ಜಗದೀಶ ವಿರಕ್ತಮಠ 

ಬೆಳಗಾವಿ(ಡಿ.23): ಗ್ರಾಹಕರೇ ಎಚ್ಚರ ಬೆಳ್ಳಗೆ ಇರುವುದೆಲ್ಲ ಹಾಲಲ್ಲ ಎಂಬಂತೆ ಬೆಣ್ಣೆಯಂತಿರುವುದು ಬೆಣ್ಣೆ ಅಲ್ಲ. ಒಂದು ವೇಳೆ ಬಣ್ಣ ನೋಡಿ ಶುದ್ಧ ಬೆಣ್ಣೆ ಹಾಗೂ ತುಪ್ಪ ತೆಗೆದುಕೊಂಡು ಮನೆಗೆ ಹೊದಲ್ಲಿ ನಿಮಗೆ ಮೂರು ನಾಮದ ಜತೆಗೆ ಮಾರಣಾಂತಿಕ ರೋಗ ಅಂಟಿಕೊಳ್ಳುವುದು ಗ್ಯಾರಂಟಿ..! 

ಹೌದು. ಶುದ್ಧ ಹಾಲಿನ ಉತ್ಪನ್ನಗಳಿಂದ ತಯಾರಿಸಲಾಗಿರುವ ಕುಂದಾಗೆ ಹೆಸರುವಾಸಿಯಾಗಿರುವ ಬೆಳಗಾವಿ ನಗರದಲ್ಲಿ ಶುದ್ದ ಬೆಣ್ಣೆ ಹಾಗೂ ತುಪ್ಪ ಎಂದು ಕಲಬೆರಕೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ದಂಧೆ ವ್ಯವಸ್ತಿತವಾಗಿ ನಡೆದಿದೆ. ಬಣ್ಣ ನೋಡಿ ನೂರಾರು ರುಪಾಯಿ ಕೊಟ್ಟು ಖರೀದಿಸಿದಲ್ಲಿ ಮೋಸ ಹೋಗುವುದರ ಜತೆಗೆ ದುಡ್ಡು ಕೊಟ್ಟು ಅನೇಕ ಮಾರಣಾಂತಿಕ ರೋಗ ಕೊಂಡು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ನಗರದಲ್ಲಿ ಅವ್ಯಾಹತವಾಗಿ ಕಲಬೆರಕೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳದೇ ಕೈ ಚೆಲ್ಲಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದಾರೆ ಎಂದು ಗ್ರಾಹಕರು ಹಿಡಿಶಾಪ ಹಾಕುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತುಪ್ಪಾ ತಿನ್ನುವುದರಿಂದ ತಲೆ ಚುರುಕಾಗುವುದರ ಜತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿದು ಒಯ್ಯುವ ಗ್ರಾಹಕರಿಗೆ ಅರ್ಧಕ್ಕರ್ಧ ಕಲಬೆರಕೆ ಬೆಣ್ಣೆ ಅಥವಾ ತುಪ್ಪಾ ಕೊಟ್ಟು ‘ಇದು ಶುದ್ಧ ಬೆಣ್ಣೆ ಅಥವಾ ತುಪ್ಪ ನಮ್ಮಲ್ಲಿ ಸಿಗುವಷ್ಟು ಗುಣಮಟ್ಟದ ಬೆಣ್ಣೆ ಬೇರೆಲ್ಲೂ ಸಿಗುವುದಿಲ್ಲ’ ಎಂದು ನಂಬಿಸಿ ಮಾರಾಟ ಮಾಡಿ ಗ್ರಾಹಕರಿಗೆ ನೇರಾ ನೇರ ಮೋಸ ಮಾಡುತ್ತಿದ್ದಾರೆ. 

ಸದಾ ಜನರಿಂದ ತುಂಬಿ ತುಳುಕುವ ಗಣಪತಿಗಲ್ಲಿಯಲ್ಲಿರುವ ಜನಪ್ರಿಯ ಚಹಾ ಅಂಗಡಿಯೊಂದರಲ್ಲಿ ಕಲಬೆರಕೆ ಬೆಣ್ಣೆಯನ್ನು ಯಾವುದೇ ಅಳುಕು ಇಲ್ಲದೆ ಮಾರಾಟ ಮಾಡಲಾಗುತ್ತಿದೆ. ಅದನ್ನು ಮನೆಗೆ ಒಯ್ದು ಕಾಯಿಸಿದರೆ ಅದು ಕರಗಿ ತುಪ್ಪವಾಗುವುದಿಲ್ಲ. ಬದಲಾಗಿ ಲೊಳೆ ಲೊಳೆಯಾಗುತ್ತದೆ. ಕುದಿಯುತ್ತದೆ. ನೋಡಿದರೆ ಭಾರೀ ಕಲಬೆರಕೆ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಗ್ರಾಹಕರೇ ಅಂಗಡಿಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಗಣಪತಿ ಗಲ್ಲಿ ಅಷ್ಟೇ ಅಲ್ಲ ನಗರದ ಪ್ರಮುಖ ಗಲ್ಲಿಗಳು ಸೇರಿದಂತೆ ವಿವಿಧೆಡೆ ಇಂತಹ ಕಲಬೆರಕೆ ಮಾಡಿದ ಬೆಣ್ಣೆಯನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಗೆ ಭಾರೀ ಪ್ರಮಾಣದಲ್ಲಿ ಮೋಸ ಮಾಡುವುದರ ಜತೆಗೆ ರಾಜಾರೋಷವಾಗಿ ಹಗಲು ದರೋಡೆ ನಡೆದಿದೆ. ಈ ದಂಧೆ ನಗರಾದ್ಯಂತ ಭಾರೀ ಪ್ರಮಾಣದಲ್ಲಿ ವ್ಯಾಪಿಸಿದೆ. ಬೆಣ್ಣೆಯಲ್ಲಿ ಮೈದಾ ಹಿಟ್ಟು ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಕಲಬೆರಕೆ ಮಾಡಲಾಗುತ್ತಿದೆ. ಬೆಣ್ಣೆ ಕಾಯಿಸಿದ ಸಂದರ್ಭದಲ್ಲಿ ಪಾತ್ರೆಯ ಕೆಳಭಾಗದಲ್ಲಿ ಕರಿ ಯದಾಗಿರುವ ಪದಾರ್ಥ ಕಾಣುತ್ತದೆ. ನಗರದಲ್ಲಿ ಹಾಡಹಗಲೇ ಸಾರ್ವಜನಿಕರ ಹಾಗೂ ಅಧಿಕಾರಿಗಳ ಕಣ್ಣಿಗೆ ಮಣ್ಣೆರಿಸುವುದರ ಜತೆಗೆ ಅಕ್ರಮ ದಂಧೆ ನಡೆಸುತ್ತಿರುವವರ ವಿರುದ್ಧ ಸಂಬಂ ಧಪಟ್ಟ ಇಲಾಖೆಯಾಗಲಿ ಅಥವಾ ಅಧಿಕಾರಿಗಳಾಗಲಿ ಕ್ರಮಕೈಗೊಂಡಿಲ್ಲ. ನಿಯಮ ಬಾಹಿರ ಕಾರ್ಯಕ್ಕೂ ತಮಗೇನು ಸಂಬಂಧವಿಲ್ಲವೆಂಬಂ ತೆ ಕೈಕಟ್ಟಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು ಇಂತಹ ಇಲಾಖೆ ಇದ್ದರೆಷ್ಟು ಎಂದು ಕಿಡಿಕಾರುತ್ತಿದ್ದಾರೆ. 

ಶುದ್ಧ ಬೆಣ್ಣೆ ಎಂದು ಮಾರುವ ಇಂತಹ ಕಲಬೆರಕೆ ಬೆಣ್ಣೆಗೆ ಪ್ರತಿ ಕೆಜಿಗೆ ಅಂಗಡಿಕಾರರು ತೆಗೆದುಕೊಳ್ಳುವುದು 500 ಗಣಪತಿ ಗಲ್ಲಿಯಲ್ಲಿನ ಚಹಾ ಅಂಗಡಿಯೊಂದರಲ್ಲಿ ಪ್ರತಿ ಕೆಜಿಗೆ 600 ತೆಗೆದುಕೊಳ್ಳುತ್ತಾರೆ. ಇದಲ್ಲದೆ ವಿವಿಧ ಗಲ್ಲಿಗಳಲ್ಲಿ ಮಾರುವ ಇಂತಹ ಕಲಬೆರಕೆ ಬೆಣ್ಣೆಗೆ ಕೆಲ ಅಂಗಡಿಕಾರರು ಇನ್ನೂ ಹೆಚ್ಚಿಗೆ ದರ ಪಡೆದರೆ, ಮತ್ತೆ ಕೆಲವರು ಕಡಿಮೆ ದರ ತೆಗೆದುಕೊಳ್ಳುತ್ತಿದ್ದಾರೆ. 

ನಗರದಲ್ಲಿರುವ ಎಲ್ಲ ಅಂಗಡಿಕಾರರೂ ಕಲಬೆರಕೆ ಬೆಣ್ಣೆಯನ್ನೇ ಮಾರುವುದಿಲ್ಲ. ಶುದ್ಧ ಬೆಣ್ಣೆಯನ್ನೂ ಮಾರುತ್ತಿದ್ದಾರೆ. ಆದರೆ ಕಲಬೆರಕೆ ಬೆಣ್ಣೆ ಮಾರುವ ಅಂಗಡಿಕಾರರು ಹೆಚ್ಚುತ್ತಿದ್ದಾರೆ. ಇದು ಶುದ್ಧ ಬೆಣ್ಣೆ ಮಾರುವವರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅವರಿಗೂ ಕಲಬೆರಕೆ ಮಾಡುವಂತೆ ಪ್ರಚೋದನೆ ನೀಡಿದಂತಾಗುತ್ತಿದೆ. ಇಂತಹ ಬೆಣ್ಣೆ ಒಯ್ದ ತಪ್ಪಿಗೆ ಕಾಯಿಸಿ ತುಪ್ಪ ಮಾಡಿ ತಿಂದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. 

ಮನೆಯಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಇದನ್ನು ಸೇವಿಸುತ್ತಾರೆ. ಅಲ್ಲದೆ ಬಾಣಂತಿಯರು, ಗರ್ಭಿಣಿಯರು ಸೇವಿಸಿ ದರೆ ಅದರ ನೇರ ಪರಿಣಾಮ ಬೀರುತ್ತಿದೆ. ಇದನ್ನು ತಿಂದು ಅನಾರೋಗ್ಯವಾದರೆ ಆಸ್ಪತ್ರೆಗೆ ಸೇರ ಬೇಕು. ಅನವಶ್ಯಕವಾಗಿ ದುಡ್ಡು ಕಳೆದುಕೊಳ್ಳಬೇಕು. ಇನ್ನಾದರೂ ಸಂಬಂಧಿತ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಇಂತಹ ಕಲಬೆರಕೆಗೆ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 

ಈ ಬಗ್ಗೆ ಮಾತನಾಡಿದ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ.ಕೆ.ಎಚ್ ಅವರು,ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಲಬೆರಿಕೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಅಂತಹವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಶಿಸ್ತು ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಕಲಬೆರಿಕೆ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಇದ್ದಲ್ಲಿ ಪಾಲಿಕೆ ಅಧಿಕಾರಿಗಳಿಗೆ ತಿಳಿಸದಲ್ಲಿ ಕಲಬೆರಿಕೆ ದಂಧೆಯನ್ನು ಮಟ್ಟ ಹಾಕಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.