ಸೂಲಿಬೆಲೆ [ಅ.04]:  ರಕ್ತ ಚಂದನವನ್ನು ಸಾಗಿಸುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳನೊಬ್ಬನ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದು, 800 ಕೇಜಿ ರಕ್ತ ಚಂದನ ವಶಪಡಿಸಿ ಕೊಂಡಿರುವ ಘಟನೆ ಹೊಸಕೋಟೆ ತಾಲೂಕು ಕಟ್ಟೆಗೇಹಳ್ಳಿ ಸಮೀಪ ಗುರುವಾರ ನಡೆದಿದೆ.

ಆಂಧ್ರಪ್ರದೇಶದ ಚಿತ್ತೂರಿನ ನಿವಾಸಿ ಜಾವೀದ್‌ ಕಾಲಿಗೆ ಗುಂಡು ತಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಆರೋಪಿ, ಕೋಲಾರ ಮೂಲದ ಇಮ್ರಾನ್‌ನನ್ನು ಬಂಧಿಸಿರುವ ಪೊಲೀಸರು, ರಕ್ತ ಚಂದನ ಸಾಗಣೆಯ ಹಿಂದೆ ಮತ್ತಷ್ಟುವ್ಯಕ್ತಿಗಳು ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಇನ್ನು ಬಂಧಿತರಿಂದ 800 ಕೇಜಿ ರಕ್ತಚಂದನ, ಒಂದು ಸ್ಕಾರ್ಪಿಯೋ, ಒಂದು ಆಯುಧವನ್ನು ವಶಕ್ಕೆ ಪಡೆದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಾವೀದ್‌, ಇಮ್ರಾನ್‌ ಜೊತೆಗೂಡಿ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರಿಗೆ ರಕ್ತ ಚಂದನವನ್ನು ಕೊಡಲು ಸ್ಕಾರ್ಪಿಯೋ ಕಾರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಈ ಮಾಹಿತಿ ಪಡೆದ ಹೊಸಕೊಟೆ ತಾಲೂಕಿನ ತಿರುಮಳಶೆಟ್ಟಿಹಳ್ಳಿ ಪೊಲೀಸರು ಮೇಲಿನಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌ ಅವರು ಡಿವೈಎಸ್ಪಿ ನಿಂಗಪ್ಪ ಬಸಪ್ಪ ಸಕ್ರಿ ನೇತೃತ್ವದಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌, ಪಿಎಸ್‌ಐ ರಾಜು, ಶಿವರಾಜು, ಪ್ರಸನ್ನಕುಮಾರ್‌ ಇತರ ಸಿಬ್ಬಂದಿ ತಂಡವನ್ನು ರಚಿಸಿ, ಕಾರಾರ‍ಯಚರಣೆಗೆ ಇಳಿಸಿದ್ದಾರೆ.

ಪೊಲೀಸರು ಕಟ್ಟಿಗೇನಹಳ್ಳಿ ಕೆರೆಯ ಸಮೀಪ ಕಾರನ್ನು ಸುತ್ತುವರಿದು ಬಂಧಿಸಲು ಮುಂದಾಗಿದ್ದಾರೆ. ಆ ವೇಳೆ ಆರೋಪಿ ಜಾವೀದ್‌ ಪೊಲೀಸರ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೆ ಮುಂದಾಗಿದ್ದಾರೆ. ತಕ್ಷಣ ಡಿವೈಎಸ್‌ಪಿ ಸಕ್ರಿ, ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದ್ದಾರೆ. ಆದರೆ ಆರೋಪಿಗಳು ಎಚ್ಚರಿಕೆಗೂ ಜಗ್ಗದಿದ್ದಾಗ ಜಾವೀದ್‌ ಕಾಲಿಗೆ ಗುಂಡು ಹಾರಿಸಿದ್ದಾರೆ. ಮತ್ತೊಬ್ಬ ಆರೋಪಿ ಇಮ್ರಾನ್‌ ಬೆದರಿ ಪೊಲೀಸರಿಗೆ ಶರಣಾಗಿದ್ದಾನೆ.

ರಕ್ತ ಚಂದನವನ್ನು ಎಲ್ಲಿಂದ ತರಲಾಗಿತ್ತು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಈ ಸಂಬಂಧ ತಿರುಮಲಶೆಟ್ಟಿಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕ ಆರೋಪಿಗಳು ಭಾಗಿಯಾಗಿರುವ ಶಂಕೆ ಇದೆ. ಎಲ್ಲರನ್ನೂ ಅತಿ ಶೀಘ್ರವಾಗಿ ಬಂಧಿಸಲಾಗುವುದು. ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ನಡೆಯುವ ಕಾನೂನುಬಾಹಿರ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ ಎಚ್ಚರಿಸಿದ್ದರೂ, ಕೆಲವರು ಅಕ್ರಮದಲ್ಲಿ ಭಾಗಿ ಆಗುತ್ತಿರುವುದು ಮಂದುವರಿದಿದೆ. ಇದನ್ನು ಸಹಿಸುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುತ್ತೇವೆ.

-ರವಿ ಡಿ.ಚನ್ನಣ್ಣನವರ್‌, ಜಿಲ್ಲಾ ಎ​ಸ್ಪಿ.