ಹುಬ್ಬಳ್ಳಿ (ಸೆ.04):  ಡ್ರಗ್ಸ್‌ ಮಾಫಿಯಾಕ್ಕೆ ಕಡಿವಾಣ ಹಾಕಿ ಎಂದು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವೇಳೆ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಹೈಡ್ರಾಮಾ ನಡೆದಿದೆ. ಮನವಿ ಸ್ವೀಕರಿಸಲು ಯಾವ ಅಧಿಕಾರಿಯೂ ಮುಂದೆ ಬಾರದ ಕಾರಣ ಪೊಲೀಸ್‌ ಆಯುಕ್ತರ ಕುರ್ಚಿಗೆ ಮನವಿ ಸಲ್ಲಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ವಾಗ್ವಾದವೂ ನಡೆದಿದೆ. ಕೊನೆಗೆ ಡಿಸಿಪಿಯೊಬ್ಬರು ಮನವಿ ಸ್ವೀಕರಿಸಿ ಪ್ರತಿಭಟನಾಕಾರರನ್ನು ಶಾಂತಗೊಳಿಸಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಜ್ಯ ಕರೆಯ ಮೇರೆಗೆ ಎಲ್ಲ ಪೊಲೀಸ್‌ ಆಯುಕ್ತರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕುರಿತಂತೆ ಹುಬ್ಬಳ್ಳಿ- ಧಾರವಾಡ ಕಮಿಷನರೇಟ್‌ಗೂ ಬುಧವಾರವೇ ತಿಳಿಸಲಾಗಿತ್ತು. ಅದಕ್ಕೆ ಬೆಳಗ್ಗೆ 11 ಗಂಟೆಗೆ ಬರುವಂತೆ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದರಂತೆ. ಅದರಂತೆ ಗುರುವಾರ ಬೆಳಗ್ಗೆ ಎಬಿವಿಪಿ ಕಾರ್ಯಕರ್ತರು ಪೊಲೀಸ್‌ ಆಯುಕ್ತರ ಕಚೇರಿಗೆ ತೆರಳಿದ್ದಾರೆ. ಆಗ ಆಯುಕ್ತ ಆರ್‌. ದಿಲೀಪ್‌ ಕಚೇರಿಯಲ್ಲೇ ಇದ್ದರು. ಆದರೆ ಅಷ್ಟರೊಳಗೆ ಏನೋ ಕೆಲಸದ ನಿಮಿತ್ತ ಆಯುಕ್ತರು ಅಲ್ಲಿಂದ ತೆರಳಿದ್ದಾರೆ.

ನಟಿ ರಾಗಿಣಿಗೆ ಮತ್ತೆ ಸಿಸಿಬಿ ನೋಟಿಸ್; ಇಂದು ಹಾಜರಾಗದಿದ್ದರೆ ಬಂಧನ..? ...

ಈ ಬಗ್ಗೆ ಕಾರ್ಯಕರ್ತರಿಗೆ ಅಲ್ಲಿನ ಅಧಿಕಾರಿಗಳು, ಸಾಹೇಬ್ರು ಸಭೆಯೊಂದಕ್ಕೆ ತೆರಳಿದ್ದಾರೆ. ಸಂಜೆ ಬರುವಂತೆ ತಿಳಿಸಿದ್ದಾರೆ. ಆದರೆ ಕಾರ್ಯಕರ್ತರು, ಬೇರೆ ಯಾರಾದರೂ ಅಧಿಕಾರಿಯನ್ನಾದರೂ ಕರೆಯಿರಿ ನಾವು ಮನವಿ ಸಲ್ಲಿಸಿ ತೆರಳುತ್ತೇವೆ ಎಂದು ಹೇಳಿದ್ದಾರೆ. ಆದರೆ ಅದಕ್ಕೆ ಕಿರಿಯ ಅಧಿಕಾರಿಗಳು ಸ್ಪಂದಿಸಿಲ್ಲ.