ದಾಳಿ ವೇಳೆ ಎಸಿಬಿ ಅಧಿಕಾರಿಗಳ ವಿಚಾರಣೆಗೆ ಸಹಕರಿಸದ ಆರೋಪದ ಮೇಲೆ ವಿಕ್ಟರ್‌ ಸೈಮನ್‌ ಬಂಧನ| ಸೈಮನ್‌ ಸೇರಿದಂತೆ 9 ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ಎಸಿಬಿ ದಾಳಿ| ಹೆಚ್ಚಿನ ವಿಚಾರಣೆಗಾಗಿ ಮಾ.13ರವರೆಗೆ ತನ್ನ ವಶಕ್ಕೆ ಪಡೆದ ಎಸಿಬಿ|  

ಬೆಂಗಳೂರು(ಮಾ.11): ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ದಾಳಿಗೊಳಗಾಗಿದ್ದ ಬಿಎಂಟಿಎಫ್‌ ಇನ್‌ಸ್ಪೆಕ್ಟರ್‌ ವಿಕ್ಟರ್‌ ಸೈಮನ್‌ ಅವರನ್ನು ಬಂಧಿಸಿ, ಮಾ.13ರವರೆಗೆ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿ ವೇಳೆ ಎಸಿಬಿ ಅಧಿಕಾರಿಗಳ ವಿಚಾರಣೆಗೆ ಸಹಕರಿಸದ ಆರೋಪದ ಮೇಲೆ ವಿಕ್ಟರ್‌ ಸೈಮನ್‌ ಅವರನ್ನು ಬಂಧಿಸಲಾಗಿದೆ. ಮಂಗಳವಾರ ಬೆಳಗ್ಗೆ ಸೈಮನ್‌ ಸೇರಿದಂತೆ 9 ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸೈಮನ್‌ಗೆ ಸೇರಿದ ಸ್ಥಳಗಳ ಮೇಲೆ ದಾಳಿ ವೇಳೆ ಆಸ್ತಿಯ ಕುರಿತು ವಿಚಾರಣೆ ನಡೆಸಲಾಯಿತು. ಆದರೆ, ಸಮರ್ಪಕವಾಗಿ ಉತ್ತರ ನೀಡದ ಕಾರಣಕ್ಕಾಗಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಮಾ.13ರವರೆಗೆ ಎಸಿಬಿ ತನ್ನ ವಶಕ್ಕೆ ಪಡೆದುಕೊಂಡಿದೆ.

ಭ್ರಷ್ಟ ಅಧಿಕಾರಿಗಳಿಗೆ ಶಾಕ್: ರಾಜ್ಯದ 28 ಕಡೆ ಎಸಿಬಿ ದಾಳಿ!

ವಿಕ್ಟರ್‌ ಸೈಮನ್‌ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ ವಿದೇಶಿ ಮದ್ಯ ಸೇರಿದಂತೆ 1.75 ಲಕ್ಷ ಮೌಲ್ಯದ 22.36 ಲೀಟರ್‌ ಮದ್ಯ, 7.26 ಲಕ್ಷ ನಗದು ಪತ್ತೆಯಾಗಿತ್ತು. ಅಕ್ರಮವಾಗಿ ಮನೆಯಲ್ಲಿ ಮದ್ಯ ಸಂಗ್ರಹಿಸಿದ ಆರೋಪದ ಮೇರೆಗೆ ಬೆಂಗಳೂರು ನಗರ ಅಬಕಾರಿ ಇಲಾಖೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ತನಿಖೆ ವೇಳೆ 2.28 ಕೋಟಿ ಆಸ್ತಿ ಹೊಂದಿರುವುದು ಗೊತ್ತಾಗಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.