ಕಾಂಗ್ರೆಸ್, ಬಿಜೆಪಿಯಲ್ಲಿ ತಾರಕಕ್ಕೇರಿದ ಟಿಕೆಟ್ ಫೈಟ್
ಚುನಾವಣಾ ದಿನಾಂಕ ಘೋಷಣೆಯಾಗಿದ್ದರೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಆಕಾಂಕ್ಷಿಗಳಿದ್ದರೂ ಯಾರನ್ನೂ ಆಯ್ಕೆಮಾಡದೆ ಮೀನ ಮೇಷ ಎಣಿಸುತ್ತಿವೆ. ಇದರಿಂದ ಎರಡೂ ಪಕ್ಷಗಳಲ್ಲಿ ಟಿಕೆಟ್ ಫೈಟ್ ತಾರಕಕ್ಕೇರಿದಂತಾಗಿದೆ.
ಚಿಕ್ಕಬಳ್ಳಾಪುರ : ಚುನಾವಣಾ ದಿನಾಂಕ ಘೋಷಣೆಯಾಗಿದ್ದರೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಆಕಾಂಕ್ಷಿಗಳಿದ್ದರೂ ಯಾರನ್ನೂ ಆಯ್ಕೆಮಾಡದೆ ಮೀನ ಮೇಷ ಎಣಿಸುತ್ತಿವೆ. ಇದರಿಂದ ಎರಡೂ ಪಕ್ಷಗಳಲ್ಲಿ ಟಿಕೆಟ್ ಫೈಟ್ ತಾರಕಕ್ಕೇರಿದಂತಾಗಿದೆ.
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಮೇಲೆ ಇಡೀ ರಾಜ್ಯ ಕಣ್ಣಿಟ್ಟಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಟಿಕೆಟ್ ಪೈಪೋಟಿ ಎಲ್ಲರ ಗಮನ ಸೆಳೆಯುತ್ತಿದೆ. ಬಿಜೆಪಿಯಲ್ಲಿ ದಿನಕ್ಕೊಬ್ಬರ ಹೆಸರು ಕೇಳಿಬರುತ್ತಿದ್ದರೆ, ಇರುವ ಮೂವರಲ್ಲಿ ಒಬ್ಬರ ಹೆಸರನ್ನು ಅಂತಿಮಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಮೀನಮೇಷ ಎಣಿಸುತ್ತಿದೆ.
ಜಾತಿ ಸಮೀಕರಣಕ್ಕೆ ಜೋತು ಬಿದ್ದಿರುವ ಎರಡೂ ಪಕ್ಷಗಳು ಪ್ರಬಲ ಸಮುದಾಯಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹೆಚ್ಚಿನ ಗಮನ ಹರಿಸಿವೆ. ಸದ್ಯಕ್ಕೆ ಬಲಿಜ ಮತ್ತು ಒಕ್ಕಲಿಗ ಅಭ್ಯರ್ಥಿಗಳ ಕಡೆ ಒಲವು ತೋರಿರುವ ಪಕ್ಷಗಳು, ಒಂದು ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆ ಎಂಬುದನ್ನು ಗಮನಿಸಿ ಮತ್ತೊಂದು ಪಕ್ಷವು ಪ್ರಬಲ ಜಾತಿಯವರಿಗೆ ಟಿಕೆಟ್ ಕೊಡುವ ಲೆಕ್ಕಾಚಾರ ಹಾಕುತ್ತಿವೆ. ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಮಟ್ಟಿಗೆ ಜಾತಿ ಲೆಕ್ಕಾಚಾರ ಹೆಚ್ಚು ನಡೆದಿಲ್ಲ. 1977 ರಲ್ಲಿ ಒಕ್ಕಲಿಗರಾದ ಎಂ.ವಿ.ಕೃಷ್ಣಪ್ಪ ಮತ್ತು ಕಳೆದ ಚುನಾವಣೆಯಲ್ಲಿ ಬಿ.ಎನ್.ಬಚ್ಚೇಗೌಡ ಅವರು ಗೆದ್ದಿರುವುದನ್ನು ಬಿಟ್ಟರೆ ಇನ್ಯಾವ ಚುನಾವಣೆಗಳಲ್ಲಿಯೂ ಪ್ರಬಲ ಜಾತಿಯವರಲ್ಲದಿದ್ದರೂ ಅಂತಹವರಿಗೆ ಕ್ಷೇತ್ರದ ಜನತೆ ಮಣೆ ಹಾಕಿದ್ದಾರೆ. ಪ್ರಬಲ ಜಾತಿಯವರು ಅಖಾಡದಲ್ಲಿದ್ದರೂ ಕಡಿಮೆ ಮತಗಳಿರುವ ಜಾತಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೆಗ್ಗಳಿಕೆ ಕ್ಷೇತ್ರದ ಜನರಲ್ಲಿದೆ. ಆದರೆ ಬದಲಾದ ರಾಜಕೀಯದಲ್ಲಿ ಪಕ್ಷಗಳು ಜಾತಿಗೆ ಮಣೆ ಹಾಕುತ್ತಿರುವುದು ವಿಪರ್ಯಾಸ.
ಕಾಂಗ್ರೆಸ್‌ನಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ, ಮಾಜಿ ಸಂಸದ ವೀರಪ್ಪ ಮೊಯ್ಲಿ , ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೆಸರು ಕೇಳಿಬರುತ್ತಿವೆ. ಕಾಂಗ್ರೆಸ್‌ನಲ್ಲಿ ಈ ಬಾರಿ 50 ವರ್ಷದೊಳಗಿನ ಹೊಸಬರಿಗೆ ಟಿಕೆಟ್ ನೀಡಬೇಕೆಂಬ ರಾಹುಲ್ ಗಾಂಧಿ ನಿರ್ಣಯದಂತೆ ಎಂ.ಎಸ್.ರಕ್ಷಾ ರಾಮಯ್ಯ ಹೆಸರು ಬಹುತೇಕ ಅಂತಿಮಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ರಕ್ಷಾ ರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ. ರಕ್ಷಾ ರಾಮಯ್ಯ ಹಿಂದುಳಿದ ವರ್ಗಕ್ಕೆ ಸೇರಿರುವುದರಿಂದ ಅಹಿಂದ ಮತಗಳು ಇವರಿಗೆ ಒಲಿಯುತ್ತವೆ ಎಂಬ ಲೆಕ್ಕಾಚಾರದಿಂದ ರಕ್ಷಾ ರಾಮಯ್ಯ ಹೆಸರು ರೇಸ್‌ನಲ್ಲಿ ಮುಂದಿದೆ.
ವೀರಪ್ಪಮೊಯ್ಲಿ ಅವರು ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಕ್ಷೇತ್ರದ ಜನರ ಋಣ ನನ್ನ ಮೇಲಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ. ಈ ಬಾರಿ ಕೊನೆಯ ಅವಕಾಶವಾಗಿ ಮೊಯ್ಲಿಯವರಿಗೆ ಟಿಕೆಟ್ ನೀಡಲಿ. ಈ ಸಂಬಂಧ ನಾವು ಕಾಂಗ್ರೆಸ್ ಹೈಕಮಾಂಡ್‌ನ ಎಲ್ಲರಿಗೂ ಪತ್ರ ಬರೆದಿದ್ದೇವೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಯೋಚನೆ ಮಾಡದೇ ಅವರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದು ಮಾಜಿ ಶಾಸಕ ಡಾ.ಎ.ಶಿವಾನಂದ್ ಮತ್ತು ಖಾದಿ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಹೈಕಮಾಂಡನ್ನು ಒತ್ತಾಯಿಸಿದ್ದಾರೆ.
ಇನ್ನು ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿಯವರನ್ನು ಹೈ ಕಮಾಂಡ್ ದೆಹಲಿಗೆ ಕರೆಸಿ ಖರ್ಗೆಯವರೇ ಮಾತನಾಡಿ, ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಉತ್ತಮ ಸ್ಥಾನ ಕೊಡುವ ಭರವಸೆ ನೀಡಿದ್ದಾರೆ. ಆದರೂ ಲೋಕಸಭೆಯ ಟಿಕೆಟ್ ಸಿಗುವ ಭರವಸೆಯಲ್ಲಿ ಅವರಿದ್ದಾರೆ.
ಬಿಜೆಪಿ - ಜೆಡಿಎಸ್ ಮೈತ್ರಿಯದ್ದೂ ಇದೇ ಕಥೆ:
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಶತಾಯಗತಾಯ ಟಿಕೆಟ್ ಗಿಟ್ಟಿಸಲು ಯತ್ನಿಸಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್, ಕಷ್ಟಕಾಲದಲ್ಲಿ ಪಕ್ಷದೊಂದಿಗೆ ನಿಂತ ಆಧಾರದಲ್ಲಿ ಟಿಕೆಟ್‌ಗೆ ಬೇಡಿಕೆ ಸಲ್ಲಿಸಿದ್ದಾರೆ. ಈಗ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರ ಮೂಲಕ ಬಿಜೆಪಿ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಶರಣಾಗಿದ್ದಾರೆ ಎನ್ನುತ್ತವೆ ಮೂಲಗಳು. ಹೈಕಮಾಂಡ್ ಸುಧಾಕರ್‌ಗೆ ಟಿಕೆಟ್ ನೀಡಲು ಹಿಂದುಮುಂದು ನೋಡುತ್ತಿರುವ ಹಿನ್ನೆಲೆ ಕುಮಾರಸ್ವಾಮಿ ಅವರ ಮೂಲಕ ಟಿಕೆಟ್‌ಗೆ ಒತ್ತಡ ಹೇರುವ ಯತ್ನ ನಡೆಸಿದ್ದಾರೆ. ಈ ಹಿಂದೆಯೇ ಜೆಡಿಎಸ್ ವರಿಷ್ಠರನ್ನು ಭೇಟಿಯಾಗಿದ್ದ ಸುಧಾಕರ್ ಬೆಂಬಲಕ್ಕೆ ಮನವಿ ಮಾಡಿದ್ದರು. ಈಗಾಗಲೇ ಬಿಜೆಪಿ ಹೈಕಮಾಂಡ್‌ಗೆ ಜೆಡಿಎಸ್‌ನಿಂದಲೂ ಸುಧಾಕರ್‌ಗೆ ಟಿಕೆಟ್ ನೀಡುವಂತೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಅತ್ಯಾಪ್ತರಾಗಿರುವ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಪುತ್ರ ಅಲೋಕ್ ಕೂಡ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿ. ಪುತ್ರನಿಗೆ ಟಿಕೆಟ್ ಕೊಡಿಸಲು ವಿಶ್ವನಾಥ್ ಎಲ್ಲ ರೀತಿಯ ಶ್ರಮ ಹಾಕುತ್ತಿದ್ದಾರೆ.ಅಲೋಕ್ ವಿಶ್ವನಾಥ್ ಮತ್ತು ಸುಧಾಕರ್ ಪರ ಬ್ಯಾಟಿಂಗ್ ಮಾಡುವವರೂ ಇದ್ದಾರೆ. ಇದರೊಂದಿಗೆ ಮಂಡ್ಯದ ಗೌಡ್ತಿ ಸುಮಲತಾ ಅಂಬರೀಷ್ ಮತ್ತು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಹೆಸರುಗಳೂ ಮುನ್ನೆಲೆಗೆ ಬಂದಿದ್ದರಿಂದ ನಾನಾ ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ಓಟ್ಟಿನಲ್ಲಿ ಚುನಾವಣಾ ದಿನಾಂಕ ಘೋಷನೆಯಾದರೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಮೀನಾ ಮೇಷ ಎಣಿಸುತ್ತಿರುವುದು. ಕೊನೆಗಳಿಗೆಯಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ, ಅಭ್ಯರ್ಥಿಗಳಾಗುವವರಿಗೆ ಚುನಾವಣಾ ಪ್ರಚಾರಕ್ಕೆ ಸಮಯ ಸಿಗದಂತಾಗುತ್ತದೆ ಎಂಬುದು ಅಭ್ಯರ್ಥಿಗಳ ಅಳಲಾಗಿದೆ.