ಬೆಂಗಳೂರು : ರಾಜ್ಯದ 5 ವಿದ್ಯುತ್ ಸರಬರಾಜು ಕಂಪನಿಗಳು 2019 - 20 ರ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ವಿದ್ಯುತ್ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿವೆ. ಕೆಇಆರ್‌ಸಿ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ತನ್ನ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಸೇರಿ 8 ಜಿಲ್ಲೆಗಳಿಗೆ ವಿದ್ಯುತ್ ಪೂರೈಸುತ್ತಿರುವ ಬೆಸ್ಕಾಂ, ಪ್ರತಿ ಯೂನಿಟ್‌ಗೆ 1 ರು. ಹಾಗೂ ಜೆಸ್ಕಾಂ ಪ್ರತಿ ಯೂನಿಟ್‌ಗೆ 1.65 ರು. ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿವೆ. ಉಳಿದಂತೆ ಚೆಸ್ಕಾಂ, ಮೆಸ್ಕಾಂ ಹಾಗೂ ಹೆಸ್ಕಾಂ ಪ್ರತಿ ಯೂನಿಟ್‌ಗೆ 1.30 ರಿಂದ  1.45 ರು. ವರೆಗೆ ದರ ಹೆಚ್ಚಿಸುವಂತೆ ಮನವಿ ಮಾಡಿವೆ. 

ವಿದ್ಯುತ್ ಖರೀದಿ ವೇಳೆ ಉಂಟಾಗುತ್ತಿರುವ ನಷ್ಟ ಸರಿದೂಗಿಸಲು ದರ ಹೆಚ್ಚಳಕ್ಕೆ ನಿರ್ಧರಿಸಲಾಗಿದ್ದು, 2019 - 20 ರಿಂದ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡುವಂತೆ ವಿದ್ಯುತ್ ಸರಬರಾಜು ಕಂಪನಿಗಳು ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿವೆ. ಈ ಬಗ್ಗೆ ಗ್ರಾಹಕರು ಹಾಗೂ ಸಾರ್ವಜನಿಕರ ಸಲಹೆಗಳನ್ನು ಸ್ವೀಕರಿಸಿದ್ದು, ಅಂತಿಮ ಆದೇಶವನ್ನು ಸದ್ಯದಲ್ಲೇ ಪ್ರಕಟಿಸಲಿದೆ.

ಬೆಸ್ಕಾಂ ಸಲ್ಲಿಸಿರುವ ಪ್ರಸ್ತಾವನೆ ಪ್ರಕಾರ ತನ್ನ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಆರು ಸ್ಲ್ಯಾಬ್‌ಗಳನ್ನು 4 ಸ್ಲ್ಯಾಬ್‌ಗಳಿಗೆ ಇಳಿಸಲು ಉದ್ದೇಶಿಸಲಾಗಿದೆ. ನೂತನ ಪ್ರಸ್ತಾವನೆಯ ಪ್ರಕಾರ, 50 ಯೂನಿಟ್‌ಗೂ ಕಡಿಮೆ ವಿದ್ಯುತ್ ಬಳಕೆ ಮಾಡುವ ಗ್ರಾಹಕರು 3.90 ರು.
ಪಾವತಿಸಬೇಕಿದ್ದರೆ, 50 ಕ್ಕಿಂತ ಅಧಿಕ ಹಾಗೂ 100 ಕ್ಕಿಂತ ಕಡಿಮೆ ಯೂನಿಟ್ ವಿದ್ಯುತ್ ಬಳಕೆ ಮಾಡುವ ಗ್ರಾಹಕರು 4.95 ರು. ಪಾವತಿಸಬೇಕಿದೆ. ಸದ್ಯ ಗ್ರಾಹಕರು 30 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‌ಗೆ 3.50  ರೂ. ಹಾಗೂ 31 ರಿಂದ 100 ಯೂನಿಟ್‌ವರೆಗೆ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‌ಗೆ 4.95  ರೂ. ಪಾವತಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಸಭೆಯಲ್ಲಿ ದರ ಹೆಚ್ಚಳ ಚರ್ಚೆ ಆಗಿಲ್ಲ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನ ರೇಸ್‌ಕೋರ್ಸ್ ರಸ್ತೆಯ ಶಕ್ತಿಭವನದಲ್ಲಿ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ನಿರ್ದೇಶಕರ ಸಭೆ ನಡೆದಿದ್ದು, ಈ ವೇಳೆ ವಿದ್ಯುತ್ ದರ ಪರಿಷ್ಕರಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ. 

ಕೆಪಿಸಿಎಲ್ ಸಭೆಯಲ್ಲಿ ದರ ಪರಿಷ್ಕರಣೆ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ. ಕೆಪಿಸಿಎಲ್ ವಿದ್ಯುತ್ ಉತ್ಪಾದನೆ ಸಂಬಂಧ ತನ್ನ ಕಾರ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು (ಕೆಪಿಟಿಸಿಎಲ್) ವಿದ್ಯುತ್ ಪ್ರಸರಣದ (ಟ್ರಾನ್ಸ್‌ಮಿಷನ್) ಕೆಲಸ ಮಾಡುತ್ತದೆ. ವಿದ್ಯುತ್ ಸರಬರಾಜು ಕಂಪನಿಗಳು ಮನೆ-ಮನೆಗೆ ವಿದ್ಯುತ್ ಸರಬರಾಜು ಮಾಡಿ ಶುಲ್ಕ ವಸೂಲಿ ಮಾಡುವ ಕೆಲಸ ಮಾಡುತ್ತವೆ.