ಕಲಬುರಗಿ(ಜ.02): ಗೂಡ್ಸ್ ರೈಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಬುಧವಾರ ರಾತ್ರಿ ನಡೆದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಗೂಡ್ಸ್ ವಾಹನದ ಸಿಬ್ಬಂದಿ ಕೂಡುವ ವಿಶೇಷ ಬೋಗಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಘಟನೆ ನಡೆದ ವೇಳೆ ಬೋಗಿಯಲ್ಲಿ 6 ಜನ ಸಿಬ್ಬಂದಿಯಿದ್ದರು. ಸದ್ಯ ಎಲ್ಲ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬೆಂಕಿ ಹತ್ತಿದ ತಕ್ಷಣವೇ ಸಿಬ್ಬಂದಿ ಬೋಗಿ ಬಿಟ್ಟು ಹೊರಗೆ ಓಡಿ ಬಂದಿದ್ದಾರೆ. ರೈಲಿನಲ್ಲಿದ್ದ ಕೆಲ ವಸ್ತುಗಳು ಸುಟ್ಟು ಭಸ್ಮವಾಗಿವೆ. 

ಅಗ್ನಿ ಆಕಸ್ಮಿಕದ ವೇಳೆ ಗೂಡ್ಸ್ ವಾಹನ ಚಾಲನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.