ಬೆಳಗಾವಿ: ಕೃಷಿ ಮಾರಾಟ ಅಂಗಡಿ ಮೇಲೆ ದಾಳಿ
* ಪರವಾನಗಿ ಇಲ್ಲದೆ ಕೃಷಿ ಪರಿಕರ ಮಾರಾಟ
* ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಅಕ್ಕಿಸಾಗರದಲ್ಲಿ ದಾಳಿ
* ಪರವಾನಗಿ ಪಡೆದ ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು
ಬೆಳಗಾವಿ(ಜೂ.09): ಪರವಾನಗಿ ಇಲ್ಲದೆ ಕೃಷಿ ಪರಿಕರಗಳನ್ನು ರೈತರಿಗೆ ಮಾರಾಟ ಮಾಡುತ್ತಿದ್ದ ಮಾರಾಟ ಅಂಗಡಿ ಮೇಲೆ ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಖಾಶಿ ಅವರ ಸಲಹೆ ಮೇರೆಗೆ ಕೃಷಿ ಅಧಿಕಾರಿಗಳ ತಂಡ ಮಂಗಳವಾರ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಅಕ್ಕಿಸಾಗರದಲ್ಲಿ ದಾಳಿ ನಡೆಸಿದೆ.
ಯರಗಟ್ಟಿ ಹೋಬಳಿಯ ಅಕ್ಕಿಸಾಗರ ಗ್ರಾಮದಲ್ಲಿ ಶ್ರೀ ಆಂಜನೇಯ ಅಗ್ರೊ ಸೆಂಟರ್ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಅಧಿಕಾರಿಗಳು 1,90,000 ಮೌಲ್ಯದ 30 ವಿವಿಧ ಕೀಟನಾಶಕಗಳು, ಬಿತ್ತನೆ ಬೀಜಗಳು ಮತ್ತು ರಸಗೊಬ್ಬರಗಳನ್ನು ಜಪ್ತಿ ಮಾಡಿಕೊಂಡು ಮಾರಾಟ ಮಳಿಗೆಯನ್ನು ಸೀಜ್ ಮಾಡಿದ್ದಾರೆ.
ಪರವಾನಗಿ ಇಲ್ಲದೆ ಕೃಷಿ ಪರಿಕರಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಕೃಷಿ ಅಧಿಕಾರಿಗಳಿಗೆ ನೀಡಲಾಗಿದೆ. ನಂತರ ಬೆಳಗಾವಿ ಜಿಲ್ಲೆಯ ಕೃಷಿ ಇಲಾಖೆಯ ಜಾಗೃತದಳದ ಅಧಿಕಾರಿಗಳಾದ ಆರ್.ಬಿ.ಪಾಟೀಲ ಮತ್ತು ಸುಪ್ರೀತಾ ಅಂಗಡಿ ಅವರು ದಾಳಿ ನಡೆಸಿದ್ದಾರೆ. ಈ ವೇಳೆ, ಅಂಗಡಿ ಮಾಲೀಕರಾದ ಚಿದಾನಂದ ಎಸ್. ಕತ್ತಿ ಅವರು ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಕೃಷಿ ಇಲಾಖೆಯಿಂದ ಅಧಿಕೃತ ಮಾರಾಟ ಪರವಾನಗಿಯನ್ನು ಪಡೆಯದೆ, ಮಾರಾಟ ಮಾಡುತ್ತಿರುವುದನ್ನು ಪತ್ತೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಎರಡು ದಿನ ಸಂಪೂರ್ಣ ಲಾಕ್‌ಡೌನ್
ಅಲ್ಲದೇ, ದರ ಪಟ್ಟಿ, ದಾಸ್ತಾನು ಹಾಗೂ ಇತರೆ ಯಾವುದೇ ದಾಖಲೆಗಳನ್ನು ನಿರ್ವಹಿಸದೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಜತೆಗೆ ರೈತರು ಖರೀದಿಸಿದ ಯಾವುದೇ ಪರಿಕರಗಳಿಗೆ ಬಿಲ್ ಕೂಡ ನೀಡದಿರುವುದು ದಾಳಿಯ ವೇಳೆ ಕಂಡುಬಂದಿದೆ ಎಂದು ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಖಾಶಿ ತಿಳಿಸಿದ್ದಾರೆ.
ಕೃಷಿ ನಿರ್ದೇಶಕರಿಂದ ರೈತರಿಗೆ ಸಲಹೆ:
ದಾಳಿ ಹಿನ್ನೆಲೆಯಲ್ಲಿ ರೈತರು ಕಡ್ಡಾಯವಾಗಿ ಯಾವುದೇ ಕೃಷಿ ಪರಿಕರಗಳನ್ನು ಕೃಷಿ ಇಲಾಖೆಯಿಂದ ಪರವಾನಗಿಯನ್ನು ಪಡೆದ ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು. ಅಲ್ಲದೆ, ತಪ್ಪದೆ ರಸೀದಿಯನ್ನು ಪಡೆದುಕೊಳ್ಳಬೇಕು ಎಂದು ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಖಾಶಿ ಅವರು ರೈತರಿಗೆ ಸಲಹೆ ನೀಡಿದ್ದಾರೆ.