ಕೊರೋನಾಗೆ ಹಾವೇರಿ ಜಿಲ್ಲೆಯಲ್ಲಿ 9 ಶಿಕ್ಷಕರು ಬಲಿ!
ಸದ್ಯ 28 ಶಿಕ್ಷಕರಿಗೆ ಕೊರೋನಾ ಪಾಸಿಟಿವ್| ಮಕ್ಕಳ ಕಲಿಕೆಯಲ್ಲಿ ತೊಡಗಿರುವ ಶಿಕ್ಷಕರ ಸಾವು ಹೆಚ್ಚಿಸಿದೆ ಆತಂಕ| ಶಿಕ್ಷಕ ಸಮುದಾಯ ಕೊರೋನಾ ಬಗ್ಗೆ ನಿರ್ಲಕ್ಷ್ಯ ತೋರದೆ ಮುಂಜಾಗ್ರತಾ ಕ್ರಮ ಅನುಸರಿಸಬೇಕಿದೆ|
ನಾರಾಯಣ ಹೆಗಡೆ
ಹಾವೇರಿ(ಸೆ.10): ಕೊರೋನಾ ರಣಕೇಕೆ ಎಲ್ಲೆಡೆ ಮುಂದುವರಿದಿದ್ದು, ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ವಿದ್ಯಾಗಮ ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ ಶ್ರಮಿಸುತ್ತಿರುವ ಅನೇಕ ಶಿಕ್ಷಕರು ಸೋಂಕಿನಿಂದ ಮೃತಪಡುತ್ತಿರುವುದು ಆತಂಕ ಹೆಚ್ಚಿಸುವಂತೆ ಮಾಡಿದೆ.
ಜಿಲ್ಲೆಯಲ್ಲಿ ಇದುವರೆಗೆ ಕರ್ತವ್ಯನಿರತ 9 ಶಿಕ್ಷಕರು ಕೊರೋನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿರುವುದು ಶಿಕ್ಷಕ ವೃಂದದ ಆತಂಕ ಹೆಚ್ಚಿಸಿದೆ. ಅಲ್ಲದೇ ನಿತ್ಯವೂ ಒಂದಿಬ್ಬರು ಶಿಕ್ಷಕರಿಗೆ ಸೋಂಕು ತಗಲುತ್ತಿದೆ. ಇದುವರೆಗೆ 28 ಶಿಕ್ಷಕರಿಗೆ ಪಾಸಿಟಿವ್ ಬಂದಿದೆ. ವಿದ್ಯಾರ್ಥಿಗಳ ಕಲಿಕೆ ನಿಲ್ಲಬಾರದು ಎಂಬ ಕಾರಣಕ್ಕೆ ವಿದ್ಯಾಗಮ ಯೋಜನೆಯಡಿ ಮನೆಮನೆಗೆ ಭೇಟಿ ನೀಡಿ ಪಾಠ ಮಾಡುತ್ತಿರುವ ಶಿಕ್ಷಕರು ಕೋವಿಡ್‌ಗೆ ಬಲಿಯಾಗುತ್ತಿರುವುದು ಶಿಕ್ಷಣ ವ್ಯವಸ್ಥೆ ಮೇಲೆಯೂ ನಿಶ್ಚಿತವಾಗಿ ಪರಿಣಾಮ ಬೀರಲಿದೆ. ಅಲ್ಲದೇ ಮನೆಮನೆಗೆ ಹೋಗಿ ಪಾಠ ಮಾಡಲು ಶಿಕ್ಷಕರು ಹೆದರುವಂತಾಗಿದೆ.
9 ಶಿಕ್ಷಕರು ಸಾವು:
ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 6 ಸಾವಿರಕ್ಕೆ ಸಮೀಪಿಸುತ್ತಿದೆ. ಇದುವರೆಗೆ 123 ಜನ ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ ಶಿಕ್ಷಕರೇ 9 ಜನ ಮೃತಪಟ್ಟಿರುವುದು ಗಾಬರಿ ಹುಟ್ಟಿಸುತ್ತಿವೆ. 40ರಿಂದ 55 ವರ್ಷ ವಯಸ್ಸಿನ ಶಿಕ್ಷಕರು ಸೋಂಕು ತಗುಲಿ ಚಿಕಿತ್ಸೆ ಫಲಿಸದೇ ಅಸು ನೀಗಿದ್ದಾರೆ. ಅನೇಕರು ಇನ್ನೂ ಹತ್ತಾರು ವರ್ಷ ಸೇವಾವಧಿ ಹೊಂದಿದವರೇ ಇದ್ದರು. ಇವರೆಲ್ಲ ಭವಿಷ್ಯದಲ್ಲಿ ಸಾವಿರಾರು ಮಕ್ಕಳ ಕಲಿಸುತ್ತಿದ್ದರು. ಶಿಕ್ಷಕರಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವುದು ಪಾಲಕರಲ್ಲೂ ಆತಂಕ ಉಂಟುಮಾಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಮೇರೆಗೆ ಸೆ. 21ರಿಂದ ಶಾಲಾ-ಕಾಲೇಜು ಆರಂಭವಾಗುವ ಸಾಧ್ಯತೆಯಿದೆ. ಇದೇ ವೇಳೆ ಶಿಕ್ಷಕರೇ ಸೋಂಕಿತರಾಗುತ್ತಿರುವುದರಿಂದ ತರಗತಿ ಶುರುವಾದರೆ ಮಕ್ಕಳ ಆರೋಗ್ಯ ಹೇಗೆ ಕಾಪಾಡುವುದು ಎಂಬ ಸವಾಲು ಕೂಡ ಎದುರಾಗಿದೆ.
ಹಾವೇರಿ: ಮಕ್ಕಳು ಮನೆಯಿಂದ ಹೊರಹಾಕಲ್ಪಟ್ಟಿದ್ದ ವೃದ್ಧೆಗೆ ಸಿಕ್ತು ಆಸ್ತಿ
ಸೋಂಕಿನ ಬಗ್ಗೆ ಶಿಕ್ಷಕರ ನಿರ್ಲಕ್ಷ್ಯ:
ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೊರೋನಾ ನಿಯಂತ್ರಣಕ್ಕೆ ವಿಧಿಸಿದ್ದ ಲಾಕ್‌ಡೌನ್ ತೆರವುಗೊಳಿಸಲಾಗಿದೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಇನ್ನಿತರ ಸುರಕ್ಷತಾ ಕ್ರಮಗಳನ್ನು ಪ್ರತಿಯೊಬ್ಬರೂ ಅನುಸರಿಸುವುದು ಅಗತ್ಯವಾಗಿದೆ. ಆದರೆ, ಅನೇಕ ಶಿಕ್ಷಕರು ತಮಗೆ ಅನಾರೋಗ್ಯ ಕಾಣಿಸಿಕೊಂಡರೂ ಆರಂಭದಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಸಾವು ಸಂಭವಿಸಿದೆ ಎಂದು ಮೂಲಗಳು ಹೇಳುತ್ತವೆ. ಬಿಪಿ, ಶುಗರ್ ಸೇರಿದಂತೆ ಇನ್ನಿತರ ಕಾಯಿಲೆಗಳಿರುವ ಶಿಕ್ಷಕರು ಕೊರೋನಾ ಸೋಂಕಿನ ಲಕ್ಷಣ ಕಂಡುಬಂದರೂ ಆಸ್ಪತ್ರೆಗೆ ದಾಖಲಾಗದೇ ನಿರ್ಲಕ್ಷ್ಯ ತೋರಿರುವುದು ಕಂಡುಬಂದಿದೆ. ಹೀಗೆ ವಿವಿಧ ಕಾರಣಗಳಿಂದ ಬಳಲುತ್ತಿದ್ದ ಶಿಕ್ಷಕರೇ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಇಲಾಖೆ ಮೂಲಗಳು ಹೇಳುತ್ತವೆ.
ಶಿಕ್ಷಕ ಸಮುದಾಯ ಕೊರೋನಾ ಬಗ್ಗೆ ನಿರ್ಲಕ್ಷ್ಯ ತೋರದೆ ಮುಂಜಾಗ್ರತಾ ಕ್ರಮ ಅನುಸರಿಸಬೇಕಿದೆ. ವಿದ್ಯಾಗಮ ಯೋಜನೆ ಸೇರಿದಂತೆ ಮಕ್ಕಳ ಕಲಿಕೆ ನಿರಂತರತೆಗೆ ಶ್ರಮಿಸುತ್ತಿರುವುದರ ಜತೆಗೆ ವೈಯಕ್ತಿಕ ಆರೋಗ್ಯದ ಕಡೆಗೂ ಗಮನ ನೀಡಬೇಕಿದೆ. ಪಾಠ ಕಲಿಸಲು ಮಕ್ಕಳಿರುವಲ್ಲಿಗೇ ತೆರಳುವ ವೇಳೆಯೂ ಸಾಮಾಜಿಕ ಅಂತರ ಸೇರಿದಂತೆ ಮುಂಜಾಗ್ರತಾ ಕ್ರಮ ಅನುಸರಿಸಲು ಶಿಕ್ಷಕರು ಮುಂದಾಗಬೇಕಿದೆ.
ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ 9 ಶಿಕ್ಷಕರು ಮೃತಪಟ್ಟಿದ್ದರೆ, 28 ಶಿಕ್ಷಕರಿಗೆ ಪಾಸಿಟಿವ್ ಬಂದಿದೆ. ಇದು ಆಘಾತಕಾರಿ ಸಂಗತಿ. ನಮ್ಮ ಶಿಕ್ಷಕರು ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರಬಾರದು. ಸೋಂಕಿನ ಲಕ್ಷಣ ಕಂಡ ತಕ್ಷಣವೇ ಚಿಕಿತ್ಸೆಗೆ ದಾಖಲಾಗಬೇಕು. ಪಾಸಿಟಿವ್ ಇರುವ ಶಿಕ್ಷಕರು ಆಸ್ಪತ್ರೆಗೆ ದಾಖಲಾದಾಗ ವಿಶೇಷ ಕಾಳಜಿಯಿಂದ ಚಿಕಿತ್ಸೆ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೂ ಪತ್ರ ಬರೆದಿದ್ದೇನೆ ಎಂದು ಹಾವೇರಿ ಡಿಡಿಪಿಐ ಅಂದಾಲಪ್ಪ ವಡಗೇರಿ ಅವರು ತಿಳಿಸಿದ್ದಾರೆ.