ಯೋಜನೆ ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ: ಸಚಿವ ಸುನೀಲ್ ಕುಮಾರ್ ಹೇಳಿಕೆ
- ಯೋಜನೆ ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ
- ಇಂಧನ ಸಚಿವ ಸುನೀಲ್‌ಕುಮಾರ್ ಹೇಳಿಕೆ
- ತ್ಯಾಗರ್ತಿಯಲ್ಲಿ ₹12 ಕೋಟಿ ವೆಚ್ಚದ 110/11 ಕೆವಿ ವಿದ್ಯುತ್ ಸ್ಥಾವರಕ್ಕೆ ಚಾಲನೆ
ತ್ಯಾಗರ್ತಿ (ನ.25) : ಬಿಜೆಪಿ ಸರ್ಕಾರವು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಜನಪ್ರತಿನಿಧಿಗಳ ಶ್ರದ್ಧೆ, ಅಧಿಕಾರಿಗಳ ಕಾರ್ಯನಿರ್ವಹಣೆಯಿಂದ ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಇಂಧನ ಸಚಿವ ಸುನೀಲ್‌ಕುಮಾರ್ ಹೇಳಿದರು.
ಸಾಗರ ತಾಲೂಕಿನ ತ್ಯಾಗರ್ತಿಯಲ್ಲಿ .12 ಕೋಟಿ ವೆಚ್ಚದ 110/11 ಕೆವಿ ವಿದ್ಯುತ್ ಸ್ಥಾವರಕ್ಕೆ ಗುರುವಾರ ಗುದ್ದಲಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ರೈತಸ್ನೇಹಿ, ಗ್ರಾಹಕ ಸ್ನೇಹಿ, ಕೈಗಾರಿಕಾ ಉದ್ಯಮಿ ಸ್ನೇಹಿ ಇಲಾಖೆಯಾಗಿ ಮಾರ್ಪಡಿಸಬೇಕೆಂಬ ನಮ್ಮ ಇಚ್ಛೆಯಂತೆ ಕಾರ್ಯನಿರ್ವಹಿಸಿ, ಸಾಗರ ತಾಲೂಕಿನ ರೈತರ ಅಭ್ಯುದಯಕ್ಕಾಗಿ ಕಾಗೋಡು, ನಾಡಕಲಸೆ ಮತ್ತು ತ್ಯಾಗರ್ತಿಯಲ್ಲಿ ವಿದ್ಯುತ್ ಉಪಕೇಂದ್ರವನ್ನು .96 ಕೋಟಿ ರು. ವೆಚ್ಚದಲ್ಲಿ ಶಾಸಕರ ಆಸಕ್ತಿಯಿಂದ ಕೈಗೆತ್ತಿಕೊಳ್ಳಲಾಗಿದೆ ಎಂದರು.
ವ್ಯಸನಮುಕ್ತರಾಗಿ ಸಮಾಜಕ್ಕೆ ಮಾದರಿಯಾಗಿ: ಸುನಿಲ್ ಕುಮಾರ್
ರೈತರ ಬೆಳೆಗಳಿಗೆ ಸಮರ್ಪಕ ನೀರು ಪೂರೈಸದಿದ್ದರೆ ಉತ್ತಮ ಬೆಳೆ ಬೆಳೆಯಲು ಸಾಧ್ಯವಿಲ್ಲ. ರೈತರ ಪಂಪ್‌ಸೆಟ್‌ಗಳಿಗೆ ವಾರ್ಷಿಕ .16 ಸಾವಿರ ಕೋಟಿಗಳ ಉಚಿತ ವಿದ್ಯುತ್ ನೀಡುತ್ತಿದೆ. ಸುಮಾರು 46 ವಿದ್ಯುತ್ ಉಪಕೇಂದ್ರಗಳನ್ನು ಹೊಸದಾಗಿ ನಿರ್ಮಿಸಿ, ಜಿಲ್ಲೆಗೆ 7 ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಿ ನಿರಂತರ, ಗುಣಮಟ್ಟದ ವಿದ್ಯುತ್ ಪೂರೈಸಲು ಬೇಡಿಕೆಗೆ ತಕ್ಕಂತೆ ಉತ್ಪಾದಿಸಲು ಇಲಾಖೆಯು ಹೆಚ್ಚು ಗಮನಹರಿಸುತ್ತಿದೆ. ಸರ್ಕಾರದ ಬೆಳಕು ಯೋಜನೆಯಲ್ಲಿ ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್, ಅಮೃತ ಜ್ಯೋತಿ ಯೋಜನೆಯಡಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಕುಟುಂಬಗಳಿಗೆ ತಿಂಗಳಿಗೆ 75 ಯುನಿಟ್ ಉಚಿತ ವಿದ್ಯುತ್ ಪೂರೈಕೆಯನ್ನು ಕನಾಟಕದಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಗಿದೆ. ಜಿಲ್ಲೆ ರಾಜ್ಯಕ್ಕೆ ವಿದ್ಯುತ್ ನೀಡುವಲ್ಲಿ ಅತಿ ಹೆಚ್ಚಿನ ಕೊಡುಗೆ ನೀಡಿದ್ದು, 30 ಸಾವಿರ ಮೆಗಾವ್ಯಾಟ್ ಉತ್ಪಾದನೆಯಿದೆ. 14.5 ಸಾವಿರ ಮೆಗಾವ್ಯಾಟ್ ಬೇಡಿಕೆಯಿದೆ. ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ, ಹೊಸ ಲೈನ್ ಅಳವಡಿಕೆಯಿಂದ ಗುಣಮಟ್ಟದ ವಿದ್ಯುತ್‌ಪೂರೈಸುವ ಗುರಿ ಹೊಂದಿದ್ದು ಜಿಲ್ಲೆಯ ಅಭಿವೃದ್ಧಿಗೆ ಇಲಾಖೆಯು ಸಹಕರಿಸುತ್ತಿದೆ ಎಂದು ಹೇಳಿದರು.
ವಿಜ್ಞಾನ ಎಷ್ಟೇ ಮುಂದುವರೆದರೂ ತುತ್ತು ಅನ್ನ ಕೊಡುವವನು ರೈತನೇ. ಕೃಷಿ ಸನ್ಮಾನ್ ಯೋಜನೆಯಡಿ ಪ್ರತಿಯೊಬ್ಬ ರೈತನ ಖಾತೆಗೆ ವರ್ಷಕ್ಕೆ .6 ಸಾವಿರ ನೀಡುತ್ತಿದ್ದು, ಈಗ ರಾಜ್ಯ ಸರ್ಕಾರದಿಂದಲೂ .4 ಸಾವಿರಗಳನ್ನು ನೀಡುತ್ತಿದೆ. ಜಿಲ್ಲೆಗೆ .75 ಕೋಟಿ ಬೆಳೆವಿಮೆ ಬಿಡುಗಡೆಯಾಗಿದ್ದು 2020- 2021ನೇ ಸಾಲಿನ ಬೆಳೆವಿಮೆ ಪಾವತಿಸಿದ ಪ್ರತಿಯೊಬ್ಬ ರೈತನಿಗೂ ಬೆಳೆವಿಮೆ ನೀಡಲಾಗುತ್ತಿದೆ. ರೈತರ ಅಭ್ಯುಧಯಕ್ಕೆ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಮ್ಮಿಕೊಂಡಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು.
ಕರ್ನಾಟಕದಲ್ಲಿ ಅತಿ ಹೆಚ್ಚು ವಿದ್ಯುತ್ ಉತ್ಪಾದನೆಯಾಗಿ ನೆರೆಯ ರಾಜ್ಯ ಮಹಾರಾಷ್ಟ್ರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಆದರೆ ವಿದ್ಯುತ್ ಉತ್ಪಾದನೆಗೆ ಜಮೀನು ಕಳೆದುಕೊಂಡವರ ಸ್ಥಿತಿ ಅಷ್ಟೇ ಶೋಚನೀಯವಾಗಿತ್ತು. 1962ರಲ್ಲಿ 24557ಎಕರೆ ಜಮೀನು ಮುಳುಗಡೆಯಾಗಿದ್ದು, ಮುಳುಗಡೆ ಸಂತ್ರಸ್ತರನ್ನು ರಾತ್ರೋರಾತ್ರಿ ಎಲ್ಲೆಂದರಲ್ಲಿ ತಂದುಬಿಟ್ಟರು. 1980ರಲ್ಲಿ ಅರಣ್ಯ ಸಚಿವರಾಗಿದ್ದ ಹಾಗೂ ಇತ್ತೀಚೆಗೆ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ಈ ಮುಳುಗಡೆ ಸಂತ್ರಸ್ತರಿಗೆ ಅರಣ್ಯದಲ್ಲಿ ಭೂಮಿ ಕೊಡಲು ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕೆಂಬ ಅರಿವು ಇರಲಿಲ್ಲವೇ? ನ್ಯಾಯಾಲಯವು ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಿರಿ ಎಂದು ಸೂಚಿಸಿದೆ. ಮುಳುಗಡೆ ಸಂತ್ರಸ್ತರ ಬಗ್ಗೆ ಚಿಂತಿಸದ ತಿಮ್ಮಪ್ಪನವರು ನಮ್ಮ ಮೇಲೆ ಅನಾವಶ್ಯಕ ಗೂಬೆ ಕೂರಿಸುತ್ತಿದ್ದಾರೆ ಎಂದು ಟೀಕಿಸಿದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಕಾರ್ಯ ತ್ವರಿತವಾಗಿ ನಡೆಯುತ್ತಿದೆ. ಜಿಲ್ಲೆಯ ಅಭಿವೃದ್ಧಿಯಲ್ಲಿ ಸಂಸದರು ಬಹುಮುಖ್ಯ ಪಾತ್ರವಹಿಸಿದ್ದಾರೆ. ತ್ಯಾಗರ್ತಿಯಲ್ಲಿ .3 ಕೋಟಿ ವೆಚ್ಚದಲ್ಲಿ ಡಬಲ್ ರೋಡ್ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಪಟ್ಟಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೇ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದೇವೆ. ಕಲ್ಲೊಡ್ಡು ಡ್ಯಾಂ ಅನ್ನು ನಿರ್ಮಿಸಿ ಹಲವು ರೈತರನ್ನು ಮುಳುಗಿಸುತ್ತಾರೆಂಬ ವದಂತಿಗಳು ದೂರವಾಗಿದ್ದು ಪೂರ್ಣ ವಿರಾಮ ನೀಡಲಾಗಿದೆ. ಸದೃಢ ಸಂಕಲ್ಪವುಳ್ಳ ಸರ್ಕಾರ ನಮ್ಮದಾಗಿದ್ದು ಜನರ ಸಂಕಷ್ಟಗಳಿಗೆ ಸದಾ ಬೆಂಬಲವಾಗಿ ನಿಂತಿರುತ್ತೇವೆ ಎಂದು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಸಕರಾದ ಹರತಾಳು ಹಾಲಪ್ಪ ಹೇಳಿದರು.
ಮೈಸೂರು ದಸರಾ ಮೀರಿಸುವಂತೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡ್ತೀವಿ: ಸಚಿವ ಸುನೀಲ್ ಕುಮಾರ್
ಬರೂರು ಗ್ರಾ.ಪಂ ಅಧ್ಯಕ್ಷರಾದ ಅನ್ನಪೂರ್ಣಪುಟ್ಟಪ್ಪ, ತ್ಯಾಗರ್ತಿ ಗ್ರಾ.ಪಂ ಅಧ್ಯಕ್ಷರಾದ ಚೈತ್ರಾ ಟಾಕಪ್ಪ, ಉಪಾಧ್ಯಕ್ಷರಾದ ಇಸಾಕ್, ಹಿರೇಬಿಲಗುಂಜಿ ಗ್ರಾ.ಪಂ.ಪ್ರಭಾರಿ ಅಧ್ಯಕ್ಷರಾದ ಸೋಮಶೇಖರ್ ಕುಣಿಕೆರೆ, ಸಾಗರ ತಹಸೀಲ್ದಾರ್ ಮಲ್ಲೇಶ್ ಪೂಜಾರ್, ಮೆಸ್ಕಾಂ ಹಾಗೂ ಎಸ್ಕಾಂನ ಎಕ್ಸಿಕ್ಯೂಟೀವ್ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.