ಯಲಹಂಕ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಐದು ದಿನ ನಡೆಯಲಿರುವ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2025’ ವೀಕ್ಷಣೆಗೆ ತೆರಳುವವರಿಗಾಗಿ ಮೆಜೆಸ್ಟಿಕ್, ಶಿವಾಜಿನಗರ, ಹೆಬ್ಬಾಳ, ಐಟಿಪಿಎಲ್, ಕೆಂಗೇರಿ ಸೇರಿದಂತೆ 9 ಪ್ರಮುಖ ಸ್ಥಳಗಳಿಂದ ಉಚಿತ ವೋಲ್ವೋ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. 

ಬೆಂಗಳೂರು (ಫೆ.06): ಯಲಹಂಕ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಐದು ದಿನ ನಡೆಯಲಿರುವ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2025’ ವೀಕ್ಷಣೆಗೆ ತೆರಳುವವರಿಗಾಗಿ ಮೆಜೆಸ್ಟಿಕ್, ಶಿವಾಜಿನಗರ, ಹೆಬ್ಬಾಳ, ಐಟಿಪಿಎಲ್, ಕೆಂಗೇರಿ ಸೇರಿದಂತೆ 9 ಪ್ರಮುಖ ಸ್ಥಳಗಳಿಂದ ಉಚಿತ ವೋಲ್ವೋ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಚಾರ ದಟ್ಟಣೆ ತಪ್ಪಿಸಲು ರಕ್ಷಣಾ ಸಚಿವಾಲಯದಿಂದಲೇ ವೋಲ್ವೋ ಬಸ್‌ಗಳನ್ನು ಗುತ್ತಿಗೆ ಪಡೆಯಲಾಗಿದೆ. ವೈಮಾನಿಕ ಪ್ರದರ್ಶನವನ್ನು ಸುಸೂತ್ರವಾಗಿ ನಡೆಸಲು ರಕ್ಷಣಾ ಇಲಾಖೆ, ಭಾರತೀಯ ವಾಯುಸೇನೆ, ಜಿಲ್ಲಾಡಳಿತ, ಬಿಬಿಎಂಪಿ, ಸಿಐಎಸ್‌ಎಫ್‌, ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್, ಸಂಚಾರ ಪೊಲೀಸರು, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಅಗತ್ಯ ಸಿದ್ಧತೆ ಮಾಡಿಕೊಂಡಿವೆ.

ಸುಗಮ ಸಂಚಾರಕ್ಕಾಗಿ ಪೊಲೀಸ್, ಬಿಬಿಎಂಪಿ, ಹೆದ್ದಾರಿ ಪ್ರಾಧಿಕಾರ ಮತ್ತು ಮೆಟ್ರೋ ರೈಲು ನಿಗಮಗಳೊಂದಿಗೆ ಸಮನ್ವಯ ಸಭೆಗಳನ್ನು ನಡೆಸಲಾಗಿದೆ. ಯಲಹಂಕ ಸುತ್ತಲಿನ ರಸ್ತೆಗಳನ್ನು ಅಗಲೀಕರಣ ಮಾಡಲಾಗಿದೆ. ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನು ದಟ್ಟಣೆ ಉಂಟಾಗುವ ಪ್ರದೇಶಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ ದಟ್ಟಣೆಯನ್ನು ಪರಿಹರಿಸಲು ಜಂಟಿ ವೈಮಾನಿಕ ಸಮೀಕ್ಷೆಯನ್ನು ನಡೆಸಲಾಗುತ್ತದೆ. ರಿಯಲ್ ಟೈಮ್ ಮಾಹಿತಿಯನ್ನು ಸಂಚಾರ ಪೊಲೀಸರೊಂದಿಗೆ ಹಂಚಿಕೊಂಡು ಪರಿಹಾರ ಕ್ರಮ ಕೈಗೊಳ್ಳಲಾಗುತ್ತದೆ. ಪ್ರದರ್ಶನ ಸ್ಥಳದಲ್ಲಿ ಆಗಮಿಸುವ ಮತ್ತು ನಿರ್ಗಮಿಸುವವರಿಗಾಗಿ ಪ್ರತ್ಯೇಕ ಮಾರ್ಗಗಳನ್ನು ಕಲ್ಪಿಸಲಾಗಿದೆ. ಭದ್ರತೆಗೆ ಪೊಲೀಸರು ಹಾಗೂ ಸೇನೆಯ ವಿವಿಧ ವಿಭಾಗಗಳು ಅಗತ್ಯ ಕ್ರಮಗಳನ್ನು ಕೈಗೊಂಡಿವೆ. ತುರ್ತು ಪರಿಸ್ಥಿತಿ ಎದುರಿಸಲು ಅಣಕು ಪ್ರದರ್ಶನಗಳನ್ನು ನಡೆಸಲಾಗಿದೆ.

ಇಂದಿರಾ ಕ್ಯಾಂಟೀನ್ ವ್ಯವಸ್ಥೆ: ಪಾರ್ಕಿಂಗ್ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಸೇರಿದಂತೆ ವಿವಿಧ ಉಪಹಾರ ಕೋರ್ಟ್‌ಗಳು, ಗೂಡಂಗಡಿಗಳು ಇರಲಿವೆ. ಕುಡಿಯುವ ನೀರಿನ ಕೇಂದ್ರಗಳು, ನೆರವಿನ ಕೇಂದ್ರಗಳು, ವೈದ್ಯಕೀಯ ಸಹಾಯ ಕೇಂದ್ರಗಳು, ಪ್ರಾಥಮಿಕ ಹೃದಯ ಚಿಕಿತ್ಸೆ ಕೇಂದ್ರ, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ. ವೈಮಾನಿಕ ಪ್ರದರ್ಶನಕ್ಕೆ ಭೇಟಿ ನೀಡುವವರ ಸುರಕ್ಷತೆಗಾಗಿ ಬಹುಹಂತದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗೃಹ ಸಚಿವಾಲಯ, ಬೆಂಗಳೂರು ಪೊಲೀಸ್, ಸಿಐಎಸ್ಎಫ್ ಮತ್ತು ಗುಪ್ತಚರ ಸಂಸ್ಥೆಗಳ ಸಹಯೋಗದೊಂದಿಗೆ ಬಹು-ಹಂತದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. 

ಫೆಬ್ರವರಿ 13, 14 ರಂದು ಬೆಂಗಳೂರಿನ ಈ ಭಾಗದ ಕಾಲೇಜುಗಳಿಗೆ ರಜೆ ಘೋಷಣೆ

ಕಾರ್ಯಾಚರಣೆ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ, ದಿನದ 24 ತಾಸು ಸಿಸಿ ಕ್ಯಾಮೆರಾ ಲೈವ್ ಮಾನಿಟರಿಂಗ್, ಸಂದರ್ಶಕರು, ಪ್ರದರ್ಶಕರು ಮತ್ತು ವಿಐಪಿಗಳಿಗಾಗಿ ಮೀಸಲಾದ ತಪಾಸಣಾ ವಲಯಗಳು. ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ವಿಪತ್ತು ನಿರ್ವಹಣೆ ಮತ್ತು ಅಗ್ನಿ ಸುರಕ್ಷತಾ ಸಮಿತಿಗಳು, ತಡೆರಹಿತ ಸಂವಹನಕ್ಕಾಗಿ ತಾತ್ಕಾಲಿಕ ಮೊಬೈಲ್ ಟವರ್ ಮತ್ತು ನೆಟ್‌ವರ್ಕ್ ಬೂಸ್ಟರ್‌ಗಳನ್ನು ಅಳವಡಿಸಲಾಗಿದೆ. ಮೆಜೆಸ್ಟಿಕ್, ಶಿವಾಜಿನಗರ, ಹೆಬ್ಬಾಳ, ಐಟಿಪಿಎಲ್, ಕೆಂಗೇರಿ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್, ವಿಜಯನಗರ ಟಿಟಿಎಂಸಿ, ಒರಾಯನ್ ಮಾಲ್ ರಾಜಾಜಿನಗರ ಬಸ್ ನಿಲ್ದಾಣ ಮತ್ತು ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಕ್ಯಾಂಪಸ್.