ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ ಇಲ್ಲದ ವಾಹನಗಳ ವಿರುದ್ಧ ಕ್ರಮ: ಸಚಿವ ರಾಮಲಿಂಗಾರೆಡ್ಡಿ
ನಿರ್ಭಯ ಯೋಜನೆ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿರುವ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ (ವಿಎಲ್‌ಟಿ)ಗೆ ಪೂರಕವಾಗಿ ಶಾಂತಿನಗರ ಸಾರಿಗೆ ಇಲಾಖೆ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು.
ಬೆಂಗಳೂರು (ಜೂ.20): ನಿರ್ಭಯ ಯೋಜನೆ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿರುವ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ (ವಿಎಲ್‌ಟಿ)ಗೆ ಪೂರಕವಾಗಿ ಶಾಂತಿನಗರ ಸಾರಿಗೆ ಇಲಾಖೆ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ಸಾರ್ವನಿಕ ಸೇವೆ ನೀಡುವ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದಾಗಿ ಜಿಪಿಎಸ್ ಆಧಾರಿತ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಮತ್ತು ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
ಹೀಗೆ ವಾಹನಗಳಲ್ಲಿ ಅಳವಡಿಸಲಾಗುವ ವಿಎಲ್‌ಟಿಯಿಂದ ಬರುವ ಮಾಹಿತಿಯನ್ನು ವೀಕ್ಷಿಸಲು ಹಾಗೂ ಪ್ಯಾನಿಕ್ ಬಟನ್ ಮೂಲಕ ಬರುವ ಸಂದೇಶವನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಆರಂಭಿಸಲಾಗಿದೆ ಎಂದರು. 2019ರ ನಂತರದ ವಾಹನಗಳಲ್ಲಿ ವಿಎಲ್‌ಟಿ ಅಳವಡಿಕೆ ಮಾಡಲಾಗಿದ್ದು, ಅದಕ್ಕಿಂತ ವಾಹನಗಳಲ್ಲಿ ಆ ವ್ಯವಸ್ಥೆಯಿಲ್ಲ. ಅದರಂತೆ ರಾಜ್ಯದಲ್ಲಿ 6 ಲಕ್ಷ ವಾಹನಗಳು ವಿಎಲ್‌ಟಿ ಮತ್ತು ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳಬೇಕಿದೆ.
ಸದ್ಯ 1 ಸಾವಿರ ವಾಹನಗಳು ಮಾತ್ರ ಈ ವ್ಯವಸ್ಥೆ ಅಳವಡಿಸಿಕೊಂಡಿವೆ. ಉಳಿದ ವಾಹನಗಳು ಸೆ. 10ರೊಳಗೆ ನೂತನ ವ್ಯವಸ್ಥೆ ಅಳವಡಿಸಿಕೊಳ್ಳಬೇಕಿದ್ದು, ಅದಾದ ನಂತರ ವಿಎಲ್‌ಟಿ ಇಲ್ಲದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ವಿಎಲ್‌ಟಿ ಅಳವಡಿಸಿದ ವಾಹನಗಳ ವೇಗ, ಯಾವ ಮಾರ್ಗದಲ್ಲಿ ಸಂಚರಿಸುತ್ತಿವೆ, ವಾಹನ ಮಾಲೀಕರ ವಿವರ ಎಲ್ಲವೂ ತಿಳಿಯಲಿದೆ. ಯಾರಾದರೂ ಪ್ರಯಾಣಿಕರು ವಾಹನದಲ್ಲಿನ ಪ್ಯಾನಿಕ್ ಬಟನ್ ಒತ್ತಿದರೆ ಕೂಡ ಆ ವಾಹನವನ್ನು ಪತ್ತೆ ಮಾಡಿ ಪ್ರಯಾಣಿಕರ ನೆರವಿಗೆ ಹೋಗಲು ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಸಹಕಾರಿಯಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ ರೈತರಿಗೆ ಅನುಕೂಲ: ಶಾಸಕ ಜನಾರ್ದನ ರೆಡ್ಡಿ
ಅಲ್ಲದೆ, ಮಜಲು ವಾಹನಗಳು ತಮ್ಮ ಮಾರ್ಗ ಬದಲಿಸಿದರೂ ಪತ್ತೆಯಾಗಲಿದ್ದು, ಅಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಸಾರ್ವಜನಿಕ ಸೇವೆ ನೀಡುವ ವಾಣಿಜ್ಯ ವಾಹನಗಳು, ಸರ್ಕಾರಿ ಸಾರಿಗೆ ಬಸ್‌ಗಳು, ನ್ಯಾಷನಲ್ ಪರ್ಮಿಟ್ ಹೊಂದಿರುವ ಸರಕು ಸಾಗಣೆ ವಾಹನಗಳು ವಿಎಲ್‌ಟಿ ಅಳವಡಿಕೆ ಕಡ್ಡಾಯವಾಗಿದೆ ಎಂದು ಹೇಳಿದರು. ಸಾರಿಗೆ ಇಲಾಖೆ ಆಯುಕ್ತ ಯೋಗೀಶ್ ಇದ್ದರು.