Asianet Suvarna News Asianet Suvarna News

Tumakur : ವೀರಶೈವ ಲಿಂಗಾಯತ ಒಳಪಂಗಡವನ್ನು ಓಬಿಸಿಗೆ ಸೇರಿಸಿ

ವೀರಶೈವ, ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಿ, ಉನ್ನತ ಹುದ್ದೆಗಳಲ್ಲಿ ನಮ್ಮ ಮಕ್ಕಳಿಗೂ ಅವಕಾಶ ದೊರೆಯುವಂತೆ ಮಾಡುವುದು ಮಹಾಸಭಾದ ಪ್ರಮುಖ ಉದ್ದೇಶವಾಗಿದೆ ಎಂದು ಶಾಸಕ ಹಾಗೂ ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ತಿಳಿಸಿದರು.

Add Veerashaiva Lingayat sub  caste to OBC Says Eshwar Khandre snr
Author
First Published Nov 13, 2022, 4:40 AM IST

 ತುಮಕೂರು (ನ.13): ವೀರಶೈವ, ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಿ, ಉನ್ನತ ಹುದ್ದೆಗಳಲ್ಲಿ ನಮ್ಮ ಮಕ್ಕಳಿಗೂ ಅವಕಾಶ ದೊರೆಯುವಂತೆ ಮಾಡುವುದು ಮಹಾಸಭಾದ ಪ್ರಮುಖ ಉದ್ದೇಶವಾಗಿದೆ ಎಂದು ಶಾಸಕ ಹಾಗೂ ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ತಿಳಿಸಿದರು.

ಸಿದ್ಧಗಂಗಾ ಮಠದ ವಸ್ತು ಪ್ರದರ್ಶನದ ಆವರಣದಲ್ಲಿ ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ವತಿಯಿಂದ ಆಯೋಜಿಸಿದ್ದ ಬೆಂಗಳೂರು ವಿಭಾಗೀಯ ಮಟ್ಟದ ಮಹಿಳಾ ಮತ್ತು ಯುವ ಕಾರ್ಯಕರ್ತರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.

ನಮ್ಮಲ್ಲಿ ಬೇಧ, ಭಾವ ಸರಿಯಲ್ಲ

ಎಲ್ಲಾ ಧರ್ಮ, ಜಾತಿಗಳಿಗೂ ಮೊದಲ ಸಂಸತ್ತು ಎಂದು ಎನಿಸಿಕೊಂಡಿರುವ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದವರು ಬಸವೇಶ್ವರರು. ಮೌಢ್ಯದಿಂದ ಸಮಾಜವನ್ನು ಹೊರತರಬೇಕೆಂಬುದು ಅವರ ಕನಸಾಗಿತ್ತು. ಇಂತಹ ಕನಸನ್ನು ನನಸು ಮಾಡಲು ನಾವೆಲ್ಲರೂ ಕಟಿಬದ್ಧರಾಗಬೇಕಿದೆ. ಲಿಂಗಾಯತ, ವೀರಶೈವ ಬೇರೆ ಬೇರೆ ಎಂಬ ಪ್ರತಿಪಾದನೆ ಹೆಚ್ಚಾಗಿರುವುದು ಖೇದಕರ ವಿಚಾರವಾಗಿದೆ. ವೀರಶೈವ, ಲಿಂಗಾಯತ ಎಂಬುದು ಶರಣ ಸಮಾಜವೆಂಬ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ಇಬ್ಬರ ಆಚಾರ, ವಿಚಾರದಲ್ಲಿ ವ್ಯತ್ಯಾಸವಿಲ್ಲ. ಅಂಗೈಯಲ್ಲಿ ಲಿಂಗವಿಟ್ಟು ಪೂಜಿಸುವ ನಾವೆಲ್ಲರೂ ವೀರಶೈವ ಲಿಂಗಾಯತರು. ನಮ್ಮಲ್ಲಿ ಬೇಧ, ಭಾವ ಸರಿಯಲ್ಲ. ಇದೇ ಈ ಎರಡು ದಿನಗಳ ಕಾರ್ಯಾಗಾರ ಮತ್ತು ಸಮಾವೇಶದ ಪ್ರಮುಖ ಉದ್ದೇಶ ಎಂದರು.

ಹಾಗನಲ್‌ ಕುಮಾರಸ್ವಾಮಿಗಳಿಂದ ಸಮಾಜದ ಐಕ್ಯತೆ ಮತ್ತು ಅಭಿವೃದ್ಧಿಯ ಮಂತ್ರದೊಂದಿಗೆ ಆರಂಭವಾದ ಅಖಿಲ ಭಾರತ ಲಿಂಗಾಯತ ಮಹಾಸಭಾ ಅಲ್ಪಸಂಖ್ಯಾತರನ್ನು ಒಳಗೊಂಡಂತೆ ಎಲ್ಲಾ ಧರ್ಮಿಯರಿಗೂ ಮಾರ್ಗದರ್ಶನ ಮಾಡುತ್ತಾ ಬಂದಿದೆ. ಶೈಕ್ಷಣಿಕ, ಆರ್ಥಿಕವಾಗಿ ಮುಂದುವರೆದ ಸಮಾಜ ಒಂದು ರೀತಿಯಲ್ಲಿ ನಿಂತ ನೀರಾಗಿದೆ. ಇದನ್ನು ಮತ್ತೆ ಪುನಶ್ಚೇತನಗೊಳಿಸಿ, ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಗೆ ತರುವುದು ಮಹಾಸಭಾದ ಉದ್ದೇಶವಾಗಿದೆ. ಪಾಶ್ಚಾತ್ಯ ಸಂಸ್ಕೃತಿ ಅನುಸರಿಸುತ್ತಿರುವ ನಮ್ಮ ಯುವಜನಾಂಗಕ್ಕೆ ಸರಿಯಾದ ಮಾರ್ಗದರ್ಶನ ಮಾಡಿ ಅವರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ಆಗಬೇಕಿದೆ. ಕಾಲ್‌ರ್‍ ಮಾಕ್ಸ್‌ಗಿಂತ ಮೊದಲೇ 12ನೇ ಶತಮಾನದಲ್ಲಿಯೇ ವರ್ಗ, ವರ್ಣ, ಲಿಂಗಬೇಧ ರಹಿತ ಸಮ ಸಮಾಜದ ಕನಸಿನೊಂದಿಗೆ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಿತ್ತಿದವರು ಅಣ್ಣ ಬಸವಣ್ಣ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಬೆಂಗಳೂರು ವಿಭಾಗೀಯ ಕಾರ್ಯಕ್ರಮದ ಪ್ರಧಾನ ಕಾರ್ಯದರ್ಶಿ ನಟರಾಜು ಸಾಗರನಹಳ್ಳಿ, ಮಹಿಳೆಯರು ಮತ್ತು ಯುವಕರಿಗೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಇದರಲ್ಲಿ ಕೃಷಿ, ಕೈಗಾರಿಕೆ, ಸಂಸ್ಕೃತಿ, ಪರಂಪರೆಗಳ ಕುರಿತು ಗೋಷ್ಠಿಗಳು ನಡೆಯಲಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಿರಿಯ ಉಪಾಧ್ಯಕ್ಷ ಡಾ.ಎನ್‌.ತಿಪ್ಪಣ್ಣ ವಹಿಸಿದ್ದರು. ಕಾರ್ಯಾಗಾರ ಸಮಿತಿಯ ಅಧ್ಯಕ್ಷ ಎಸ್‌.ಕೆ.ರಾಜಶೇಖರ್‌,ಯುವ ಘಟಕದ ಅಧ್ಯಕ್ಷ ಮನೋಹರ್‌ ಅಬ್ಬಿಗೆರೆ, ಮಹಿಳಾ ಘಟಕದ ರಾಜ್ಯಾಧ್ಯಕ್ಷ ಬಿ.ವೈ.ಅರುಣಾದೇವಿ, ಟಿ.ಬಿ.ಶೇಖರ್‌,ಎಂ.ಎನ್‌.ಶಶಿಧರ್‌, ಗೋವರ್ಧನ್‌, ಲೋಕೇಶ್ವರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯಿಂದ ವಸ್ತು ಪ್ರದರ್ಶನದ ಆವರಣದವರೆಗೂ ಬೆಳ್ಳಿ ರಥದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಿರಿಯ ಉಪಾಧ್ಯಕ್ಷ ಡಾ.ಎನ್‌.ತಿಪ್ಪಣರನ್ನು ಮತ್ತು ಡಾ. ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರವನ್ನು ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮುಖೇನ ಕರೆದೊಯ್ಯಲಾಯಿತು.

ಪ್ರಸ್ತುತ 2.50 ಲಕ್ಷದಷ್ಟಿರುವ ಸದಸ್ಯರನ್ನು 10 ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಸದಸ್ಯತ್ವದ ಅರ್ಜಿಗಳ ವಿತರಣೆ ಆರಂಭವಾಗಿದೆ. ಎಲ್ಲರೂ ಸದಸ್ಯತ್ವ ಪಡೆದುಕೊಳ್ಳಬೇಕಿದೆ. ಮಹಾಸಭಾದ 23ನೇ ಅಧಿವೇಶನದ ಡಿಸೆಂಬರ್‌ 24-25 ಮತ್ತು 26ರಂದು ದಾವಣಗೆರೆಯಲ್ಲಿ ನಡೆಯಲಿದೆ.

ವೀರಣ್ಣ ಉಪಾಧ್ಯಕ್ಷ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ

ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಕೈಗಾರಿಕಾ ಕ್ಷೇತ್ರಕ್ಕೆ ವೀರಶೈವ, ಲಿಂಗಾಯತ ಸಮುದಾಯ ಸಾಕಷ್ಟುಕೊಡುಗೆ ನೀಡಿದೆ. ಆದರೂ ಇನ್ನು ಬಲಗೊಳ್ಳುವ ಅಗತ್ಯವಿದೆ. ಹೆಸರಿಗೆ ಮಾತ್ರ ಲಿಂಗಾಯತರಾದರೆ ಸಾಲದು, ಆಚರಣೆಯಲ್ಲಿಯೂ ಲಿಂಗಾಯತರಾಗಬೇಕು. ಸಂಸ್ಕಾರಯುತ ಬದುಕು, ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ, ಐಕ್ಯತೆ ಮಂತ್ರ ನಮ್ಮದಾಗಬೇಕು.

ಸಿದ್ದಲಿಂಗ ಸ್ವಾಮೀಜಿ ಸಿದ್ಧಗಂಗಾ ಮಠಾಧ್ಯಕ್ಷ

Follow Us:
Download App:
  • android
  • ios