ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಹಿರಿಯ ನಾಗರಿಕರು, ಅಂಗವಿಕಲರು ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಅದೂ ಅಧಿಕಾರಿಗಳು ಅವರ ಮನೆಗೆ ತೆರಳಿ ಬ್ಯಾಲೆಟ್‌ ಪೇಪರ್‌ ನೀಡಿ, ಮತಚಲಾಯಿಸುವಂತೆ ಮಾಡುತ್ತಿದ್ದಾರೆ. ಏ.29ರಿಂದ ಈ ಪ್ರಕ್ರಿಯೆ ಆರಂಭವಾಗಲಿದ್ದು, ಮೇ 6ರವರೆಗೆ ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗುತ್ತಿದೆ. 

ಬೆಂಗಳೂರು(ಏ.28): ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ಮೇ 10ರ ದಿನಾಂಕ ನಿಗದಿ ಮಾಡಲಾಗಿದೆ. ಆದರೆ, ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಶನಿವಾರದಿಂದಲೇ ಮತದಾನ ಮಾಡಲಿದ್ದಾರೆ. ಹೀಗೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 9 ಸಾವಿರ ಜನರು ಏ.29ರಿಂದ ಮತ ಚಲಾಯಿಸಲಿದ್ದಾರೆ.

ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಹಿರಿಯ ನಾಗರಿಕರು, ಅಂಗವಿಕಲರು ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಅದೂ ಅಧಿಕಾರಿಗಳು ಅವರ ಮನೆಗೆ ತೆರಳಿ ಬ್ಯಾಲೆಟ್‌ ಪೇಪರ್‌ ನೀಡಿ, ಮತಚಲಾಯಿಸುವಂತೆ ಮಾಡುತ್ತಿದ್ದಾರೆ. ಏ.29ರಿಂದ ಈ ಪ್ರಕ್ರಿಯೆ ಆರಂಭವಾಗಲಿದ್ದು, ಮೇ 6ರವರೆಗೆ ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗುತ್ತಿದೆ. 8 ದಿನಗಳಲ್ಲಿ ಅಧಿಕಾರಿಗಳು ಯಾವಾಗಲಾದರೊಮ್ಮೆ ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ನೋಂದಣಿ ಮಾಡಿಕೊಂಡಿರುವ ಹಿರಿಯ ನಾಗರೀಕರು ಮತ್ತು ವಿಕಲ ಚೇತನ ಮತದಾರರ ಮನೆಗೆ ತೆರಳು ಬ್ಯಾಲೆಟ್‌ ಪೇಪರ್‌ ನೀಡಿ, ಮತ ಚಲಾಯಿಸಿದ ನಂತರ ಅದನ್ನು ವಾಪಾಸು ಪಡೆದುಕೊಂಡು ತೆರಳಲಿದ್ದಾರೆ.

ಕೊಡಗು: ಅಂಚೆ ಮತಪತ್ರದ ಮೂಲಕ 2,474 ಮಂದಿ ಮತದಾನಕ್ಕೆ ಹೆಸರು ನೋಂದಣಿ

ಬೆಂಗಳೂರಿನಲ್ಲಿ 9 ಸಾವಿರ ಮತದಾರರು

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 2.37 ಲಕ್ಷ 80 ವರ್ಷ ದಾಟಿದ ಹಿರಿಯ ನಾಗರಿಕರು ಮತ್ತು 25,790 ವಿಕಲ ಚೇತನ ಮತದಾರರಿದ್ದಾರೆ. ಒಟ್ಟು 2.62 ಲಕ್ಷ ಮತದಾರರು ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಆದರೆ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕೇವಲ 9,152 ಮತದಾರರು ಮಾತ್ರ ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ನೋಂದಣಿ ಮಾಡಿಕೊಂಡಿದ್ದಾರೆ. ಉಳಿದ ಮತದಾರರು ಮತಗಟ್ಟೆಗೆ ತೆರಳಿ ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ.

ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ನೋಂದಣಿ ಮಾಡಿಕೊಂಡಿರುವ ಮತದಾರರ ಬಳಿ ಅಧಿಕಾರಿಗಳು ಬಂದಾಗ ಸೂಕ್ತ ದಾಖಲೆಗಳನ್ನು ತೋರಿಸಬೇಕಿದೆ. ನಂತರ ಅಧಿಕಾರಿಗಳು ನೀಡುವ ಬ್ಯಾಲೆಟ್‌ ಪೇಪರ್‌ನಲ್ಲಿ ತಾವು ಯಾವ ಕ್ಷೇತ್ರದ ಮತದಾರರು ಎಂಬುದನ್ನು ನಮೂದಿಸಬೇಕು ಹಾಗೂ ತಾವು ಯಾರಿಗೆ ಮತ ಚಲಾಯಿಸುತ್ತೇವೆ ಎಂಬುದನ್ನು ಅದರಲ್ಲಿ ಗುರುತಿಸಿ ಅಧಿಕಾರಿಗಳಿಗೆ ವಾಪಾಸು ನೀಡಬೇಕು.

Karnataka Assembly Elections 2023: ಜನರ ಸೆಳೆಯಲು ಯುವ, ಹಸಿರು ಮತಗಟ್ಟೆ..!

ನೋಂದಣಿ ಮಾಡಿಕೊಂಡ ಮತದಾರರ ಸಂಖ್ಯೆ: ವಲಯ ಮತದಾರರ ಸಂಖ್ಯೆ

ಬಿಬಿಎಂಪಿ ಉತ್ತರ 2,298
ಬಿಬಿಎಂಪಿ ದಕ್ಷಿಣ 2,530
ಬಿಬಿಎಂಪಿ ಕೇಂದ್ರ 1,995
ನಗರ ಜಿಲ್ಲಾಧಿಕಾರಿ ವ್ಯಾಪ್ತಿ 2,329
ಒಟ್ಟು 9,152

ಬೆಂಗಳೂರಿನಲ್ಲಿ 5 ಲಕ್ಷ ಮತದಾರರ ಹೆಚ್ಚಳ

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 5 ಲಕ್ಷ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಜನವರಿಯಲ್ಲಿ ಪ್ರಕಟಿಸಲಾದ ಮತದಾರರ ಅಂತಿಮ ಪಟ್ಟಿಯಲ್ಲಿ 92.09 ಲಕ್ಷ ಮತದಾರರಿದ್ದರು. ಬುಧವಾರ ಚುನಾವಣಾ ಆಯೋಗ ಪ್ರಕಟಿಸಿರುವ ಪಟ್ಟಿಯಲ್ಲಿ 97.13 ಲಕ್ಷ ಮತದಾರರಿರುವ ಕುರಿತು ಮಾಹಿತಿ ನೀಡಿದ್ದಾರೆ. ಆಮೂಲಕ ಕಳೆದ ಮೂರುವರೆ ತಿಂಗಳಲ್ಲಿ 5.03 ಲಕ್ಷ ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಆ ಪೈಕಿ 2.43 ಲಕ್ಷ ಪುರುಷ ಮತದಾರರು, 2.59 ಲಕ್ಷ ಮಹಿಳಾ ಮತದಾರರಾಗಿದ್ದಾರೆ.