Asianet Suvarna News Asianet Suvarna News

ತಾಂಡಾಗಳಿನ್ನು ಕಂದಾಯ ಗ್ರಾಮ, ಕೃಷಿ ಕಾರ್ಮಿಕರ ಮಕ್ಕಳಿಗೂ ಸ್ಕಾಲರ್ಶಿಪ್: ಸಚಿವ ಆರ್.ಅಶೋಕ

ರಾಜ್ಯದಲ್ಲಿ ಲಂಬಾಣಿ ಸಮುದಾಯ ವಾಸಿಸುವ ತಾಂಡಾ ಮತ್ತು ಕುರುಬರ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುತ್ತಿದ್ದು, ಪ್ರಾಯೋಗಿಕವಾಗಿ ಕಲಬುರಗಿ ಜಿಲ್ಲೆಯಿಂದಲೆ ಇದಕ್ಕೆ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಅರ್.ಅಶೋಕ ಘೋಷಿಸಿದ್ದಾರೆ‌.

agricultural workers children get  scholarships says Minister R  Ashoka gow
Author
Bengaluru, First Published Aug 20, 2022, 9:06 PM IST

ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಕಲಬುರಗಿ (ಆ.20): ರಾಜ್ಯದಲ್ಲಿ ಲಂಬಾಣಿ ಸಮುದಾಯ ವಾಸಿಸುವ ತಾಂಡಾ ಮತ್ತು ಕುರುಬರ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುತ್ತಿದ್ದು, ಪ್ರಾಯೋಗಿಕವಾಗಿ ಕಲಬುರಗಿ ಜಿಲ್ಲೆಯಿಂದಲೆ ಇದಕ್ಕೆ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಅರ್.ಅಶೋಕ ಘೋಷಿಸಿದ್ದಾರೆ‌. ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮ ಅಂಗವಾಗಿ ಇಂದು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಆಡಕಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಆಯೋಜಿಸಿದ ಗ್ರಾಮ ವಾಸ್ತವ್ಯ ಮತ್ತು ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಲಬುರಗಿ ಜಿಲ್ಲೆಯ 453 ತಾಂಡಾಗಳನ್ನು ಪೈಲೇಟ್ ಯೋಜನೆಯಡಿ ಕೈಗೆತ್ತಿಕೊಂಡು ಕಂದಾಯ ಗ್ರಾಮಗಳನ್ನಾಗಿ ಮುಂದಿನ ಎರಡು ತಿಂಗಳಲ್ಲಿ ಮಾಡಲಾಗುವುದು. ಇದಲ್ಲದೆ ಪ್ರಸ್ತುತ ತಾಂಡಾ, ಹಟ್ಟಿಯಲ್ಲಿ (ಶಾಲಾ-ಕಾಲೇಜು, ಸ್ಮಶಾನ ಹೊರತುಪಡಿಸಿ) ಅನಧಿಕೃತವಾಗಿ ವಾಸಿಸುವರನ್ನು ಅಧಿಕೃತಗೊಳಿಸಿ ಎಷ್ಟು ವಿಸ್ತೀರ್ಣದಲ್ಲಿ ಇದ್ದಾರೆ ಅಷ್ಟು ಜಾಗದ ನಿವೇಶನ, ಮನೆ ಅವರ ಹೆಸರಿಗೆ ನೋಂದಣಿ ಮಾಡಿಸಿ ಮನೆ ಕಟ್ಟಲು ಆರ್ಥಿಕ ಸಹಾಯಧನ ನೀಡಲಾಗುವುದು. ರಾಜ್ಯದಲ್ಲಿ ಏಕಕಾಲದಲ್ಲಿ  30 ಸಾವಿರ ಜನರಿಗೆ ಹಕ್ಕು ಪತ್ರ ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ಕೃಷಿ ಕಾರ್ಮಿಕರ ಮಕ್ಕಳಿಗೂ ಸ್ಕಾಲರ್ಶಿಪ್: 10 ಎಕರೆ ಒಳಗೆ ಉಳುಮೆ ಮಾಡುತ್ತಿರುವ ಕೃಷಿ ಕೂಲಿ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂಬ ನಿಟ್ಟಿನಲ್ಲಿ ಇಂಜಿನೀಯರಿಂಗ್, ವೈದ್ಯಕೀಯ, ಶಿಕ್ಷಣ, ವಕೀಲ ವೃತ್ತಿಯ ಉನ್ನತ ಶಿಕ್ಷಣ ಪಡೆಯಲು ಅವರ ಮಕ್ಕಳಿಗೂ ವಿದ್ಯಾರ್ಥಿ ವೇತನ ನೀಡಲಾಗುವುದು. ಸವಿತಾ, ಕುಂಬಾರ, ಬಡಿಗೇರ್ ಸಮುದಾಯದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 50 ಸಾವಿರ ರೂ. ಉದ್ಯೋಗ ನಿಧಿ ನೀಡಲಾಗುವುದು ಎಂದು ಘೋಷಣೆ ಮಾಡಿದರು.

ಮನೆ‌-ಮನೆಗೆ ಕಂದಾಯ ದಾಖಲೆಗಳು ಅಭಿಯಾನದಲ್ಲಿ 50 ಸಾವಿರ ಜನರಿಗೆ ಜಾತಿ, ಆದಾಯ, ಪಹಣಿ ಪತ್ರಗಳನ್ನು ನೀಡಲಾಗಿದೆ. ಕಳೆದ 10 ಗ್ರಾಮ ವಾಸ್ತವ್ಯದಲ್ಲಿ ಇಂದಿಲ್ಲಿ ದಾಖಲೆ ಪ್ರಮಾಣದಲ್ಲಿ 28,900 ಜನರಿಗೆ ಸೌಲಭ್ಯ ವಿತರಿಸಲಾಗುತ್ತಿದೆ ಎಂದ ಅವರು ಇದು ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮದ ಪ್ರತಿಫಲ ಎಂದರು.

ಯಾಸಿಡ್ ಸಂತ್ರಸ್ತರಿಗೆ 10 ಸಾವಿರ ರೂ. ಪಿಂಚಣಿ: ಯಾಸಿಡ್ ಸಂತ್ರಸ್ತರಿಗೆ ಈ ಹಿಂದೆ 3 ಸಾವಿರ ರೂ. ಪಿಂಚಣಿ ಕೊಡಲಾಗುತಿತ್ತು, ಅದನ್ನು ಈಗ 10 ಸಾವಿರ ರೂ. ಗಳಿಗೆ ಹೆಚ್ಚಳ ಮಾಡಿದೆ. ಇದಲ್ಲದೆ ಅವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಉಚಿತ ಸೈಟ್ ನೀಡಿ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುವುದು. ಸ್ವಯಂ ಉದ್ಯೋಗ ಮಾಡಲು ಸಂತ್ರಸ್ತರು  ಮುಂದೇ ಬಂದಲ್ಲಿ 5 ಲಕ್ಷ ರೂ. ವರೆಗೆ  ಧನಸಹಾಯ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕಂದಾಯ ಸಚಿವರು ಹೇಳಿದರು.

ಗ್ರಾಮ ವಾಸ್ತವ್ಯ ಪರಿಣಾಮ, 72 ಗಂಟೆಯಲ್ಲಿ ಪಿಂಚಣಿ ಜಾರಿ; ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಿಂದ ಅನೇಕರಿಗೆ ಅನುಕೂಲವಾಗಿದೆ. ಇದು ನನಗೂ ಗ್ರಾಮಸ್ಥೃ ಸಮಸ್ಯೆ ಅರಿಯಲು ಪಾಠವಾಗಿದೆ. ಇದರಿಂದ ರೈತರ, ಸಾರ್ವಜನಿಕರ ಹಲವಾರು ಸಮಸ್ಯೆಗಳು ಸ್ಥಳದಲ್ಲಿಯೇ ಪರಿಹರಿಸಲ್ಪಟ್ಟಿವೆ. ಡಿ.ಸಿ., ತಹಶೀಲ್ದಾರರು ಹಳ್ಳಿಗೆ ಹೋಗಿ ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಗ್ರಾಮ ವಾಸ್ತವ್ಯ ಪರಿಣಾಮ ಮತ್ತು ಕಲಬುರಗಿ ಡಿ.ಸಿ. ಯಶವಂತ ವಿ. ಗುರುಕರ್ ಅವರ ಸಲಹೆ ಮೇರಿಗೆ ರಾಜ್ಯದಾದ್ಯಂತ 72 ಗಂಟೆಯಲ್ಲಿ ವೃದ್ಧಾಪ್ಯ ವೇತನ ನೀಡುವ "ಹಲೋ ಕಂದಾಯ ಸಚಿವರೇ" ಕಾರ್ಯಕ್ರಮ ಜಾರಿಗೊಳಿಸಿದೆ. ಯೋಜನೆ ಜಾರಿಯಾದ 2 ತಿಂಗಳಿನಲ್ಲಿ 28 ಸಾವಿರ ಜನರಿಗೆ ವೇತನ ನೀಡಿದ್ದೇವೆ. ರಾಜ್ಯದಲ್ಲಿ ಸರ್ಕಾರ ಒಟ್ಟಾರೆ 10 ಸಾವಿರ ಕೋಟಿ ರೂ. ಸಾಮಾಜಿಕ ಪಿಂಚಣಿ‌ ನೀಡುತ್ತಿದೆ ಎಂದರು.

ಅತಿವೃಷ್ಟಿ ಪರಿಹಾರ‌ ಕುರಿತಂತೆ ಮಾತನಾಡಿದ‌ ಸಚಿವರು, ಹಿಂದಿನ‌ 25 ವರ್ಷ ಇತಿಹಾಸ ತಿರುಗಿ ನೋಡಿದಾಗ, ಒಂದು ವರ್ಷದ‌ ನಂತರವೇ ಪರಿಹಾರ ಸಿಕ್ಕಿದೆ. ನಮ್ಮ ಸರ್ಕಾರ ಬಂದ ಮೇಲೆ 30 ದಿನದಲ್ಲಿಯೇ ಬೆಳೆ ಪರಿಹಾರ ನೀಡಲು ಪ್ರೂಟ್ಸ್ ತಂತ್ರಾಂಶ ಅಭಿವೃದ್ಧಿಪಡಿಸಿದ್ದೇವೆ.  ಕಳೆದ ವರ್ಷ 18.02 ಲಕ್ಷ ರೈತರಿಗೆ ಎನ್.ಡಿ.ಅರ್.ಎಫ್ ಮಾರ್ಗಸೂಚಿಯಂತೆ 1,252.89 ಕೋಟಿ ರೂ. ಪರಿಹಾರ ಕೇಂದ್ರ ಸರ್ಕಾರ ನೀಡಿದರೆ, ರಾಜ್ಯ ಸರ್ಕಾರ 1,135 ಕೋಟಿ ರೂ. ಹೆಚ್ಚುವರಿ ಪರಿಹಾರ ನೀಡಿದೆ ಎಂದು ಆರ್.ಅಶೋಕ ತಿಳಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಆಸ್ತಿ‌ ನೋಂದಣಿಗೆ ನೋಂದಣಿ ಶುಲ್ಕದಲ್ಲಿ ಈಗಾಗಲೆ ಶೇ.10ರಷ್ಟು ರಿಯಾಯಿತಿ ನೀಡಿದ್ದು, ಇನ್ನೂ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಕಂದಾಯ ಸಚಿವರು ತಿಳಿಸಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಬಸವರಾಜ್ ಮತ್ತಿಮೂಡ,  ಸಂಸದ‌ ಡಾ.ಉಮೇಶ ಜಾಧವ ಇನ್ನಿತರರು ಉಪಸ್ಥಿತರಿದ್ದರು. 

ಸೌಲಭ್ಯ ವಿತರಣೆ: ಗ್ರಾಮ ವಾಸ್ತವ್ಯ ಅಂಗವಾಗಿ 28,900 ಜನರಿಗೆ‌ ವಿವಿಧ ಸೌಲಭ್ಯ, ಪ್ರಮಾಣ ಪತ್ರಗಳು ನೀಡಲಾಯಿತು. ಇದರಲ್ಲಿ ಸೇಡಂ ತಾಲೂಕಿನ 448 ಸೇರಿ 522 ಸಂಘಗಳು ಸೇರಿದಂತೆ ಡಿ.ಸಿ.ಸಿ. ಬ್ಯಾಂಕಿನಿಂದ 10 ಸಾವಿರ ರೈತರಿಗೆ ಬಡ್ಡಿ ರಹಿತ ಸಾಲ ನೀಡಲಾಯಿತು. ವೇದಿಕೆ ಮೇಲೆ ಸಚಿವರು ಸಾಂಕೇತಿಕವಾಗಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು. ಉಳಿದವರಿಗೆ ವಿವಿಧ ಇಲಾಖೆಗಳು ಹಾಕಿರುವ ಮಳಿಗೆಯಲ್ಲಿಯೇ ಅಧಿಕಾರಿಗಳು ಸೌಲಭ್ಯ ವಿತರಿಸಿದರು.

ಗ್ರಾಮ ವಾಸ್ತವ್ಯ ಅಂಗವಾಗಿ ಕಂದಾಯ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ, ರೇಷ್ಮೆ, ವಿಕಲಚೇತನರ ಕಲ್ಯಾಣ, ಭೂದಾಖಲೆ, ಆರೋಗ್ಯ, ಕಾರ್ಮಿಕ, ಆಹಾರ ಹೀಗೆ ವಿವಿಧ 27 ಇಲಾಖೆಗಳು ಮಳಿಗೆ ಹಾಕಿ ಇಲಾಖೆಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು. 

Follow Us:
Download App:
  • android
  • ios