ಸಾರಿಗೆ ಮುಷ್ಕರ: ಮತ್ತೆ 2443 ಸಿಬ್ಬಂದಿ ಅಮಾನತು
ಶನಿವಾರ ಮುಷ್ಕರನಿರತರಿಗೆ ಸಸ್ಪೆಂಡ್ ಶಿಕ್ಷೆ| ಕೆಲಸಕ್ಕೆ ಹಾಜರಾಗದೇ ಸೂಚನೆ ಉಲ್ಲಂಘಿಸಿದ್ದಕ್ಕೆ ಕಠಿಣ ಕ್ರಮ| ಅಮಾನತಾದ ಬಿಎಂಟಿಸಿ ನೌಕರರ ಸಂಖ್ಯೆ 2882ಕ್ಕೆ ಏರಿಕೆ| ಇಂದು ಲಿಖಿತ ಸಮಜಾಯಿಷಿ ನೀಡಿದರೆ ಅಮಾನತು ರದ್ದು|
ಬೆಂಗಳೂರು(ಏ.18): ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗದೆ ಮೊಂಡುತನ ತೋರುತ್ತಿರುವ ಸಾರಿಗೆ ನೌಕರರ ವಿರುದ್ಧ ಕಠಿಣ ಕ್ರಮ ಮುಂದುವರೆಸಿರುವ ಬಿಎಂಟಿಸಿ, ಶನಿವಾರ ಕೆಲಸಕ್ಕೆ ಹಾಜರಾಗದ 2,443 ಚಾಲಕ ಮತ್ತು ನಿರ್ವಾಹಕರನ್ನು ಅಮಾನತು ಮಾಡಿ ಆದೇಶಿಸಿದೆ. ಇದರಿಂದಾಗಿ ಅಮಾನತಾದ ಬಿಎಂಟಿಸಿ ನೌಕರರ ಸಂಖ್ಯೆ 2882ಕ್ಕೆ ಏರಿದೆ. ಅಲ್ಲದೆ, ಏ.19ರೊಳಗೆ ಸಿಬ್ಬಂದಿ ತಾವು ಕೆಲಸ ಮಾಡುವ ಘಟಕಗಳಿಗೆ ಹಾಜರಾಗಿ ಲಿಖಿತ ಸಮಜಾಯಿಷಿ ನೀಡಿದರೆ ಅಮಾನತು ಹಿಂಪಡೆಯಲಾಗುವುದು. ಇಲ್ಲದಿದ್ದರೆ, ಇನ್ನಷ್ಟುಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ. ಏ 8ರಿಂದ 16ರವರೆಗೆ 439 ಸಿಬ್ಬಂದಿ ಅಮಾನತುಗೊಳಿಸಿ, 810 ಸಿಬ್ಬಂದಿಯನ್ನು ವಜಾ ಮಾಡಲಾಗಿತ್ತು.
ನಾಲ್ಕೂ ನಿಗಮಗಳ 1054 ಸಿಬ್ಬಂದಿ ವಜಾ:
ಇನ್ನೊಂದೆಡೆ ಮುಷ್ಕರದಲ್ಲಿ ಭಾಗಿಯಾಗಿ ಕರ್ತವ್ಯಕ್ಕೆ ಹಾಜರಾಗದ ನೌಕರರ ವಿರುದ್ಧ ಪ್ರಾರಂಭಿಕ ಹಂತದಲ್ಲಿ ತರಬೇತಿ ನೌಕರರನ್ನು ವಜಾಗೊಳಿಸುತ್ತಿದ್ದ ನಿಗಮಗಳು, ಕಾಯಂ ನೌಕರರನ್ನು ವಜಾಗೊಳಿಸುತ್ತಿವೆ. ಈವರೆಗೆ ನಾಲ್ಕೂ ನಿಗಮಗಳಲ್ಲಿ ಒಟ್ಟು 1,054 ಸಿಬ್ಬಂದಿಗೆ ಗೇಟ್‌ಪಾಸ್ ನೀಡಲಾಗಿದೆ.
'ಸಾರಿಗೆ ಸಂಸ್ಥೆ ಖಾಸಗೀಕರಣಕ್ಕೆ ಬಿಜೆಪಿ ಹುನ್ನಾರ'
ಸಾರಿಗೆ ನೌಕರರ ಮುಷ್ಕರವನ್ನು ಅಕ್ರಮ ಎಂದು ಕಾರ್ಮಿಕ ಇಲಾಖೆ ಆದೇಶಿಸಿದ ನಂತರ ಕಾಯಂ ನೌಕರರು ಕೆಲಸಕ್ಕೆ ಹಾಜರಾಗುವಂತೆ ನಿಗಮಗಳು ನೋಟಿಸ್ ನೀಡಿದ್ದವು. ಹೀಗಾಗಿ ಕಾಯಂ ನೌಕರರು ಕೂಡ ಕೆಲಸಕ್ಕೆ ಹಾಜರಾಗಬೇಕಿದೆ. ಒಂದು ವೇಳೆ ಕೆಲಸಕ್ಕೆ ಬರದಿದ್ದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ನಿಗಮಗಳಿಗೆ ಇದೆ. ಇನ್ನು 10 ಸಾವಿರ ತರಬೇತಿ ನೌಕರರಿದ್ದು, ಅವರು ಕಾಯಂ ನೌಕರರಲ್ಲದ ಕಾರಣ ಮುಷ್ಕರದ ಅಧಿಕಾರವಿಲ್ಲ. ನಿಯಮಾನುಸಾರ ಅವರನ್ನು ವಜಾ ಮಾಡುವ ಅಧಿಕಾರ ನಿಗಮಗಳಿಗೆ ಇದೆ.
ವಜಾಗೊಂಡ ನೌಕರರ ವಿವರ
ನಿಗಮ ನೌಕರರ ಸಂಖ್ಯೆ
ಕೆಎಸ್‌ಆರ್‌ಟಿಸಿ 87
ಬಿಎಂಟಿಸಿ 810
ವಾಯವ್ಯ ಸಾರಿಗೆ 99
ಈಶಾನ್ಯ ಸಾರಿಗೆ 58
ಒಟ್ಟು 1,054
ಅಮಾನತಾದ ನೌಕರರು
ನಿಗಮ ನೌಕರರ ಸಂಖ್ಯೆ
ಕೆಎಸ್‌ಆರ್‌ಟಿಸಿ 14
ಬಿಎಂಟಿಸಿ 2882
ವಾಯವ್ಯ ಸಾರಿಗೆ 16
ಈಶಾನ್ಯ ಸಾರಿಗೆ 17
ಒಟ್ಟು 2929