ಕಾಂಗ್ರೆಸ್ ನಿಂದ 47 ವರ್ಷಗಳ ನಂತರ ಒಕ್ಕಲಿಗರಿಗೆ: ಬಿಜೆಪಿಯಲ್ಲಿ 33 ವರ್ಷಗಳ ನಂತರ ಅರಸು ಜನಾಂಗಕ್ಕೆ ಟಿಕೆಟ್
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು 47 ವರ್ಷಗಳ ನಂತರ ಒಕ್ಕಲಿಗರಿಗೆ, ಬಿಜೆಪಿ 33 ವರ್ಷಗಳ ನಂತರ ಅರಸು ಜನಾಂಗದವರಿಗೆ ಟಿಕೆಟ್ ನೀಡಿದೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು 47 ವರ್ಷಗಳ ನಂತರ ಒಕ್ಕಲಿಗರಿಗೆ, ಬಿಜೆಪಿ 33 ವರ್ಷಗಳ ನಂತರ ಅರಸು ಜನಾಂಗದವರಿಗೆ ಟಿಕೆಟ್ ನೀಡಿದೆ.
ಕಾಂಗ್ರೆಸ್ ಪಕ್ಷವು 1952 ರಲ್ಲಿ ಒಕ್ಲಲಿಗ ಜನಾಂಗದ ಎಚ್.ಸಿ. ದಾಸಪ್ಪ ಅವರಿಗೆ ಟಿಕೆಟ್ ನೀಡಿತ್ತು. ಅವರು ಕೆಎಂಪಿಪಿ ಅಭ್ಯರ್ಥಿಯಾಗಿದ್ದ ವೀರಶೈವ ಜನಾಂಗದ ಎಂ.ಎಸ್. ಗುರುಪಾದಸ್ವಾಮಿ ಅವರ ಎದುರು ಸೋತಿದ್ದರು. ದ್ವಿಸದಸ್ಯ ಕ್ಷೇತ್ರದಲ್ಲಿ ಪ.ಜಾತಿ ಎಡಗೈನ ಎನ್. ರಾಚಯ್ಯ ಗೆದ್ದಿದ್ದರು. ನಂತರ 1957 ರಲ್ಲಿ ದೇವಾಂಗ ಜನಾಂಗದ ಎಂ. ಶಂಕರಯ್ಯ, ಪ.ಜಾತಿ ಬಲಗೈನ ಎಸ್.ಎಂ. ಸಿದ್ದಯ್ಯ ಅವರಿಗೆ ಟಿಕೆಟ್ ನೀಡಿತ್ತು. ಇಬ್ಬರು ಗೆದ್ದಿದ್ದರು. 1962 ರಲ್ಲಿ ದೇವಾಂಗ ಜನಾಂಗದ ಎಂ. ಶಂಕರಯ್ಯ ಪುನಾರಾಯ್ಕೆಯಾದರು.
1967,1971, 1977 ರಲ್ಲಿ ಒಕ್ಕಲಿಗ ಜನಾಂಗದ ಎಚ್.ಡಿ. ತುಳಸಿದಾಸ್ ಅವರಿಗೆ ಟಿಕೆಟ್ ನೀಡಿತ್ತು. ಅವರು ಮೂರು ಬಾರಿಯೂ ಗೆದ್ದಿದ್ದರು. ಇವರು ಎಚ್.ಸಿ. ದಾಸಪ್ಪ ಅವರ ಪುತ್ರರು.
ನಂತರ 1980 ರಲ್ಲಿ ವೀರಶೈವ ಜನಾಂಗದ ಎಂ. ರಾಜಶೇಖರಮೂರ್ತಿ ಅವರಿಗೆ ಟಿಕೆಟ್ ನೀಡಿತ್ತು. ಅವರು ಗೆದ್ದಿದ್ದರು. 1984, 1989, 1996, 1999, 2004 ರಲ್ಲಿ ಅರಸು ಜನಾಂಗದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಕಾಂಗ್ರೆಸ್ ನೀಡಿತ್ತು. ಈ ಪೈಕಿ 2004 ರಲ್ಲಿ ಸೋತಿದ್ದರು. 1991 ರಲ್ಲಿ ಕಾಂಗ್ರೆಸ್ ಪಕ್ಷವು ಅರಸು ಜನಾಂಗದ ಚಂದ್ರಪ್ರಭಾ ಅರಸು ಅವರಿಗೆ ಟಿಕೆಟ್ ನೀಡಿತ್ತು. ಅವರು ಗೆದ್ದಿದ್ದರು.
ಕಾಂಗ್ರೆಸ್ 1998 ರಲ್ಲಿ ನಾಯಕ ಜನಾಂಗದ ಎಸ್. ಚಿಕ್ಕಮಾದು ಅವರಿಗೆ ಟಿಕೆಟ್ ನೀಡಿತ್ತು ಅವರು ಸೋತರು. 2009, 2014 ರಲ್ಲಿ ಕುರುಬ ಜನಾಂಗದ ಎಚ್. ವಿಶ್ವನಾಥ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಮೊದಲ ಬಾರಿ ಗೆದ್ದರು, ಎರಡನೇ ಬಾರಿ ಸೋತಿದ್ದರು. 2019 ರಲ್ಲಿ ಕುರುಬ ಜನಾಂಗದ ಸಿ.ಎಚ್. ವಿಜಯಶಂಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತರು.
ಈ ಬಾರಿ ಕಾಂಗ್ರೆಸ್ ಒಕ್ಕಲಿಗ ಜನಾಂಗದ ಎಂ. ಲಕ್ಷ್ಮಣ್ ಅವರಿಗೆ ಟಿಕೆಟ್ ನೀಡಿದೆ.
ಬಿಜೆಪಿಯು 1991 ರಲ್ಲಿ ಅರಸು ಜನಾಂಗದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಿತ್ತು.ಅವರು ಸೋತಿದ್ದರು. ಇದಾದ ನಂತರ ಈ ಬಾರಿ ಅವರ ದತ್ತು ಪುತ್ರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಿದೆ.
1998, 1999, 2004, 2009 ರಲ್ಲಿ ಬಿಜೆಪಿಯು ಕುರುಬ ಜನಾಂಗದ ಸಿ.ಎಚ್. ವಿಜಯಶಂಕರ್ ಅವರಿಗೆ ಟಿಕೆಟ್ ನೀಡಿತ್ತು. ಈ ಪೈಕಿ ಅವರು 1998, 2004 ರಲ್ಲಿ ಗೆದ್ದು, ಉಳಿದೆರಡು ಬಾರಿ ಸೋತರು.
1977ರ ನಂತರ ಒಕ್ಕಲಿಗರು, 1980 ರ ನಂತರ ವೀರಶೈವ- ಲಿಂಗಾಯಿತರು ಈ ಕ್ಷೇತ್ರದಲ್ಲಿ ಆಯ್ಕೆಯಾಗಲು ಸಾಧ್ಯವಾಗಿರಲಿಲ್ಲ. ಆದರೆ 2014, 2019 ರಲ್ಲಿ ಒಕ್ಕಲಿಗ ಜನಾಂಗದ ಪ್ರತಾಪ್ ಸಿಂಹ ಸತತ ಎರಡು ಬಾರಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದರು.
ವೀರಶೈವ ಜನಾಂಗಕ್ಕೆ ಸೇರಿದ ಕೆ.ಪಿ. ಶಾಂತಮೂರ್ತಿ, ಪ. ಮಲ್ಲೇಶ್, ಬಿ.ಎಸ್. ಮರಿಲಿಂಗಯ್ಯ, ಎ.ಎಸ್. ಗುರುಸ್ವಾಮಿ,
ಒಕ್ಕಲಿಗ ಜನಾಂಗಕ್ಕೆ ಸೇರಿದ ಡಿ. ಮಾದೇಗೌಡ, ಜಿ.ಟಿ. ದೇವೇಗೌಡ, ಬಿ.ಎ. ಜೀವಿಜಯ, ನ್ಯಾ. ಚಂದ್ರಶೇಖರಯ್ಯ ಅವರು ಜನತಾ ಪರಿವಾರದಿಂದ, ವೀರಶೈವರಾದ ತೋಂಟದಾರ್ಯ ಅವರು ಬಿಜೆಪಿಯಿಂದ ಸ್ಪರ್ಧಿಸಿ, ಸೋತಿದ್ದಾರೆ.
ಮೈಸೂರು ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಚಾಮರಾಜನಗರ ಕೂಡ ಸೇರಿತ್ತು. 1962 ರಲ್ಲಿ ಏಕ ಸದಸ್ಯವಾದಾಗ ಚಾಮರಾಜನಗರ ಪ್ರತ್ಯೇಕ ಮೀಸಲು ಕ್ಷೇತ್ರವಾಯಿತು. ಮೈಸೂರು ಸಾಮಾನ್ಯ ಕ್ಷೇತ್ರವಾಯಿತು. 2009 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಮೈಸೂರಿಗೆ ಜಿಲ್ಲೆಯ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ, ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳು ಸೇರಿವೆ.