ಹುಬ್ಬಳ್ಳಿ(ನ.20): ರೈಲ್ವೆಯನ್ನು ಪರಿಸರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ನೈಋುತ್ಯ ರೈಲ್ವೆಯು ಎಚ್‌ಒಜಿ (ಹೆಡ್‌ ಆನ್‌ ಜನರೇಶನ್‌) ವಿದ್ಯುದೀಕರಣದ ಮೂಲಕ 10 ರೈಲುಗಳ ಸಂಚಾರಕ್ಕೆ ಚಾಲನೆ ನೀಡಿದ್ದು, ಇದರಿಂದ ಇಂಧನಕ್ಕೆ ವ್ಯಯವಾಗುತ್ತಿದ್ದ ವಾರ್ಷಿಕ 84.4 ಕೋಟಿ ರು. ಉಳಿತಾಯವಾಗಲಿದೆ.

ಎಲ್‌ಎಚ್‌ಬಿ ಕೋಚ್‌ಗಳ 10 ರೈಲುಗಳಿಗೆ ವಿದ್ಯುದೀಕರಣ ಮಾಡಲಾಗಿದ್ದು, ಏರ್‌ ಕಂಡಿಷನ್‌ ಹಾಗೂ ಲೈಟಿಂಗ್‌ಗೆ ಸಂಪೂರ್ಣವಾಗಿ ಎಚ್‌ಒಜಿ ತಂತ್ರಜ್ಞಾನ ಅಳವಡಿಸಲಾಗಿದೆ. ಇಒಜಿ (ಆ್ಯಡ್‌ ಆನ್‌ ಜನರೇಟರ್ಸ್‌) ಗಳನ್ನು ರೈಲಿಗೆ ಅಳವಡಿಕೆ ಮಾಡಲಾಗಿದ್ದು, ಇವುಗಳಿಂದ ಏರ್‌ ಕಂಡಿಷನ್‌ ಸೇರಿದಂತೆ ರೈಲಿಗೆ ವಿದ್ಯುತ್‌ ಸರಬರಾಜಾಗಲಿದೆ. ಇವುಗಳಿಗೆ ಓವರ್‌ಹೆಡ್‌ ಲೈನ್‌ಗಳಿಂದ ವಿದ್ಯುತ್‌ ಪೂರೈಕೆಯಾಗಲಿದೆ. ಇದರಿಂದ ಕೇವಲ ಹಣ ಉಳಿತಾಯ ಮಾತ್ರವಲ್ಲದೆ ಶಬ್ದ ಮಾಲಿನ್ಯ ಕೂಡ 105 ಡೆಸಿಬಲ್‌ ನಷ್ಟು ಕಡಿಮೆಯಾಗಲಿದೆ. ಅಲ್ಲದೆ, ವಾಯುಮಾಲಿನ್ಯವೂ ನಿಯಂತ್ರಣವಾಗಲಿದೆ. ಎಚ್‌ಒಜಿ ಟೆಕ್ನಾಲಜಿಯ ಮೊದಲ ಹಂತದಿಂದಾಗಿ ನೈಋುತ್ಯ ರೈಲ್ವೆಗೆ ಪ್ರತಿ ರೈಲಿಗೆ ಒಂದು ಟ್ರಿಪ್‌ಗೆ ವಾರ್ಷಿಕ 3.5 ಲಕ್ಷ ರು. ಉಳಿತಾಯವಾಗಲಿದ್ದು, ವಾರ್ಷಿಕ 88.4 ಕೋಟಿ ರು. ಉಳಿತಾಯವಾಗಲಿದೆ ಎಂದು ನೈಋುತ್ಯ ರೈಲ್ವೆ ಮಹಾಪ್ರಬಂಧಕ ಎ.ಕೆ. ಸಿಂಗ್‌ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೆಎಸ್‌ಆರ್‌ ಬೆಂಗಳೂರು- ಹಝರತ್‌ ನಿಝಾಮುದ್ದಿನ್‌- ಕೆಎಸ್‌ಆರ್‌ ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್‌, ಕೆಎಸ್‌ಆರ್‌ ಬೆಂಗಳೂರು-ದಾನಪುರ-ಕೆಎಸ್‌ಆರ್‌ ಬೆಂಗಳೂರು ಸಂಘಮಿತ್ರ ಎಕ್ಸ್‌ಪ್ರೆಸ್‌, ಕೆಎಸ್‌ಆರ್‌ ಬೆಂಗಳೂರು ಕನ್ಯಾಕುಮಾರಿ-ಕೆಎಸ್‌ಆರ್‌ ಬೆಂಗಳೂರು ಐಲ್ಯಾಂಡ್‌ ಎಕ್ಸ್‌ಪ್ರೆಸ್‌, ಕೆಎಸ್‌ಆರ್‌ ಬೆಂಗಳೂರು ಎಂಜಿಆರ್‌ ಚೆನ್ನೈ ಸೆಂಟ್ರಲ್‌-ಕೆಎಸ್‌ಆರ್‌ ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್‌, ಕೆಎಸ್‌ಆರ್‌ ಬೆಂಗಳೂರು ಎಂಜಿಆರ್‌ ಚೆನ್ನೈ ಸೆಂಟ್ರಲ್‌- ಕೆಎಸ್‌ಆರ್‌ ಬೆಂಗಳೂರು ಲಾಲಭಾಗ ಎಕ್ಸ್‌ಪ್ರೆಸ್‌, ಎಂಜಿಆರ್‌ ಚೆನ್ನೈ ಸೆಂಟ್ರಲ್‌-ಮೈಸೂರು- ಎಂಜಿಆರ್‌ ಚೆನ್ನೈ ಸೆಂಟ್ರಲ್‌ ಎಕ್ಸ್‌ಪ್ರೆಸ್‌, ಕೆಎಸ್‌ಆರ್‌ ಬೆಂಗಳೂರು-ನಂದೆಡ-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌, ಕೆಎಸ್‌ಆರ್‌ ಬೆಂಗಳೂರು-ದೆಹಲಿ ಸರಾಯ್‌ ರೊಹಿಲಾ- ಕೆಎಸ್‌ಆರ್‌ ಬೆಂಗಳೂರು ಎಸಿ ಡ್ಯುರಂಟೊ ಎಕ್ಸ್‌ಪ್ರೆಸ್‌, ಯಶವಂತಪುರ-ಕುಚುವೆಲಿ- ಯಶವಂತಪುರ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಹಾಗೂ ಯಶವಂತಪುರ-ಬಗಲ್ಪುರ- ಯಶವಂತಪುರ ಅಂಗಾ ಎಕ್ಸ್‌ಪ್ರೆಸ್‌ ರೈಲಿಗೆ ವಿದ್ಯುದೀಕರಣ ಮಾಡಲಾಗಿದೆ.