ಚೆಫ್‌ಟಾಕ್, ರಿವಾರ್ಡ್ಸ್ ಸಂಸ್ಥೆ ವಿರುದ್ಧ ಹಲವು ದೂರು ಹಿನ್ನೆಲೆ| ಆಹಾರ ಪೂರೈಕೆ ಗುತ್ತಿಗೆ ‘ಅದಮ್ಯ ಚೇತನ’ ಸಂಸ್ಥೆಗೆ ಸಿಗುವುದು ಬಹುತೇಕ ಖಚಿತ|
ಬೆಂಗಳೂರು(ಫೆ.05): ನಗರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭದಿಂದ ಈವರೆಗೆ ಆಹಾರ ಸರಬರಾಜು ಗುತ್ತಿಗೆ ಪಡೆದುಕೊಂಡಿದ್ದ ಚೇಫ್‌ಟಾಕ್ ಮತ್ತು ರಿವಾರ್ಡ್ಸ್ ಸಂಸ್ಥೆಯ ವಿರುದ್ಧ ಸಾಕಷ್ಟು ಆರೋಪ ಹಾಗೂ ಪೊಲೀಸ್ ತನಿಖೆ ನಡೆಯುತ್ತಿರುವುದರಿಂದ ಇಂದಿರಾ ಕ್ಯಾಂಟೀನ್‌ಗೆ ಆಹಾರ ಸರಬರಾಜು ಮಾಡುವ ಗುತ್ತಿಗೆ ಶ್ರೀಮತಿ ಗಿರಿಜಾ ಶಾಸ್ತ್ರಿ ಸ್ಮಾರಕ ಟ್ರಸ್ಟ್ (ಅದಮ್ಯಚೇತನ) ಪಾಲಾಗುವುದು ಬಹುತೇಕ ನಿಚ್ಚಳವಾಗಿದೆ.
ಚೆಫ್‌ಟಾಕ್ ಮತ್ತು ರಿವಾರ್ಡ್ಸ್ ಸಂಸ್ಥೆಯ ಗುತ್ತಿಗೆ ಕಳೆದ ಆಗಸ್ಟ್ 15ಕ್ಕೆ ಮುಕ್ತಾಯಗೊಂಡಿದೆ. ಹೀಗಾಗಿ ನಾಲ್ಕು ಪ್ಯಾಕೇಜ್‌ಗಳಲ್ಲಿ ನಗರದ ಸ್ಥಿರ ಹಾಗೂ ಮೊಬೈಲ್ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಗೆ ಕಳೆದ ಡಿಸೆಂಬರ್‌ನಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ನಾಲ್ಕು ಪ್ಯಾಕೇಜ್ ಪೈಕಿ ಮೂರು ಪ್ಯಾಕೇಜ್‌ನಲ್ಲಿ ಚೇಫ್‌ಟಾಕ್ ಮತ್ತು ರಿವಾರ್ಡ್ ಸಂಸ್ಥೆಗಳು ಅತಿ ಕಡಿಮೆ ದರ ನಮೂದಿಸಿದ್ದವು. ಇನ್ನೊಂದು ಪ್ಯಾಕೇಜ್ ಅಂತಿಮಗೊಳ್ಳಬೇಕಿದೆ. ಅದರಲ್ಲಿ ಅದಮ್ಯ ಚೇತನ ಸಂಸ್ಥೆ ಅತಿ ಕಡಿಮೆ ದರ ನಮೂದಿಸಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ನಡುವೆ ಚೆಫ್‌ಟಾಕ್ ಮತ್ತು ರಿವಾರ್ಡ್ಸ್ ಸಂಸ್ಥೆಯ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಿಬಿಎಂಪಿ ಅಧಿಕಾರಿಗಳೇ ಈ ಎರಡು ಸಂಸ್ಥೆಗಳು 2017ರ ಆಗಸ್ಟ್‌ನಿಂದ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆಯಲ್ಲಿ ಅವ್ಯವಹಾರ ಮಾಡಿವೆ ಎಂದು ದೂರು ದಾಖಲಿಸಿದ್ದರು. ಜತೆಗೆ ಈ ಸಂಸ್ಥೆಗಳು ಆಹಾರದ ಗುಣಮಟ್ಟದ ಬಗ್ಗೆ ಸಾಕಷ್ಟು ಆರೋಪ ಕೇಳಿ ಬಂದಿದ್ದವು. ಹಾಗಾಗಿ, ಈ ಸಂಸ್ಥೆಗಳಿಗೆ ಮತ್ತೆ ಆಹಾರ ಪೂರೈಕೆ ಗುತ್ತಿಗೆ ನೀಡಬಾರದು ಎಂಬ ತೀರ್ಮಾನಕ್ಕೆ ಪಾಲಿಕೆ ಬಂದಿರುವುದರಿಂದ ನಗರದ ಎಲ್ಲ ಕ್ಯಾಂಟೀನ್‌ಗಳಿಗೆ ಮುಂದಿನ ಅವಧಿಯ ಆಹಾರ ಪೂರೈಕೆ ಗುತ್ತಿಗೆ ‘ಅದಮ್ಯ ಚೇತನ’ ಸಂಸ್ಥೆಗೆ ಸಿಗುವುದು ಬಹುತೇಕ ಖಚಿತವಾಗಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
