Asianet Suvarna News Asianet Suvarna News

ಯಾರದ್ದೋ ಜಾಗ ಉಳಿಸಲು ಅಮಾಯಕರ ಮನೆಗಳ ಅರಣ್ಯಕ್ಕೆ ಸೇರಿಸಿದ ಆರೋಪ: ಮಡಿಕೇರಿಯ 17 ಕುಟುಂಬಗಳ ಸ್ಥಿತಿಯೇನು?

ಇತ್ತೀಚೆಗೆ ವ್ಯಕ್ತಿಯೊಬ್ಬರು ಸರ್ವೇ ನಂಬರ್ 289/1 ರ ಜಾಗದ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದರಿಂದ ಹಕ್ಕುಪತ್ರ ಇದ್ದರೂ ಬಡಕುಟುಂಬಗಳು ಈಗ ಮನೆ ಕಳೆದುಕೊಳ್ಳುವ ಆತಂಕ ಎದುರಿಸುವಂತೆ ಆಗಿದೆ. 

Accused of adding to the forests of madikeri innocent houses to save space gvd
Author
First Published Sep 22, 2024, 10:22 PM IST | Last Updated Sep 22, 2024, 10:22 PM IST

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಸೆ.21): ಇವರೆಲ್ಲರೂ ಮೂರುವರೆ ದಶಕಗಳ ಹಿಂದಿನಿಂದ ಎರಡು ಮೂರು ಸೆಂಟ್ ಜಾಗದಲ್ಲಿ ಹೇಗೋ ಸಣ್ಣದೊಂದು ಮನೆ ನಿರ್ಮಿಸಿಕೊಂಡು ಬದುಕು ದೂಡುತ್ತಿದ್ದವರು. ಆದರೆ ಇತ್ತೀಚೆಗೆ ವ್ಯಕ್ತಿಯೊಬ್ಬರು ಸರ್ವೇ ನಂಬರ್ 289/1 ರ ಜಾಗದ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದರಿಂದ ಹಕ್ಕುಪತ್ರ ಇದ್ದರೂ ಬಡಕುಟುಂಬಗಳು ಈಗ ಮನೆ ಕಳೆದುಕೊಳ್ಳುವ ಆತಂಕ ಎದುರಿಸುವಂತೆ ಆಗಿದೆ. ಹೌದು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಕಾಯ್ದಿಟ್ಟ ಪೂರ್ವ ಅರಣ್ಯ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿ ವಿರಾಜಪೇಟೆಯ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಗೌಡ ಸಮಾಜ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಕಾವೇರಿ ಸೇನೆಯ ರವಿ ಚಂಗಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. 

ಆದರೆ ಹೈಕೋರ್ಟ್ ನಲ್ಲಿ ಪ್ರಕರಣವನ್ನು ಕೈಬಿಟ್ಟಿದ್ದರಿಂದ ರವಿಚಂಗಪ್ಪ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂಕೋರ್ಟ್ ಒತ್ತುವರಿಯಾಗಿರುವ ಅರಣ್ಯ ಭೂಮಿ ಸರ್ವೆ ಮಾಡಿ ವರದಿ ನೀಡುವಂತೆ ಮಡಿಕೇರಿ ಅರಣ್ಯ ಅಧಿಕಾರಿಗಳಿಗೆ ಸೂಚಿಸಿತ್ತು. ಮತ್ತೆ ಸರ್ವೆ ಮಾಡಿರುವ ಅರಣ್ಯ ಇಲಾಖೆ ಒತ್ತುವರಿಯಾಗಿರುವ 289/1 ರ 52 ಎಕರೆ 80 ಸೆಂಟ್ ಜಾಗದಲ್ಲಿ ಒಂದಷ್ಟು ಅರಣ್ಯ ಪ್ರದೇಶವನ್ನು ಬಿಟ್ಟು ಮೂರುವರೆ ದಶಕಗಳ ಹಿಂದೆ ಅಂದರೆ 1991 ರಲ್ಲಿಯೇ ಹಕ್ಕುಪತ್ರ ಪಡೆದಿರುವ ಮನೆಗಳಿರುವ ಜಾಗವನ್ನು ಒತ್ತುವರಿಯಾಗಿರುವ ಅರಣ್ಯ ಭೂಮಿಯೆಂದು ವರದಿ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಇದುವರೆಗೆ ನಮ್ಮದು ಅಂತ ಒಂದು ಸೂರು ಇದೆ ಎಂದು ನೆಮ್ಮದಿಯಿಂದ ಬದುಕುತ್ತಿದ್ದ 17 ಕುಟುಂಬಗಳಿಗೆ ನೊಟೀಸ್ ಬಂದಿದೆ. 

ಚಿಕ್ಕಮಗಳೂರು: ನರಸಿಂಹರಾಜಪುರ ಪಟ್ಟಣದಲ್ಲಿ‌ ರಾಶಿ ರಾಶಿ ಕಸ, ಗ್ರಾಮಸ್ಥರ‌ ಆಕ್ರೋಶ

ಇದು ಈ ಕುಟುಂಬಗಳ ನೆಮ್ಮದಿಯನ್ನೇ ಕಿತ್ತುಕೊಂಡಿದೆ. ಹೌದು ಮಡಿಕೇರಿ ಕಾಯ್ದಿಟ್ಟ ಅರಣ್ಯ ಭೂಮಿ ಎನ್ನಲಾಗಿರುವ ಜಾಗವನ್ನು ವಿರಾಜಪೇಟೆಯ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಗೌಡ ಸಮಾಜದ ಕಟ್ಟಡ ಸೇರಿದಂತೆ ಇತರರು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವು ಮಾಡಬೇಕು ಎಂದು ಕೋರ್ಟ್ ರವಿಚಂಗಪ್ಪ ಮೆಟ್ಟಿಲೇರಿದ್ದರು. ಇದನ್ನು ಕೋರ್ಟ್ ಸರ್ವೆ ಮಾಡುವಂತೆ ಸೂಚಿಸಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ಮಾಡಿದರು. ಆದರೆ ನ್ಯಾಯಾಲಯಕ್ಕೆ ಗೊಂದಲ ಮೂಡಿಸುವುದಕ್ಕಾಗಿ ಕೆ.ಜಿ. ಬೋಪಯ್ಯ ಅವರನ್ನು ರಕ್ಷಿಸುವುದಕ್ಕಾಗಿ ಅವರ ಮನೆಯನ್ನು ಸರ್ವೆಯಿಂದ ಹೊರಗಿಟ್ಟು ಈ ಸರ್ವೆ ನಂಬರ್ ಜಾಗದಲ್ಲೇ ಇರದ ಇತರೆ ಹದಿನೇಳು ಮನೆಗಳನ್ನು ಒಳಗೊಂಡಂತೆ 12 ಸರ್ವೆಗಳನ್ನು ವರದಿಯಲ್ಲಿ ಸೇರಿಸಿದ್ದಾರೆ ಎಂದು ರವಿ ಚಂಗಪ್ಪ ದೂರಿದ್ದಾರೆ. 

ಆ ವರದಿಯನ್ನು ಕೋರ್ಟಿಗೆ ನೀಡಿರುವುದರಿಂದ ಅಮಾಯಕ ಜನರಿಗೆ ಸೂರು ಕಳೆದುಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ ಎಂದು ರವಿ ಚಂಗಪ್ಪ ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತ್ರ ನಾವು ಕೂರ್ಗ್ ರಾಜ್ಯವಿದ್ದಾಗಲೇ ಡಿನೋಟಿಫೈ ಆಗಿರುವ ಜಾಗವನ್ನು ಖರೀದಿಸಿ ಮಾಡಿರುವ ಮನೆ ಇದು. ಜೊತೆಗೆ ಇದರ ವಿರುದ್ಧ 2018 ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಪ್ರಕರಣವನ್ನು ಕೈಬಿಟ್ಟಿದೆ, ಆದರೂ ನನ್ನ ಮೇಲಿನ ದ್ವೇಷಕ್ಕೆ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದಾರೆ. 

ಸಿದ್ದರಾಮಯ್ಯ ಸರ್ಕಾರ ಯಾವುದೇ ಕ್ಷೇತ್ರಕ್ಕೆ ಒಂದು ರೂಪಾಯಿ ಅನುದಾನ ನೀಡಿಲ್ಲ: ವಿಜಯೇಂದ್ರ

ಸುಪ್ರೀಂ ಕೋರ್ಟ್ ಸರ್ವೆ ಮಾಡಲು ಅರಣ್ಯ ಇಲಾಖೆಗೆ ಸೂಚಿಸಿತ್ತು. ಅದರಂತೆ ಸರ್ವೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದಾರೆ. ವರದಿಯಲ್ಲಿ ನನ್ನ ಮನೆ ಸೇರಿಲ್ಲ. ಇದು ಅರಣ್ಯ ಇಲಾಖೆಯೇ ಸರ್ವೆ ಮಾಡಿ ನೀಡಿರುವ ವರದಿ. ಆದರೆ ಅಮಾಯಕ ಬಡವರ ಮನೆಗಳು ಅರಣ್ಯ ಭೂಮಿಯಲ್ಲಿ ಸೇರಿವೆ ಎಂದು ವರದಿಯಲ್ಲಿ ಇರುವುದು ಬೇಸರದ ವಿಷಯ ಎಂದಿದ್ದಾರೆ. ಏನೇ ಆಗಲಿ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ಬಡವರು ಮನೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿರುವುದು ವಿಪರ್ಯಾಸದ ಸಂಗತಿ.

Latest Videos
Follow Us:
Download App:
  • android
  • ios