* ಬಿಜೆಪಿ ಆಹ್ವಾನಿಸುತ್ತಿದೆ, ಕಾಂಗ್ರೆಸ್‌ಗೆ ಮನಸ್ಸು ಇದ್ದಂತಿಲ್ಲ* ಕಾಂಗ್ರೆಸ್‌ ನಡೆ ನೋಡಿ ದಳ ಕಲಬುರಗಿ ಮೈತ್ರಿ ನಿರ್ಧಾರ* ಖರ್ಗೆ ಬಿಟ್ಟು ಇನ್ನಾರೂ ಮಾತುಕತೆ ನಡೆಸಿಲ್ಲ: ಎಚ್‌ಡಿಕೆ

ಬೆಂಗಳೂರು(ಸೆ.14): ಅತಂತ್ರ ಫಲಿತಾಂಶ ಬಂದಿರುವ ಕಲಬುರಗಿ ಮಹಾನಗರ ಪಾಲಿಕೆಯ ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ನಿರ್ಣಾಯಕ ಪಕ್ಷವಾಗಿ ಹೊರಹೊಮ್ಮಿರುವ ಜೆಡಿಎಸ್‌ ರಾಜ್ಯ ಕಾಂಗ್ರೆಸ್‌ ನಾಯಕರ ನಡೆಯನ್ನು ನೋಡಿಕೊಂಡು ಮುಂದಿನ ನಿರ್ಣಯ ಕೈಗೊಳ್ಳುವ ಚಿಂತನೆಯಲ್ಲಿದೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಸೋಮವಾರ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮೈತ್ರಿಗೆ ಆಹ್ವಾನ ನೀಡಿದ್ದಾರೆ. ಆದರೆ, ಕಾಂಗ್ರೆಸ್‌ನ ರಾಜ್ಯ ನಾಯಕರು ಈವರೆಗೂ ಮುಂದಾಗಿಲ್ಲ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತ್ರ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರೊಂದಿಗೆ ಮೈತ್ರಿ ವಿಚಾರದಲ್ಲಿ ಚರ್ಚೆ ನಡೆಸಿದ್ದಾರೆ. ಅದನ್ನು ಹೊರತುಪಡಿಸಿದರೆ ರಾಜ್ಯದ ಯಾವುದೇ ನಾಯಕರು ಮೈತ್ರಿ ವಿಚಾರದಲ್ಲಿ ಜೆಡಿಎಸ್‌ ವರಿಷ್ಠರ ಜತೆ ಮಾತುಕತೆಗೆ ಮುಂದಾಗಿಲ್ಲ. ಹೀಗಾಗಿ ಕಾಂಗ್ರೆಸ್‌ ಅಥವಾ ಬಿಜೆಪಿಗೆ ಬೆಂಬಲ ನೀಡಬೇಕೇ ಎಂಬ ಗೊಂದಲದಲ್ಲಿ ಜೆಡಿಎಸ್‌ ಇದೆ.

ಜೆಡಿಎಸ್‌ ಶಾಸಕಾಂಗ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಲಬುರಗಿ ಮಹಾನಗರ ಪಾಲಿಕೆ ವಿಚಾರದಲ್ಲಿ ಈವರೆಗೆ ಎರಡು ರಾಷ್ಟ್ರೀಯ ಪಕ್ಷದ ನಾಯಕರು ನಮ್ಮ ಪಕ್ಷದ ನಾಯಕರ ಜತೆ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ ಕರೆ ಮಾಡಿ ಮನವಿ ಮಾಡಿದ್ದಾರೆಯೇ ಹೊರತು ಬೇರೆ ಯಾವ ಕಾಂಗ್ರೆಸ್‌ ನಾಯಕರು ಸಂಪರ್ಕ ಮಾಡಿಲ್ಲ. ದೇವೇಗೌಡ ಅವರು ಖರ್ಗೆ ಅವರಿಗೆ ‘ನಿಮ್ಮ ಹೈಕಮಾಂಡ್‌ ರಾಜ್ಯ ಘಟಕಕ್ಕೆ ಸೂಚನೆ ನೀಡಿ, ಅಲ್ಲಿಂದ ಏನಾದರೂ ಮನವಿ ಬಂದರೆ ಪರಿಶೀಲನೆ ನಡೆಸೋಣ’ ಎಂದಿದ್ದಾರೆ. ಆದರೆ, ರಾಜ್ಯದ ಕಾಂಗ್ರೆಸ್‌ ನಾಯಕರಿಗೆ ಜೆಡಿಎಸ್‌ ಜತೆ ಮೈತ್ರಿಗೆ ಅಭಿಲಾಷೆ ಇಲ್ಲ. ಆದರೆ ಬಿಜೆಪಿಯಿಂದ ಮುಖ್ಯಮಂತ್ರಿ ಸೇರಿದಂತೆ ಸಚಿವರು ನಿರಂತರವಾಗಿ ಮನವಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಬೇಡವಾದಾಗ ಎಸೆದಿದ್ದರು:

‘ವಿಧಾನಸಭೆಯಲ್ಲಿ ಕಾಂಗ್ರೆಸ್‌ನವರ ಜತೆ ಮೈತ್ರಿ ಮಾಡಿಕೊಂಡ ಅನುಭವ ಇದೆ. ಬಿಜೆಪಿಯ ಬಿ ಟೀಂ ಎಂದು ನಮ್ಮ ಪಕ್ಷವನ್ನು ಹೀಯಾಳಿಸಿ ಕುತಂತ್ರ ಮಾಡಿದರೂ ಅವರೊಂದಿಗೆ ಸರ್ಕಾರ ರಚನೆ ಮಾಡಲಾಯಿತು. 2023ರಲ್ಲಿ ನಮ್ಮ ಶಕ್ತಿಯನ್ನು ಕುಂದಿಸುವ ನಡವಳಿಕೆ ಇದೆ. ಜೆಡಿಎಸ್‌ ಅನ್ನು ಬೇಕಾದಾಗ ಉಪಯೋಗ ಮಾಡಿಕೊಳ್ಳುವುದು, ಬೇಡವಾದಾಗ ಕಸದ ಬುಟ್ಟಿಗೆ ಎಸೆಯುವುದನ್ನು ಗಮನದಲ್ಲಿಟ್ಟುಕೊಂಡಿದ್ದೇವೆ. ಇನ್ನೂ ಸಮಯವಿದ್ದು, ಮೈತ್ರಿಯ ಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.

ನಾವು ಯಾರ ಅಡಿಯಾಳೂ ಅಲ್ಲ:

ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ಚುನಾವಣೆಯನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಮೇಯರ್‌ ಚುನಾವಣೆಯಲ್ಲಿ ಮೈತ್ರಿ ಕುರಿತು ರಾಜ್ಯಮಟ್ಟದಲ್ಲಿ ಚರ್ಚೆ ಮಾಡಿಲ್ಲ. ಅದರ ಅಗತ್ಯವೂ ಅವರಿಗಿರಲಿಲ್ಲ. ಕಾಂಗ್ರೆಸ್‌ಗೆ ಬಿಜೆಪಿಯ ಬಿ ಟೀಂ ಎಂದು ನಿರೂಪಿಸಬೇಕು. ಜನತೆಯ ಮುಂದೆ ಹೋಗಲು ಬೇರೆ ಬಂಡವಾಳ ಇಲ್ಲ. ಪಕ್ಷದ ಶಕ್ತಿಯನ್ನು ಕುಂದಿಸುವ ಕುತಂತ್ರ ನಡೆಯುತ್ತಿದೆ. ಬಿಜೆಪಿ ತೆಕ್ಕೆಗೆ ಕಳುಹಿಸಬೇಕು ಎಂದು ಒಂದು ಗುಂಪು ಇದೆ. ಕಾಂಗ್ರೆಸ್ಸಿಗರು ಜಾತ್ಯತೀತ ಶಕ್ತಿಗಳು ಉಳಿಯಬೇಕು ಎಂದು ಒಂದೆಡೆ ಹೇಳುತ್ತಾರೆ. ಮತ್ತೊಂದೆಡೆ ನಮ್ಮ ಪಕ್ಷವನ್ನು ಸರ್ವನಾಶ ಮಾಡಬೇಕು ಎಂಬ ಷಡ್ಯಂತ್ರ ನಡೆಯುತ್ತಿದೆ. ನಾವು ಯಾರಿಗೂ ಅಡಿಯಾಳು ಅಲ್ಲ. ಪಕ್ಷದ ಕಾರ್ಯಕರ್ತರ ದುಡಿಮೆ ಇದ್ದು, ಸ್ವಾಭಿಮಾನ ಇದೆ ಎಂದು ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಇನ್ನೂ ಟೈಂ ಇದೆ, ಚರ್ಚಿಸಿ ನಿರ್ಧಾರ

ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡ ಅನುಭವ ಇದೆ. ನಮ್ಮನ್ನು ಬಿಜೆಪಿಯ ಬಿ ಟೀಂ ಎಂದು ಹೀಯಾಳಿಸಿದ್ದರು. ಜೆಡಿಎಸ್ಸನ್ನು ಬೇಕಾದಾಗ ಬಳಸಿಕೊಂಡು ಬೇಡವಾದಾಗ ಕಸದ ಬುಟ್ಟಿಗೆ ಎಸೆಯುತ್ತಾರೆ. ಕಲಬುರಗಿ ಪಾಲಿಕೆ ಮೈತ್ರಿಗೆ ಇನ್ನೂ ಸಮಯವಿದೆ. ಚರ್ಚೆ ನಡೆಸಿ ನಿರ್ಧರಿಸುತ್ತೇವೆ.

- ಎಚ್‌.ಡಿ.ಕುಮಾರಸ್ವಾಮಿ

ಜೆಡಿಎಸ್‌ ನಾಯಕ