ಕಸದ ಲಾರಿಗೆ ಬಲಿಯಾದ ಬಾಲಕಿ ಕುಟುಂಬದಿಂದ ಪರಿಹಾರ ತಿರಸ್ಕಾರ
ಹೆಬ್ಬಾಳದ ಮೇಲ್ಸೇತುವೆ ಬಳಿ ಬಿಬಿಎಂಪಿಯ ಕಸ ತುಂಬಿದ ಲಾರಿ ಹರಿದು ಮೃತಪಟ್ಟಬಾಲಕಿ ಅಕ್ಷಯಾ ಕುಟುಂಬಸ್ಥರು ಪಾಲಿಕೆಯಿಂದ ನೀಡಿದ ಐದು ಲಕ್ಷ ರು. ಪರಿಹಾರವನ್ನು ತಿರಸ್ಕರಿಸಿದ್ದು, ಸೂಕ್ತ ರೀತಿಯ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರು (ಮಾ.24): ಹೆಬ್ಬಾಳದ ಮೇಲ್ಸೇತುವೆ ಬಳಿ ಬಿಬಿಎಂಪಿಯ ಕಸ ತುಂಬಿದ ಲಾರಿ ಹರಿದು ಮೃತಪಟ್ಟಬಾಲಕಿ ಅಕ್ಷಯಾ ಕುಟುಂಬಸ್ಥರು ಪಾಲಿಕೆಯಿಂದ ನೀಡಿದ ಐದು ಲಕ್ಷ ರು. ಪರಿಹಾರವನ್ನು ತಿರಸ್ಕರಿಸಿದ್ದು, ಸೂಕ್ತ ರೀತಿಯ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಕಳೆದ ಸೋಮವಾರ ಹೆಬ್ಬಾಳದ ಕುಂತಿ ಗ್ರಾಮದ ಸಿ ಬ್ಲಾಕ್‌ನ ನಿವಾಸಿಯಾದ ಬಾಲಕಿ ಅಕ್ಷಯಾ ವಾರ್ಷಿಕ ಪರೀಕ್ಷೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದಾಗ ಹೆಬ್ಬಾಳ ಮೇಲ್ಸೇತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಳು.
ಈ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಕುಟುಂಬಕ್ಕೆ ಐದು ಲಕ್ಷ ರು. ಪರಿಹಾರ ನೀಡುವುದಕ್ಕೆ ತೀರ್ಮಾನಿಸಲಾಗಿತ್ತು. ಅದರಂತೆ ಬುಧವಾರ ಬಿಬಿಎಂಪಿ ಅಧಿಕಾರಿಗಳು ಪರಿಹಾರದ ಚೆಕ್ ನೀಡುವುದಕ್ಕೆ ಹೋಗಿದ್ದರು. ಈ ವೇಳೆ ಅಕ್ಷಯಾ ಕುಟುಂಬ ಸದಸ್ಯರು ಬಿಬಿಎಂಪಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಮೃತ ಬಾಲಕಿ ಸಹೋದರ ಕುಮಾರ್ ಮಾತನಾಡಿ, ಅಕ್ಷಯಾ ವಿದ್ಯಾಭ್ಯಾಸಕ್ಕೆ ಪ್ರತಿವರ್ಷ ಸುಮಾರು .1.50 ಲಕ್ಷ ವೆಚ್ಚ ಮಾಡಲಾಗುತ್ತಿತ್ತು. ಬಿಬಿಎಂಪಿ ನಿರ್ಲಕ್ಷ್ಯದಿಂದ ಬಾಲಕಿಯ ಪ್ರಾಣ ಹೋಗಿದೆ. ಅಪಘಾತ ಸಂಭವಿಸಿದಾಗ ಪಾಲಿಕೆಯ ಯಾವುದೇ ಅಧಿಕಾರಿಗಳು ನಮ್ಮ ಸಹಾಯಕ್ಕೆ ಬಂದಿಲ್ಲ. ಈಗ ಐದು ಲಕ್ಷ ರು. ಪರಿಹಾರ ನೀಡುವುದಕ್ಕೆ ಬಂದಿರುವುದು ಸರಿಯಲ್ಲ. ಸೂಕ್ತ ರೀತಿಯ ಪರಿಹಾರ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು.
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವು
ಇಂದು ಪ್ರತಿಭಟನೆ: ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದ ಗುರುವಾರ ಮೃತ ಅಕ್ಷಯಾ ಕುಟುಂಬ ಸದಸ್ಯರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸುವುದಕ್ಕೆ ತೀರ್ಮಾನಿಸಿದ್ದಾರೆ.
ಕುಟುಂಬ ಸದಸ್ಯರು ಬಾಲಕಿಯನ್ನು ಕಳೆದುಕೊಂಡ ದುಃಖದಲ್ಲಿ ಇದ್ದರು. ಹಾಗಾಗಿ, ಪರಿಹಾರ ಬೇಡವೆಂದು ಹೇಳಿದರು. ಅಕ್ಷಯಾ ಮನೆಯ ಸುತ್ತಮುತ್ತಲಿನ ಜನರು ಹೆಚ್ಚಿನ ಮೊತ್ತದ ಪರಿಹಾರ ನೀಡುವಂತೆ ಈ ವೇಳೆ ಮನವಿ ಮಾಡಿದ್ದಾರೆ. ಅದರಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ಆರ್.ಶಿಲ್ಪಾ, ಜಂಟಿ ಆಯುಕ್ತೆ, ಪೂರ್ವ ವಲಯ.
ಜೀವಕ್ಕೆ ಮಾರಕವಾದ ಅಂಡರ್‌ಪಾಸ್: ಬಿಎಂಟಿಸಿ ಹೆಣ್ಣೂ ಡಿಪೋದ ಚಾಲಕ ನರಸಿಂಹಮೂರ್ತಿ, ತಮ್ಮ ಪತ್ನಿ ಗೀತಾ ಹಾಗೂ ಮಕ್ಕಳ ಜತೆ ಹೆಬ್ಬಾಳದಲ್ಲಿ ನೆಲೆಸಿದ್ದಾರೆ. ಈ ದಂಪತಿಯ ಮೂವರ ಮಕ್ಕಳ ಪೈಕಿ ಪುತ್ರಿ ಅಕ್ಷಯಾ, ಸದಾಶಿವನಗರದ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು. ಪ್ರತಿದಿನ ಶಾಲೆಗೆ ಬಸ್ಸಿನಲ್ಲೇ ಆಕೆ ಹೋಗಿ ಬರುತ್ತಿದ್ದಳು. ಸೋಮವಾರ ಮಧ್ಯಾಹ್ನ ಪರೀಕ್ಷೆ ಮುಗಿಸಿಕೊಂಡು ತನ್ನ ಮೂವರು ಸಹಪಾಠಿಗಳ ಜತೆ ಆಕೆ ಮನೆಗೆ ತೆರಳುತ್ತಿದ್ದಳು. ಆಗ ಹೆಬ್ಬಾಳ ಪೊಲೀಸ್ ಠಾಣೆ ಮುಂದಿನ ಅಂಡರ್ ಪಾಸ್ ಸಮೀಪ ರಸ್ತೆ ದಾಟುವಾಗ ಆ ಬಾಲಕಿ ಪಾಲಿಗೆ ಬಿಬಿಎಂಪಿ ಕಸದ ಲಾರಿಯು ಯಮದೂತನಾಗಿ ಪರಿಣಮಿಸಿದೆ.
ಭಾನುವಾರ ಮಳೆ ಸುರಿದ ಪರಿಣಾಮ ಅಂಡರ್ ಪಾಸ್‌ನಲ್ಲಿ ನೀರು ನಿಂತಿದ್ದು, ಸಾರ್ವಜನಿಕರು ರಸ್ತೆ ದಾಟಿಯೇ ಸಾಗುತ್ತಿದ್ದಾರೆ. ಅದೇ ರೀತಿ ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಶಾಲೆ(School) ಮುಗಿಸಿ ಮನೆಗೆ ಹೊರಟ್ಟಿದ್ದ ಅಕ್ಷಯಾ ಹಾಗೂ ಆಕೆ ಸ್ನೇಹಿತೆಯರು, ಅಂಡರ್‌ಪಾಸ್ ಸಮೀಪ ರಸ್ತೆ ದಾಟುತ್ತಿದ್ದರು. ಆ ಸಮಯಕ್ಕೆ ಮೇಖ್ರಿ ಸರ್ಕಲ್ ಕಡೆಯಿಂದ ಅತಿವೇಗವಾಗಿ ಬಿಬಿಎಂಪಿ ಕಸದ ಲಾರಿಯನ್ನು ಚಲಾಯಿಸಿಕೊಂಡು ಬಂದ ಚಾಲಕ ಮಂಜುನಾಥ್, ರಸ್ತೆ ದಾಟುತ್ತಿದ್ದ ಮಕ್ಕಳನ್ನು ಕಂಡು ವಿಚಲಿತನಾಗಿದ್ದಾನೆ. ಆ ಮಕ್ಕಳ ರಕ್ಷಿಸುವ ಭರದಲ್ಲಿ ಎಡಕ್ಕೆ ಲಾರಿಯನ್ನು ತಿರುಗಿಸಿದ್ದಾನೆ.
Mandya Accident: ಪಿಲ್ಲರ್‌ಗೆ ಡಿಕ್ಕಿ ಹೊಡೆದ ಟಿಪ್ಪರ್‌ಗೆ ಬೆಂಕಿ: ಡ್ರೈವರ್ ಸಜೀವ ದಹನ
ಈ ಹಂತದಲ್ಲಿ ಲಾರಿಗೆ ವಿದ್ಯಾರ್ಥಿನಿ ಬೆನ್ನಿಗೆ ಹಾಕಿಕೊಂಡಿದ್ದ ಸ್ಕೂಲ್ ಬ್ಯಾಗ್ ಸಿಕ್ಕಿಕೊಂಡು ಒಂದು ಸುತ್ತು ತಿರುಗಿ ಅಕ್ಷಯಾ ಕೆಳಗೆ ಬಿದ್ದಿದ್ದಾಳೆ. ಕೆಳಗೆ ಬಿದ್ದ ಆಕೆ ಮೇಲೆ ಲಾರಿಯ ಮುಂದಿನ ಚಕ್ರ ಹರಿದಿದೆ. ವಿದ್ಯಾರ್ಥಿನಿಗೆ ಗುದ್ದಿದ ಬಳಿಕ ಮತ್ತೊಬ್ಬ ಪಾದಚಾರಿ(ಸೌಮ್ಯಾ) ಹಾಗೂ ಬೈಕ್ ಮತ್ತು ಕಾರಿಗೆ ಲಾರಿ ಡಿಕ್ಕಿಯಾಗಿ ನಿಂತಿದೆ. ಇದರಿಂದ ಬೈಕ್ ಚಾಲಕ ವಿಕಾಸ್ ಅವರಿಗೆ ಸಹ ಪೆಟ್ಟಾಗಿದೆ. ಕೂಡಲೇ ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ(Hospital) ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಉತ್ತರ ವಿಭಾಗ (ಸಂಚಾರ) ಡಿಸಿಪಿ ಸವಿತಾ ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಮೃತ ವಿದ್ಯಾರ್ಥಿನಿ ತಾಯಿ ಗೀತಾ ದೂರು ಆಧರಿಸಿ ಕಸದ ಲಾರಿ ಚಾಲಕನನ್ನು ಆರ್.ಟಿ.ನಗರ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.