Asianet Suvarna News Asianet Suvarna News

ಬೆಂಗಳೂರು-ತುಮಕೂರು ನಿತ್ಯ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು ಹಾಗೂ ತುಮಕೂರು ನಡುವೆ ನಿತ್ಯ ಪ್ರಯಾಣಿಸುವವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್... ಏನದು..?

After 9 Month Bengaluru Tumkur Train Service begins snr
Author
Bengaluru, First Published Dec 8, 2020, 1:44 PM IST

ತುಮಕೂರು (ಡಿ.08):  ಕೊರೋನಾ ಮಹಾಮಾರಿಯಿಂದಾಗಿ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ತುಮಕೂರು-ಯಶವಂತಪುರ ಪ್ಯಾಸೆಂಜರ್‌ ರೈಲು ಸಂಚಾರ ಆರಂಭಗೊಂಡಿದೆ. ಬೆಳಿಗ್ಗೆ 7.30ಕ್ಕೆ ತುಮಕೂರು-ಯಶವಂತಪುರ ಪ್ಯಾಸೆಂಜರ್‌ ರೈಲು ಸಂಚಾರ ಆರಂಭಿಸಿದ್ದು, ಪ್ರತಿನಿತ್ಯ ಬೆಂಗಳೂರಿಗೆ ಉದ್ಯೋಗಗಳಿಗೆ ತೆರಳುವವರು ಸಂತಸದಿಂದಲೇ ಪ್ರಯಾಣ ಬೆಳೆಸಿದರು.

ಕಳೆದ 9 ತಿಂಗಳ ಹಿಂದೆ ಕೊರೋನಾ ಸೋಂಕಿನ ರೌದ್ರಾವತಾರದಿಂದ ಜನರನ್ನು ರಕ್ಷಿಸಲು ಕೇಂದ್ರ ಸರ್ಕಾರ ರೈಲು ಸಂಚಾರವನ್ನು ಸ್ಥಗಿತಗೊಳಿಸಿತ್ತು. ಅಂದಿನಿಂದ ಇಂದಿನವರೆಗೆ ಪ್ಯಾಸೆಂಜರ್‌ ರೈಲುಗಳು ಓಡಾಟ ಮಾಡುತ್ತಿರಲಿಲ್ಲ. ಜತೆಗೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಟಿಕೆಟ್‌ ಸಹ ವಿತರಿಸಲಾಗುತ್ತಿರಲಿಲ್ಲ.

ಕೊರೋನಾ ಆರ್ಭಟ ದೇಶಾದ್ಯಂತ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸೋಮವಾರ ತುಮಕೂರು-ಯಶವಂತಪುರ ಪ್ಯಾಸೆಂಜರ್‌ ರೈಲು ಸಂಚಾರಕ್ಕೆ ಸಂಸದ ಜಿ.ಎಸ್‌. ಬಸವರಾಜು ಅವರು ಪ್ರಯಾಣಿಕರಿಗೆ ಮಾಸ್ಕ್‌ ವಿತರಿಸುವ ಮೂಲಕ ಚಾಲನೆ ನೀಡಿದರು.

ಮಂಗಳೂರು - ಬೆಂಗಳೂರು ಮಧ್ಯೆ ವಿಶೇಷ ರೈಲು : ಇಲ್ಲಿದೆ ಟೈಮ್ ಟೇಬಲ್ ...

ನಂತರ ಮಾತನಾಡಿದ ಸಂಸದ ಜಿ.ಎಸ್‌. ಬಸವರಾಜು, ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ಪ್ಯಾಸೆಂಜರ್‌ ರೈಲು ಸಂಚಾರ ಆರಂಭವಾಗಿದ್ದು, ತುಮಕೂರಿನಿಂದ ಯಶವಂತಪುರಕ್ಕೆ ಪ್ರತಿನಿತ್ಯ ತೆರಳುತ್ತಿದೆ. ಸದ್ಯಕ್ಕೆ ಯಶವಂತಪುರದ ಬದಲು ಕೆಂಪೇಗೌಡ ರೈಲು ನಿಲ್ದಾಣದವರೆಗೂ ಈ ರೈಲು ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟರೈಲ್ವೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಸಂಪೂರ್ಣವಾಗಿ ರೈಲು ಸಂಚಾರ ಆರಂಭವಾಗುವವರೆಗೂ ಮೆಜೆಸ್ಟಿಕ್‌ ವರೆಗೆ ಈ ರೈಲು ತೆರಳಲಿ. ರೈಲುಗಳ ಸಂಚಾರ ಸಂಪೂರ್ಣವಾಗಿ ಆರಂಭವಾದ ಬಳಿಕ ಯಶವಂತಪುರಕ್ಕೆ ಸೀಮಿತಗೊಳಿಸಲಿ ಎಂದರು.

ಪ್ಯಾಸೆಂಜರ್‌ ರೈಲು ಸಂಚಾರ ಇಲ್ಲದೇ ಇದ್ದುದರಿಂದ ತುಮಕೂರಿನಿಂದ ಬೆಂಗಳೂರಿಗೆ ಪ್ರತಿನಿತ್ಯ ಉದ್ಯೋಗಗಳಿಗೆ ತೆರಳುವವರಿಗೆ ತುಂಬಾ ತೊಂದರೆಯಾಗಿತ್ತು. ಇದೀಗ ಈ ರೈಲು ಸಂಚಾರ ಆರಂಭವಾಗಿರುವುದು ತುಂಬಾ ಅನುಕೂಲಕರವಾಗಿದೆ ಎಂದರು.

ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್‌ ಮಾತನಾಡಿ, ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ಪ್ಯಾಸೆಂಜರ್‌ ರೈಲು ಸಂಚಾರವನ್ನು ಮತ್ತೆ ಆರಂಭಿಸಿರುವುದು ಸ್ವಾಗತಾರ್ಹ. ಇದರಿಂದ ಪ್ರತಿನಿತ್ಯ ಬೆಂಗಳೂರಿಗೆ ಕೆಲಸ ಕಾರ್ಯಗಳಿಗೆ ತೆರಳುವವರಿಗೆ ತುಂಬಾ ಅನುಕೂಲವಾಗಲಿದೆ ಎಂದರು.

ರೈಲಿನಲ್ಲಿ ಪ್ರಯಾಣಿಸುವವರು ತಮ್ಮ ಆರೋಗ್ಯ ದೃಷ್ಠಿಯಿಂದ ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ಮಾಸ್ಕ್‌ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಸಲಹೆ ನೀಡಿದರು.

ತುಮಕೂರು-ಯಶವಂತಪುರ ಪ್ಯಾಸೆಂಜರ್‌ ರೈಲಿಗೆ ಮಾತ್ರ ನಗರದ ರೈಲ್ವೆ ನಿಲ್ದಾಣದ ಕೌಂಟರ್‌ನಲ್ಲಿ ಪ್ರಯಾಣಿಕರಿಗೆ ಕಾಯ್ದಿರಿಸದ ಟಿಕೆಟ್‌ ವಿತರಿಸಲಾಗುತ್ತದೆ. ಉಳಿದ ಇನ್ಯಾವುದೇ ರೈಲುಗಳಿಗೆ ಕೌಂಟರ್‌ನಲ್ಲಿ ಟಿಕೆಟ್‌ ನೀಡಲಾಗುವುದಿಲ್ಲ. ಉಳಿದ ರೈಲುಗಳಿಗೆ ಆನ್‌ಲೈನ್‌ನಲ್ಲೇ ಟಿಕೆಟ್‌ ಬುಕಿಂಗ್‌ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌, ರಾಣಿಚೆನ್ನಮ್ಮ ಎಕ್ಸ್‌ಪ್ರೆಸ್‌, ಧಾರವಾಡ ಇಂಟರ್‌ಸಿಟಿ ಹಾಗೂ ರಾತ್ರಿ ಹೊಸಪೇಟೆ ಎಕ್ಸ್‌ಪ್ರೆಸ್‌ ರೈಲುಗಳು ಇಂದಿನಿಂದ ಸಂಚಾರ ಆರಂಭಿಸಿವೆ. ಈ ರೈಲುಗಳಿಗೆ ಕಾಯ್ದಿರಿಸದ ಟಿಕೆಟ್‌ ನೀಡಲಾಗುವುದಿಲ್ಲ. ಆನ್‌ಲೈನ್‌ನಲ್ಲೇ ಟಿಕೆಟ್‌ ಕಾಯ್ದಿರಿಸಬೇಕಾಗಿದೆ ಎಂದು ರೈಲ್ವೆ ಇಲಾಖೆ ವಾಣಿಜ್ಯ ನಿರೀಕ್ಷಕ ಧನಂಜಯ್ಯ ತಿಳಿಸಿದ್ದಾರೆ.

ಈಗ ಆರಂಭವಾಗಿರುವ ಪ್ಯಾಸೆಂಜರ್‌ ರೈಲಿನಲ್ಲಿ ಕೋವಿಡ್‌ ತಡೆಗಾಗಿ ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ. ಯಾವುದೇ ಕಾರಣಕ್ಕೂ ಕೋವಿಡ್‌ ಮುಂಜಾಗ್ರತೆ ಕಾಪಾಡದವರಿಗೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್‌, ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗದ ಎಡಿಆರ್‌ಎಲ್‌ ಲಕ್ಷ್ಮಣ್‌ಸಿಂಗ್‌, ಎಸಿಎಂ ಇಕ್ಬಾಲ್‌ ಅಹಮದ್‌, ಸ್ಟೇಷನ್‌ ಮ್ಯಾನೇಜರ್‌ ರಮೇಶ್‌ಬಾಬು ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios