸತೀಶ…, ಜೀವಿಕ ಸಂಘಟನೆಯ ನಾರಾಯಣಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಮಕ್ಕಳು ಜೀತಕ್ಕೆ
ಬಳ್ಳಾರಿ : ತಂದೆ ಮಾಡಿದ ಸಾಲಕ್ಕೆ ಇಬ್ಬರು ಮಕ್ಕಳನ್ನು ಜೀತಕ್ಕೆ ಇಟ್ಟುಕೊಂಡಿರುವ ಅಮಾನವೀಯ ಘಟನೆ ನಗರದ ಶ್ರೀರಾಂಪುರ ಕಾಲನಿಯಲ್ಲಿ ಬೆಳಕಿಗೆ ಬಂದಿದೆ. ಮಹಿಳಾ ಕಾಂಗ್ರೆಸ್ ಮುಖಂಡರು ಅವರ ಮನೆಗೆ ತೆರಳಿ ಆ ಇಬ್ಬರು ಮಕ್ಕಳನ್ನು ಜೀತದಿಂದ ವಿಮುಕ್ತಿ ಮಾಡಿದ್ದಾರೆ. ಮಕ್ಕಳನ್ನು ಜೀತಕ್ಕೆ ಇಟ್ಟುಕೊಂಡಿದ್ದ ದಂಪತಿಗಳನ್ನು ಬಂಧಿಸಲಾಗಿದೆ.
ನಾಗರಾಜ್ ಎಂಬುವರು ದಾದು ಎಂಬುವರಿಂದ 30 ಸಾವಿರ ಸಾಲ ಪಡೆದಿದ್ದರು. ಒಂದು ವರ್ಷದ ಹಿಂದೆ ಅನಾರೋಗ್ಯ ಕಾರಣದಿಂದ ನಾಗರಾಜ ಸಾವನ್ನಪ್ಪಿದ್ದಾನೆ. ಆತನ ಪತ್ನಿ ಸುನೀತಾ ಅಲ್ಲಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಬಡತನದಲ್ಲಿಯೇ ನಾಲ್ಕು ಮಕ್ಕಳನ್ನು ಪೋಷಣೆ ಮಾಡುತ್ತಿದ್ದಾರೆ. ಏತನ್ಮಧ್ಯೆ ನಾಗರಾಜಗೆ ಸಾಲ ನೀಡಿದ್ದ ದಾದು ಮತ್ತು ಈತನ ಪತ್ನಿ ಮುನ್ನಿ ಅವರು ನಿನ್ನ ಗಂಡ ಮಾಡಿದ ಸಾಲವನ್ನು ತೀರಿಸುವಂತೆ ಸುನಿತಾಗೆ ಒತ್ತಡ ತಂದಿದ್ದಾರೆ. ನಾನು ಅಲ್ಲಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು ಸದ್ಯಕ್ಕೆ ಸಾಲ ಕಟ್ಟಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಸುನೀತಾ ತನ್ನ ಅಸಹಾಯಕತೆ ಹೊರ ಹಾಕಿದ್ದಾಳೆ. ಇದಕ್ಕೆ ಒಪ್ಪದ ದಾದು ಮತ್ತು ಮುನ್ನಿ ದಂಪತಿ ಸುನೀತಾಳ 15 ವರ್ಷದ ಬಾಲಕ ಹಾಗೂ 9 ವರ್ಷದ ಬಾಲಕಿಯನ್ನು ಮನೆಯಲ್ಲಿ ಜೀತಕ್ಕೆ ಇಟ್ಟುಕೊಂಡಿದ್ದಾರೆ.