ಬೆಂಗಳೂರು [ಡಿ.28]:  ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷದ ಶಿಸ್ತು ಉಲ್ಲಂಘಿಸಿ, ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್‌ನ ಹದಿನಾಲ್ಕು ಜನ ಬಿಬಿಎಂಪಿ ಸದಸ್ಯರನ್ನು ಅನರ್ಹಗೊಳಿಸುವಂತೆ ಕೋರಿ ಬಿಬಿಎಂಪಿ ಪ್ರತಿಪಕ್ಷ ನಾಯಕ ಅಬ್ದುಲ್‌ ವಾಜಿದ್‌ ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರಿಗೆ ದೂರು ನೀಡಿದ್ದಾರೆ.

ತಮ್ಮ ಪಕ್ಷದ 14 ಜನ ಪಾಲಿಕೆ ಸದಸ್ಯರ ಪಟ್ಟಿಸಮೇತ ಶುಕ್ರವಾರ ದೂರು ನೀಡಿರುವ ಅವರು, ಕಾಂಗ್ರೆಸ್‌ ಚಿನ್ಹೆಯಡಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿರುವ ಈ ಹದಿನಾಲ್ಕು ಸದಸ್ಯರು ಉಪಚುನಾವಣೆ ವೇಳೆ ಪಕ್ಷದ ಸೂಚನೆಯಂತೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಿಲ್ಲ. ಬಹಿರಂಗವಾಗಿ ಇತರೆ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಅಲ್ಲದೆ, ಪಕ್ಷದ ಸಭೆಗಳಲ್ಲೂ ಪಾಲ್ಗೊಳ್ಳದೆ ಪಕ್ಷದ ಶಿಸ್ತು ಉಲ್ಲಂಘಿಸಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಹಾಗಾಗಿ ಅವರೆಲ್ಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಪಕ್ಷದಿಂದ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪೌರಾಡಳಿತ ಕರ್ನಾಟಕ ಸ್ಥಳೀಯ ಪ್ರಾಧಿಕಾರ (ಪಕ್ಷಾಂತರ ನಿಷೇಧ) ಅಧಿನಿಯಮ, 1987ರ ನಿಯಮಗಳ ಅನ್ವಯ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಸದಸ್ಯರನ್ನು ಪಾಲಿಕೆ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ, ಡಿ.30ರಂದು ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಿಗದಿಯಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಈ 14 ಪಾಲಿಕೆ ಸದಸ್ಯರಿಗೆ ಯಾವುದೇ ಸ್ಥಾನ ಮಾನ ಪಡೆಯಲು ಅರ್ಹತೆ ಇರುವುದಿಲ್ಲ. ಆದ್ದರಿಂದ, ಈ ಸದಸ್ಯತ್ವ ಅನರ್ಹಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಅವರ ಅನರ್ಹತೆಯ ವಿಚಾರ ತೀರ್ಮಾನ ಆಗುವವರೆಗೂ ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಮುಂದೂಡಬೇಕೆಂದು ವಾಜಿದ್‌ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಕೋರಿದ್ದಾರೆ.

14 ಸದಸ್ಯರು ಯಾರಾರ‍ಯರು?

ಸದಸ್ಯರ ಹೆಸರು ವಾರ್ಡ್‌

ಎಂ.ಕೆ.ಗುಣಶೇಖರ್‌ ಜಯಮಹಲ್‌

ನೇತ್ರಾವತಿ ಕೃಷ್ಣೇಗೌಡ ರಾಮಸ್ವಾಮಿಪಾಳ್ಯ

ರಾಜಣ್ಣ ಹೇರೋಹಳ್ಳಿ

ಆರ್ಯ ಶ್ರೀನಿವಾಸ್‌ ಹೆಮ್ಮಿಗೆಪುರ

ಜಯಪ್ರಕಾಶ್‌ ಬಸವನಪುರ

ಎಚ್‌.ಜಿ.ನಾಗರಾಜ್‌ ವಿಜ್ಞಾನನಗರ

ಎಸ್‌.ವಾಸುದೇವ ದೊಡ್ಡಬಿದರಕಲ್ಲು

ಬಿ.ಎಸ್‌.ನಿತೀಶ್‌ ಪುರುಷೋತ್ತಮ ಗರುಡಾಚಾರ್‌ಪಾಳ್ಯ

ಎಂ.ಎನ್‌.ಶ್ರೀಕಾಂತ್‌ (ಪುಟ್ಟ) ದೇವಸಂದ್ರ

ವಿ.ಸುರೇಶ್‌ ಎ.ನಾರಾಯಣಪುರ

ಶ್ರೀನಿವಾಸಮೂರ್ತಿ ಜಾಲಹಳ್ಳಿ

ಜಿ.ಕೆ.ವೆಂಕಟೇಶ್‌ ಯಶವಂತಪುರ

ಎಂ.ವೇಲು ನಾಯ್ಕರ್‌ ಲಕ್ಷ್ಮೇದೇವಿನಗರ

ಜಿ.ಮೋಹನ್‌ ಕುಮಾರ್‌ ಕೊಟ್ಟಿಗೆಪಾಳ್ಯ