ಆಲಮಟ್ಟಿ(ಡಿ.09): ಕಳೆದ ಆಗಸ್ಟ್‌ 9 ರಿಂದ ಬಂದ್ ಆಗಿದ್ದ ಇಲ್ಲಿನ ಪ್ರವಾಸಿಗರ ಆಕರ್ಷಕ ತಾಣ ಸಂಗೀತ ಕಾರಂಜಿ ಬುಧವಾರದಿಂದ ಮತ್ತೆ ಅರಂಭಗೊಂಡಿದೆ. ಬುಧವಾರ ಸಂಗೀತ ಕಾರಂಜಿ ಪರೀಕ್ಷಾರ್ಥವಾಗಿ ಆರಂಭಿಸಲಾಗಿದೆ. ಇದನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.

ಆಲಮಟ್ಟಿಯ ಪ್ರವಾಸಿ ತಾಣಕ್ಕೆ ಸಂಗೀತ ಕಾರಂಜಿ ಮುಕುಟ ಮಣಿಯಾಗಿದೆ. ಅದರ ಬಂದ್‌ನಿಂದ ಪ್ರವಾಸಿಗರಿಗೆ ನಿರಾಸೆಯಾಗಿದ್ದಲ್ಲದೇ ಪ್ರವಾಸಿಗರಿಲ್ಲದೇ ಆಲಮಟ್ಟಿ ಭಣಗುಡುತ್ತಿತ್ತು. ಈಗ ಮತ್ತೆ ಸಂಗೀತ ಕಾರಂಜಿ ಆರಂಭಗೊಂಡಿದ್ದು ಹಿಂದಿನ ವೈಭವ ಮರು​ಕ​ಳಿ​ಸ​ಲಿದೆ. ಕಾರಂಜಿ ವೀಕ್ಷಿ​ಸುವ ವೀಕ್ಷಣಾ ಗ್ಯಾಲರಿಗೆ ಗ್ರಾನೈಟ್‌ ಅಳವಡಿಸಲಾಗುತ್ತಿದೆ. ಹೀಗಾಗಿ ನಿತ್ಯ 7 ಗಂಟೆ ಹಾಗೂ 7.30 ಎರಡು ಶೋ ಆರಂಭಿಸಲಾಗಿದೆ ಎಂದು ಮುಖ್ಯ ಎಂಜಿನಿಯರ್‌ ಆರ್‌.ಪಿ. ಕುಲಕರ್ಣಿ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

‘ಸದ್ಯ ಟೂರ್‌ ಸೀಸನ್‌ ಇದ್ದ ಕಾರಣ ಪ್ರವಾಸಿಗರಿಗೆ ನಿರಾಸೆಯಾಗಬಾರದು ಎನ್ನುವ ಉದ್ದೇಶದಿಂದ ಹಗಲು ರಾತ್ರಿ ಕಾಮಗಾರಿ ಕೈಗೊಂಡು ತ್ವರಿತವಾಗಿ ಕಾರಂಜಿ ದುರಸ್ತಿಗೊಳಿಸಲಾಗಿದೆ. ಬೆಂಗಳೂರಿನ ವೇದಾ ಇಲೆಕ್ಟ್ರಿಕಲ್‌ ಕಂಪನಿ ಕಾಮಗಾರಿ ನಿರ್ವಹಿಸುತ್ತಿದ್ದು, ಬೆಳಗ್ಗೆಯಿಂದ ಸಂಜೆಯವರೆಗೂ ಕಾಮಗಾರಿ ನಿರ್ವಹಿಸಿ ರಾತ್ರಿ ಸಂಗೀತ ಕಾರಂಜಿ ಆರಂಭಿಸಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ 10 ದಿನದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಸದ್ಯ ಹಳೆಯ ಥೀಮ್‌ನ ಹಾಡುಗಳಿದ್ದು, ಮುಂದಿನ ಕೆಲದಿನಗಳಲ್ಲಿ ಹೊಸ ಥೀಮ್‌ ಹಾಡುಗಳ ಸಂಯೋಜನೆಯೊಂದಿಗೆ ಸಂಗೀತ ಕಾರಂಜಿ ನಡೆಯಲಿದೆ’ ಎಂದು ತಿಳಿಸಿದರು.

ಕಳೆದ ಆಗಸ್ಟ್‌ನಲ್ಲಿ ಆಲಮಟ್ಟಿ ಜಲಾಶಯದಿಂದ 6 ಲಕ್ಷ ಕ್ಯುಸೆಕ್‌ ನೀರು ಬಿಟ್ಟ ಕಾರಣ ಸಂಗೀತ ಕಾರಂಜಿ ಸಂಪೂರ್ಣ ಜಲಾವೃತಗೊಂಡಿತ್ತು. 10 ದಿನಗಳ ಕಾಲ ನೀರಿನಲ್ಲಿಯೇ ಈ ಪ್ರದೇಶ ನಿಂತಿತ್ತು. ಇದರಿಂದ ಡಾಲ್ಬಿ ಸ್ಪೀಕರ್‌ಗಳು, ಜತೆಗೆ ಲೈಟಿಂಗ್‌ ಕಂಟ್ರೋಲ್‌ ಪೆನಾಲ್‌ಗಳು, ಟ್ರಾನ್ಸ್‌ಫಾರ್ಮರ್‌, ಆರ್‌ಜಿಬಿ ತಂತ್ರಜ್ಞಾನದ ಎಲ್‌ಇಡಿ ಬಲ್ಪ್‌ಗಳು, ಬೋರ್ಡ್‌, ಕೇಬಲಿಂಗ್‌ ಸೇರಿದಂತೆ ಬಹುತೇಕ ಎಲೆಕ್ಟ್ರಾನಿಕ್ಸ್‌ ಉಪಕರಣಗಳೆಲ್ಲವೂ ಹಾಳಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರತಿ ವರ್ಷ ನವೆಂಬ​ರ್‌​ದಿಂದ ಜನೆವರಿವರೆಗೆ ಪ್ರವಾಸಿ ಸೀಸನ್‌ ಇದ್ದು, ರಾಜ್ಯದ ನಾನಾ ಕಡೆಯಿಂದ ಸಹಸ್ರಾರು ಪ್ರವಾಸಿಗರು ಬರುತ್ತಾರೆ. ಉಳಿದ 9 ತಿಂಗಳಲ್ಲಿ ಬರುವ ಪ್ರವಾಸಿಗರಿಗಿಂತಲೂ ಇದೇ ಮೂರು ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಸಂಗೀತ ಕಾರಂಜಿ ಇಲ್ಲದ್ದಕ್ಕೆ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿತ್ತು. ಈಗ ಮತ್ತೆ ಸಂಗೀತ ಕಾರಂಜಿ ಆರಂಭಗೊಂಡಿದ್ದು ಎಲ್ಲರಲ್ಲಿಯೂ ಸಂತಸ ಮೂಡಿದೆ.

ಇನ್ನೂ ಕೆಲ ಸಾಫ್ಟವೇರ್‌ ಹಾಗೂ ಕೆಲ ಎಲೆಕ್ಟ್ರಾನಿಕ್‌ ಕಾಮಗಾರಿ ಬಾಕಿ ಇದ್ದು, ಅವುಗಳನ್ನು ನಿತ್ಯ ನಿರ್ವಹಿಸುತ್ತಲೇ, ಸಂಜೆ ನಿತ್ಯ ಸಂಗೀತ ಕಾರಂಜಿ ಎರಡು ಶೋ ಆರಂಭಿಸಲಾಗಿದೆ ಎಂದು ಆಲಮಟ್ಟಿ ಮುಖ್ಯ ಎಂಜಿನಿಯರ್‌ ಆರ್‌.ಪಿ. ಕುಲಕರ್ಣಿ ಅವರು ತಿಳಿಸಿದ್ದಾರೆ.