ACB Raids: ಬಿಬಿಎಂಪಿ ಭ್ರಷ್ಟರಿಗೆ ಎಸಿಬಿ ಶಾಕ್‌: 230 ಕೋಟಿ ಹಗರಣ ಪತ್ತೆ

*   27 ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ
*   ಅಕ್ರಮ ಸಂಬಂಧ 45 ದಾಖಲೆ ವಶ
*   ಮೂವರು ಎಸ್ಪಿ ನೇತೃತ್ವದಲ್ಲಿ 200 ಪೊಲೀಸ್‌ ಸಿಬ್ಬಂದಿ ದಾಳಿಗೆ ಸಾಥ್‌
 

ACB Raid on BBMP Office in Bengaluru grg

ಬೆಂಗಳೂರು(ಫೆ.26):  ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA)ದ ಬಳಿಕ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಭ್ರಷ್ಟಾಚಾರ ನಿಗ್ರಹ ದಳ(ACB)ವು ಬಿಸಿ ಮುಟ್ಟಿಸಿದ್ದು, ಬಿಬಿಎಂಪಿ ಮೇಲೆ ಶುಕ್ರವಾರ ದಿಢೀರ್‌ ದಾಳಿ ನಡೆಸಿ ಕೋಟ್ಯಂತರ ಮೊತ್ತದ ಹಗರಣಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದೆ.

ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಗಳೊಂದಿಗೆ ಶಾಮೀಲಾಗಿ ಬಿಬಿಎಂಪಿಯ ಕೇಂದ್ರ ಕಚೇರಿ, ವಲಯ ಹಾಗೂ ಜಂಟಿ ಆಯುಕ್ತರ ಕಚೇರಿಗಳು, ಕಂದಾಯ, ನಗರ ಯೋಜನಾ ವಿಭಾಗ, ಜಾಹೀರಾತು, ಟಿಡಿಆರ್‌, ಆರೋಗ್ಯ, ರಸ್ತೆ ಮತ್ತು ಮೂಲಸೌಕರ್ಯ (ರಾಜಕಾಲುವೆ) ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿರುವ ಬಗ್ಗೆ ಎಸಿಬಿಗೆ ಸಾರ್ವಜನಿಕರಿಂದ ಮೌಖಿಕ ಮತ್ತು ಲಿಖಿತ ದೂರುಗಳು ಬಂದಿದ್ದವು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಎಸಿಬಿ, ಬಿಬಿಎಂಪಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. ಅಂತೆಯೇ ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ 11 ಸ್ಥಳಗಳಲ್ಲಿ 27 ಕಚೇರಿಗಳ ಮೇಲೆ ಬೆಂಗಳೂರು ನಗರ, ಕೇಂದ್ರ ವಲಯ ಹಾಗೂ ಕೇಂದ್ರ ಸ್ಥಾನದ ಮೂವರು ಎಸ್ಪಿಗಳ ನೇತೃತ್ವದಲ್ಲಿ 200 ಪೊಲೀಸರು ಹಠಾತ್‌ ದಾಳಿ(Raid) ನಡೆಸಿ, ಅಕ್ರಮಕ್ಕೆ ಸಂಬಂಧಿಸಿದ 45 ಬಹುಮುಖ್ಯ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ACB Raid: ರೈತನಿಂದ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು

ಪ್ರಾಥಮಿಕ ಹಂತದ ತನಿಖೆಯಲ್ಲಿ ಕೋಟ್ಯಂತರ ತೆರಿಗೆ(Tax) ವಂಚನೆ ಹಾಗೂ ಸಾರ್ವಜನಿಕರ ಹಣ ದುರುಪಯೋಗವಾಗಿರುವುದು ಕಂಡು ಬಂದಿದೆ ಎಂದು ಎಸಿಬಿ ಹೇಳಿದೆ. ಇದೇ ರೀತಿ ನಾಲ್ಕು ತಿಂಗಳ ಹಿಂದೆ ಬಿಡಿಎ ಮೇಲೆ ದಾಳಿ ನಡೆಸಿ ಎಸಿಬಿ, ಸುಮಾರು .1,500 ಕೋಟಿಗೂ ಮಿಗಿಲಾದ ಭೂ ಹಗರಣವನ್ನು(Land Scam) ಬಯಲುಗೊಳಿಸಿದ್ದನ್ನು ಸ್ಮರಿಸಬಹುದಾಗಿದೆ.

ಟಿಡಿಆರ್‌ನಲ್ಲಿ ಮಧ್ಯವರ್ತಿಗಳ ದರ್ಬಾರ್‌:

ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು(TDR) ಸಂಬಂಧಿಸಿದಂತೆ ಮಧ್ಯವರ್ತಿಗಳು, ಭೂ ಮಾಲೀಕರು ಹಾಗೂ ತಮ್ಮ ಕೆಲ ಸಂಬಂಧಿಕರ ಜತೆ ಸೇರಿ ಟಿಡಿಆರ್‌ ಅಧಿಕಾರಿ ಮತ್ತು ಸಿಬ್ಬಂದಿ ಅವ್ಯವಹಾರ ನಡೆಸಿದ್ದಾರೆ. ಆದೂರು, ರಾಮಪುರ, ಸಿಗೇಹಳ್ಳಿ, ವೈಟ್‌ಫೀಲ್ಡ್‌ ಹಾಗೂ ವಾರಣಾಸಿ ಇತ್ಯಾದಿ ಕಡೆಗಳಲ್ಲಿ ಟಿಡಿಆರ್‌ ಸಲ್ಲಿಸಿರುವ ಕಡತಗಳಲ್ಲಿ ಅಕ್ರಮ ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿದೆ.

ನಗರ ಯೋಜನೆಯಲ್ಲಿ 21 ಕಡತ ಪರಿಶೀಲನೆ:

ಖಾಸಗಿ ವ್ಯಕ್ತಿಗಳು ಹಾಗೂ ಬಹುಮಹಡಿ ಕಟ್ಟಡ ನಿರ್ಮಾಣ ಮಾಡುವ ಬಿಲ್ಡ​ರ್‍ಸ್ಗಳೊಂದಿಗೆ ಸೇರಿಕೊಂಡು ನಗರ ಯೋಜನಾ ವಿಭಾಗದ ಅಧಿಕಾರಿ ಮತ್ತು ಎಂಜಿನಿಯರ್‌ಗಳು ಭ್ರಷ್ಟಾಚಾರ(Corruption) ನಡೆಸಿದ್ದು, ಈ ಸಂಬಂಧ ಸುಮಾರು 21 ಕಡತಗಳ ಪ್ರಾಥಮಿಕ ಪರಿಶೀಲನೆಯಿಂದ ಕೋಟ್ಯಂತರ ರು. ಅಕ್ರಮ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂದೇ ಕಾಮಗಾರಿಗೆ ಎರಡೆರಡು ಬಿಲ್ಲು!

ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಎಂಜಿನಿಯರ್‌ಗಳು ಅಕ್ರಮ(Illegal) ವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ಸುಮಾರು 200 ಕಡತಗಳ ಪ್ರಾಥಮಿಕ ತನಿಖೆಯಿಂದ ಒಂದೇ ಕಾಮಗಾರಿಗೆ ಎರಡು ಬಿಲ್ಲುಗಳನ್ನು ಮಂಜೂರು ಮಾಡಿರುವುದು ಕಂಡು ಬಂದಿರುತ್ತದೆ. ಕೆಲ ದಾಖಲೆಗಳನ್ನು ಅಮಾನತುಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ವಿವರಿಸಿದೆ.

ACB Raids ಕಾಲು ನೋವಿನ ಚಿಕಿತ್ಸೆಗೆ 12000 ರೂ ಲಂಚ ಕೇಳಿದ ಸರ್ಕಾರಿ ವೈದ್ಯ, ಸ್ವೀಕರಿಸುವಾಗ ಎಸಿಬಿ ಬಲೆಗೆ

ತೆರಿಗೆ ಸಂಗ್ರಹಿಸದೇ ಸರ್ಕಾರಕ್ಕೆ ಲಾಸ್‌!

ವಾಣಿಜ್ಯ ಕಟ್ಟಡಗಳು ಹಾಗೂ ಮನೆ ಮಾಲೀಕರಿಂದ ಹಣ ಪಡೆದು ಬಿಬಿಎಂಪಿ ನಿಗದಿಪಡಿಸಿದ ಕಂದಾಯಕ್ಕಿಂತ ಕಡಿಮೆ ಕಂದಾಯವನ್ನು ಅಧಿಕಾರಿ ಮತ್ತು ಸಿಬ್ಬಂದಿ ವಸೂಲಿ ಮಾಡಿ ಬಿಬಿಎಂಪಿ ನಷ್ಟ ಉಂಟು ಮಾಡಿದ್ದಾರೆ. ಇನ್ನು ವಾಣಿಜ್ಯ ಕಟ್ಟಡ, ಅಪಾರ್ಟ್‌ಮೆಂಟ್‌ ಮತ್ತು ಪೆಂಟ್‌ ಹೌಸ್‌ಗಳಿಗೆ ಸೂಕ್ತ ಕಂದಾಯ ನಿಗದಿಪಡಿಸಿಲ್ಲ. ಇದಕ್ಕಾಗಿ ಕಟ್ಟಡದ ನಿರ್ಮಾಣದ ವಿಸ್ತೀರ್ಣವನ್ನು ಕಡಿಮೆ ತೋರಿಸಿದ್ದಾರೆ. ಅಲ್ಲದೆ ವ್ಯಕ್ತಿಗಳಿಗೆ ಮಾಲೀಕತ್ವ ಇಲ್ಲದೆ ಇದ್ದರೂ ಸಹ ಖರಾಬು ಹಾಗೂ ಸರ್ಕಾರ ಜಾಗವನ್ನು ಸೇರಿಸಿ ಖಾತೆಯನ್ನು ಮಾಡಿಕೊಟ್ಟು ಅವರಿಂದ ಲಾಭ ಮಾಡಿಕೊಂಡಿದ್ದಾರೆ. ಇನ್ನು ಒಂದು ಖಾಸಗಿ ಆಸ್ಪತ್ರೆ ಹಾಗೂ ಎರಡು ಮಾಲ್‌ಗಳಿಂದ ಕೋಟ್ಯಂತರ ರು. ತೆರಿಗೆ ಹಣ ಸಂಗ್ರಹಿಸದೆ ಸರ್ಕಾರದ ಬೊಕ್ಕಸಕ್ಕೆ ಲಾಸ್‌ ಮಾಡಿದ್ದಾರೆ ಎಂದು ಎಸಿಬಿ ವಿವರಿಸಿದೆ.

ಜಾಹೀರಾತು ವಿಭಾಗದಲ್ಲಿ 230 ಕೋಟಿ ಹಗರಣ ಪತ್ತೆ!

ಬಿಬಿಎಂಪಿಯ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನಗಳು ಹಾಗೂ ಪಿಪಿಪಿ ಮಾದರಿಯಲ್ಲಿ ಬಸ್‌ ತಂಗುದಾಣ, ಪಾದಚಾರಿ ಮಾರ್ಗ(Sky Walk) ನಿರ್ಮಾಣ ಮಾಡುವ ಏಜೆನ್ಸಿಗಳು ಮತ್ತು ಖಾಸಗಿ ವ್ಯಕ್ತಿಗಳಿಂದ ವಾರ್ಷಿಕ ಗುತ್ತಿಗೆ ಹಣ, ಬಾಡಿಗೆ, ಜಾಹೀರಾತು ಪ್ರದರ್ಶನ ಹಣ ಹಾಗೂ ಜಿಎಸ್‌ಟಿ(GST) ಮೊತ್ತಗಳನ್ನು ನಿಯಮಾನುಸಾರ ಸಂಗ್ರಹಣೆ ಮಾಡದೆ ಜಾಹೀರಾತು ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಭ್ರಷ್ಟಚಾರ ಎಸಗಿದ್ದಾರೆ. ಹೀಗೆ ಬಿಬಿಎಂಪಿಗೆ ಬರಬೇಕಾದ ಸುಮಾರು .230 ಕೋಟಿ ಬಾಕಿ ಹಣವನ್ನು ವಸೂಲು ಮಾಡದಿರುವುದು ಕಂಡು ಬಂದಿದೆ. ಕಳೆದ ವರ್ಷ ಬಸ್‌ ನಿಲ್ದಾಣಗಳಲ್ಲಿ ಜಾಹೀರಾತು ಪ್ರಕಟಣೆಗೆ ಗುತ್ತಿಗೆ ನೀಡದೆ ಸರ್ಕಾರಕ್ಕೆ ಕೋಟ್ಯಂತರ ನಷ್ಟ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios