ಖಾಸಗಿ ಆಸ್ಪತ್ರೆಯಲ್ಲಿ ಶೇ.80 ಬೆಡ್‌ ಕೋವಿಡ್‌ಗೆ: ಸುಧಾಕರ್‌

30ಕ್ಕಿಂತ ಹೆಚ್ಚು ಹಾಸಿಗೆ ಆಸ್ಪತ್ರೆಗಳಿಗೆ ಅನ್ವಯ| ಶೇ.50ರಷ್ಟು ಹಾಸಿಗೆಗಳನ್ನು ಸರ್ಕಾರದ ಸ್ವಾದೀನಕ್ಕೆ ನೀಡುವಂತೆ ಸೂಚನೆ| ಇಲ್ಲಿಯೂ ಸರ್ಕಾರಿ ದರದಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಈ ಬಗ್ಗೆ ಶೀಘ್ರವೇ ಆದೇಶ ಹೊರಡಿಸಲಾಗುವುದು: ಸಚಿವ ಸುಧಾಕರ್‌| 

80 Percent Bed Reserved in Private Hospitals to Covid Patients in Bengaluru grg

ಬೆಂಗಳೂರು(ಏ.23): ಕೊರೋನಾ ತೀವ್ರಗತಿ ಹೆಚ್ಚಳ ಹಿನ್ನೆಲೆಯಲ್ಲಿ ನಗರದಲ್ಲಿ 30ಕ್ಕಿಂತ ಹೆಚ್ಚು ಹಾಸಿಗೆ ಇರುವ ಆಸ್ಪತ್ರೆಗಳು ತಮ್ಮ ಶೇಕಡ 80ರಷ್ಟು ಹಾಸಿಗೆಗಳನ್ನು ಕೊರೋನಾ ಸೋಂಕಿತರಿಗೆ ಮೀಸಲಿಡುವಂತೆ ಸೂಚಿಸಿ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಶೇ.50ರಷ್ಟು ಹಾಸಿಗೆಗಳನ್ನು ಸರ್ಕಾರದ ಸ್ವಾದೀನಕ್ಕೆ ನೀಡುವಂತೆ ಸೂಚಿಸಲಾಗಿದೆ. ಆದರೆ, ಸೋಂಕು ತೀವ್ರಗತಿ ಹೆಚ್ಚಳ ಹಿನ್ನೆಲೆಯಲ್ಲಿ ಜನರಲ್‌ ಬೆಡ್‌, ಐಸಿಯು, ವೆಂಟಿಲೇಟರ್‌, ಎಚ್‌ಡಿಯು ಸೇರಿದಂತೆ ಎಲ್ಲ ಸೌಲಭ್ಯವನ್ನು ಕೋವಿಡ್‌ಗೆ ಮೀಸಲಿಟ್ಟು 3ರಿಂದ 4 ದಿನದೊಳಗೆ ಶೇ.80ರಷ್ಟು ಹಾಸಿಗೆಯನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಬೇಕು. ಇಲ್ಲಿ ಸರ್ಕಾರಿ ದರದಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಈ ಬಗ್ಗೆ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು.

ಕೊರೋನಾ ಸೋಂಕಿನ ನಾಗಲೋಟ ಮುಂದುವರೆದಿರುವುದರಿಂದ ಹಾಸಿಗೆಗಳ ಸಂಖ್ಯೆ ಹೆಚ್ಚು ಮಾಡುವ ಪರಿಸ್ಥಿತಿ ಬಂದಿದೆ. ನಗರದಲ್ಲಿ 13 ಖಾಸಗಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದು 7,500 ಸಾವಿರ ಹಾಸಿಗೆಗಳು ವೈದ್ಯಕೀಯ ಕಾಲೇಜಿನಲ್ಲಿ ಸಿಗುತ್ತಿವೆ. ಡಯಾಲಿಸಿಸ್‌, ತಾಯಿ-ಮಗು ಹಾಸಿಗೆ ಮತ್ತು ತುರ್ತು ಹಾಸಿಗೆಗಳನ್ನು ಹೊರತುಪಡಿಸಿ ಎಲ್ಲ ಹಾಸಿಗೆಗಳನ್ನು ಸಂಪೂರ್ಣವಾಗಿ ಕೋವಿಡ್‌ಗೆ ಮೀಸಲಿಡಬೇಕಿದೆ ಎಂದು ಹೇಳಿದರು.

ಕೋವಿಡ್​ ಲಸಿಕೆ: ಮಹತ್ವದ ಹೆಜ್ಜೆ ಇಟ್ಟ ಯಡಿಯೂರಪ್ಪ ಸರ್ಕಾರ!

ಆ್ಯಂಬುಲೆನ್ಸ್‌ ಸಿಬ್ಬಂದಿ ಹಣ ವಸೂಲಿ ಮಾಡಿದರೆ ಕ್ರಮ

108 ಆ್ಯಂಬುಲೆನ್ಸ್‌ನ ಜೊತೆಗೆ ಪ್ರತಿ ವಾರ್ಡ್‌ಗೆ 3 ಆ್ಯಂಬುಲೆನ್ಸ್‌ ನೀಡಲಾಗುವುದು. ಖಾಸಗಿ ಆ್ಯಂಬುಲೆನ್ಸ್‌ ನವರು ಜನರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಇಂತಹವರ ಪರವಾನಗಿ ರದ್ದು ಸೇರಿದಂತೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಡಾ. ಸುಧಾಕರ್‌ ಎಚ್ಚರಿಸಿದರು.

ಸದ್ಯಕ್ಕೆ ಆಮ್ಲಜನಕ ಸರಬರಾಜು ಸುಗಮವಾಗಿ ನಡೆದಿದೆ. ಕಳೆದ 40 ಗಂಟೆಗಳಿಂದ ಆಮ್ಲಜನಕದ ಕೊರತೆಯ ದೂರು ಬಂದಿಲ್ಲ. ಬೆಂಗಳೂರಿಗೆ 40 ಮೆಟ್ರಿಕ್‌ ಟನ್‌ ಹೆಚ್ಚುವರಿ ಆಮ್ಲಜನಕ ಬಂದಿದೆ. ಎಲ್ಲ ಅಧಿಕಾರಿಗಳು ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಯವರೇ ಸಚಿವರು ಮತ್ತು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.

ಎರಡನೇ ಅಲೆಯಲ್ಲಿ ಕೋವಿಡ್‌ ವೈರಸ್‌ ರೂಪಾಂತರಿಯಾಗಿದೆ. ಇದು ಹೇಗೆ ಬಂದಿದೆ? ಯಾವ ರೂಪದಲ್ಲಿದೆ? ಹೇಗೆ ವರ್ತಿಸುತ್ತದೆ ಎಂಬುದು ಈವರೆಗೂ ದೃಢಪಟ್ಟಿಲ್ಲ. ಈಗಾಗಲೇ ಇದರ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಡಬಲ್‌ ಮ್ಯೂಟೇಷನ್‌ ಆಗಿದ್ದಾಗಲೇ ತಡೆಯಲು ಕಷ್ಟವಾಗಿತ್ತು. ಈಗ ಹರಡುತ್ತಿರುವ ವೈರಸ್‌ ಮೊದಲನೇ ವೈರಸ್‌ಗಿಂತಲೂ ಅಪಾಯಕಾರಿಯಾಗಿದೆ ಎಂದು ಡಾ. ಸುಧಾಕರ್‌ ಹೇಳಿದರು.
 

Latest Videos
Follow Us:
Download App:
  • android
  • ios