ತುಮಕೂರು : ಕಾಡ್ಗಿಚ್ಚಿಗೆ 75 ಎಕರೆ ಅರಣ್ಯ ಪ್ರದೇಶವೇ ಭಸ್ಮ

ಕಾಡ್ಗಿಚ್ಚಿನ ಆರ್ಭಟದಿಂದ ಅರಣ್ಯ ಪ್ರದೇಶಕ್ಕೆ ಬೆಂಕಿ ಆವರಿಸಿದ ಪರಿಣಾಮ ೭೫ ಎಕರೆಗೂ ಅಧಿಕ ಅರಣ್ಯ ಭೂಮಿ ಸುಟ್ಟು ಭಸ್ಮವಾಗಿದೆ. ಅರಣ್ಯದಲ್ಲಿ ವಾಸವಿದ್ದ ಸಾವಿರಾರು ಪ್ರಾಣಿ, ಪಕ್ಷಿಗಳು ಮೃತಪಟ್ಟರೂ ಅಗ್ನಿಶಾಮಕ ಸಿಬ್ಬಂದಿವರ್ಗ ತಕ್ಷಣ ಸ್ಥಳಕ್ಕೆ ಆಗಮಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿರುವ ಘಟನೆ ಭಾನುವಾರ ನಡೆದಿದೆ.

75 acres of forest area has been burnt due to forest fire snr

  ಹೊಳವನಹಳ್ಳಿ :  ಕಾಡ್ಗಿಚ್ಚಿನ ಆರ್ಭಟದಿಂದ ಅರಣ್ಯ ಪ್ರದೇಶಕ್ಕೆ ಬೆಂಕಿ ಆವರಿಸಿದ ಪರಿಣಾಮ ೭೫ ಎಕರೆಗೂ ಅಧಿಕ ಅರಣ್ಯ ಭೂಮಿ ಸುಟ್ಟು ಭಸ್ಮವಾಗಿದೆ. ಅರಣ್ಯದಲ್ಲಿ ವಾಸವಿದ್ದ ಸಾವಿರಾರು ಪ್ರಾಣಿ, ಪಕ್ಷಿಗಳು ಮೃತಪಟ್ಟರೂ ಅಗ್ನಿಶಾಮಕ ಸಿಬ್ಬಂದಿವರ್ಗ ತಕ್ಷಣ ಸ್ಥಳಕ್ಕೆ ಆಗಮಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿರುವ ಘಟನೆ ಭಾನುವಾರ ನಡೆದಿದೆ.

ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬಿ.ಡಿ.ಪುರ ಗ್ರಾಪಂ ವ್ಯಾಪ್ತಿಯ ತೋಗರಿಘಟ್ಟ ಸರ್ವೇ ನಂ 97 98 ಮತ್ತು 99 ರಲ್ಲಿನ 75 ಎಕರೆ ಅರಣ್ಯ ಪ್ರದೇಶವು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಅರಣ್ಯಕ್ಕೆ ಬೆಂಕಿ ಆವರಿಸಿದ ತಕ್ಷಣವೇ ಅರಣ್ಯಾಧಿಕಾರಿ ಮತ್ತು ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದರೂ ತಕ್ಷಣ ಸ್ಥಳಕ್ಕೆ ಆಗಮಿಸದೇ ೮೦ ನಿಮಿಷ ತಡವಾಗಿ ಬಂದ ವೇಳೆಗೆ ಅರಣ್ಯದ ನಾಲ್ಕು ದಿಕ್ಕಿಗೂ ಬೆಂಕಿ ಆವರಿಸಿದೆ.

ತೊಗರಿಘಟ್ಟದ ಆದಿ ತಿಮ್ಮಪ್ಪ ಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡ ಅರಣ್ಯ ಪ್ರದೇಶಕ್ಕೆ ಕಾಡ್ಗಿಚ್ಚು ಆವರಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ವರ್ಗ ತಡವಾಗಿ ಆಗಮಿಸಿ ಖಾಸಗಿ ಕೋಳಿಪಾರಂ ರಕ್ಷಣೆಗಾಗಿ ಮಾತ್ರ ಪೂರ್ವ ದಿಕ್ಕಿನ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿ ನಂತರ ಅರಣ್ಯದಿಂದ ಕಾಲ್ಕಿತ್ತು ರೆಡ್ಡಿಕಟ್ಟೆ ಸಮೀಪ ಅಗ್ನಿಶಾಮಕ ವಾಹನವನ್ನು ನಿಲ್ಲಿಸಿಕೊಂಡು ಕಾಲಹರಣ ಮಾಡಿರುವ ಘಟನೆಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.

ಪ್ರಾಣಿ-ಪಕ್ಷಿಗಳು ಕಾಡ್ಗಿಚ್ಚಿಗೆ ಆಹುತಿ:

ಕಾಡಿಗೆ ಬೆಂಕಿ ಆವರಿಸಿಕೊಂಡು ಧಗಧಗನೇ ಉರಿಯುತ್ತಿರುವಾಗ ಪ್ರಾಣಿಗಳು ಚೀರಾಟದಿಂದ ರೈತರ ಹೊಲಗದ್ದೆಗಳಿಗೆ ನುಗ್ಗಿದವು. ಮರಗಿಡದಲ್ಲಿ ಗೂಡುಕಟ್ಟಿಕೊಂಡು ವಾಸವಿದ್ದ ಪಕ್ಷಿಗಳು ತಮ್ಮ ಪುಟಾಣಿ ಮರಿಗಳನ್ನು ಬಿಟ್ಟು ಆಕಾಶದಲ್ಲಿ ಚಿಲಿಪಿಲಿ ಸದ್ದು ಮಾಡುತ್ತಾ ತಮ್ಮ ರಕ್ಷಣೆಗಾಗಿ ಕೈಚಾಚುತ್ತಿದ್ದವು. ಬೆಂಕಿಯ ಆಹುತಿಯಿಂದ ಸಾವಿರಕ್ಕೂ ಅಧಿಕ ಪ್ರಾಣಿ ಮತ್ತು ಪಕ್ಷಿಗಳು ಸ್ಥಳದಲ್ಲೇ ಮೃತಪಟ್ಟಿವೆ.

ಅಗ್ನಿಶಾಮಕ ಅಧಿಕಾರಿಗಳ ದಿವ್ಯ ನಿರ್ಲಕ್ಷ:

ಅರಣ್ಯಕ್ಕೆ ಕಾಡ್ಗಿಚ್ಚು ತಗುಲಿದ ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ೩ ಸಲ ಕರೆ ಮಾಡಿದರೂ ಸಿಬ್ಬಂದಿಯು 2 ಗಂಟೆ ತಡವಾಗಿ ಆಗಮಿಸಿ, ಖಾಸಗಿ ಕೋಳಿಪಾರಂ ಕಡೆಗೆ ಮಾತ್ರ ಬೆಂಕಿ ನಂದಿಸಿ ಅಲ್ಲಿಂದ ತೆರಳಿದ್ದಾರೆ. ಸ್ಥಳೀಯರು ಬೇಡಿಕೊಂಡರೂ ವಾಹನ ನಿಲ್ಲಿಸದೇ ರೆಡ್ಡಿಕಟ್ಟೆ ಸಮೀಪ ಅರ್ಧಗಂಟೆ ವಾಹನ ನಿಲ್ಲಿಸಿ ಕಾಲಹರಣ ಮಾಡಿದ್ದಾರೆ. ಪತ್ರಕರ್ತರು ಪ್ರಶ್ನಿಸಿದರೆ ಯಾವುದೋ ಕರೆ ಬಂತು ಬಂದಿದ್ದೀವಿ. ನೀರು ಖಾಲಿ ಆಗಿತ್ತು, ಕಚೇರಿಗೆ ಹೋಗಬೇಕು ಎಂಬ ಉಡಾಫೆಯ ಉತ್ತರ ನೀಡಿದ ಅಗ್ನಿಶಾಮಕ ವಾಹನ ಅಲ್ಲಿಂದ ತೆರಳಿದೆ.

ಕಾಡ್ಗಿಚ್ಚಿಗೆ ನುಗ್ಗಿ ಬೆಂಕಿ ನಂದಿಸುವ ಕೆಲಸ

ತೊಗರಿಘಟ್ಟ ಅರಣ್ಯ ಪ್ರದೇಶಕ್ಕೆ ಕಾಡ್ಗಿಚ್ಚು ಆವರಿಸಿರುವ ಮಾಹಿತಿ ತಿಳಿದ ತಕ್ಷಣವೇ ೪೦ಕ್ಕೂ ಅಧಿಕ ಗುಡಿಸಲಿನಲ್ಲಿ ವಾಸವಿರುವ ೩೦ಕ್ಕೂ ಅಧಿಕ ಮಹಿಳೆಯರು ಮರದಿಂದ ಹೊಂಗೆಸೊಪ್ಪು ಕಿತ್ತುಕೊಂಡು ಅರಣ್ಯ ಪ್ರದೇಶಕ್ಕೆ ಆವರಿಸಿಕೊಂಡ ಕಾಡ್ಗಿಚ್ಚಿಗೆ ನುಗ್ಗಿ ಧೈರ್ಯವಾಗಿ ಬೆಂಕಿಯನ್ನು ನಂದಿಸುವ ಕೆಲಸ ಮಾಡಿದ್ದಾರೆ. ಪರಿಸರ ಉಳಿಸುವ ಪ್ರಯತ್ನ ಮಾಡಿರುವ ಮಹಿಳೆಯರ ಕೆಲಸಕ್ಕೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ.

ಅಗ್ನಿಶಾಮಕ ಠಾಣೆಗೆ ೩ ಸಲ ಕರೆ ಮಾಡಿದರೂ ೨ಗಂಟೆ ತಡವಾಗಿ ವಾಹನ ಸ್ಥಳಕ್ಕೆ ಬಂದಿದೆ. ಅರಣ್ಯ ಸಮೀಪವೇ ವಾಸವಿರುವ ೩೦ ಜನ ಮಹಿಳೆಯರು ಕಾಡ್ಗಿಚ್ಚು ನಂದಿಸುವ ಪ್ರಯತ್ನ ಮಾಡಿದ್ದೇವೆ. ಕೋಳಿಪಾರಂ ಕಡೆ ಮಾತ್ರ ಬೆಂಕಿ ನಂದಿಸಿ ಮತ್ತೆ ವಾಹನ ಕಚೇರಿಗೆ ತೆರಳಿದೆ. ಅರಣ್ಯದಲ್ಲಿ ವಾಸವಿದ್ದ ಸಾವಿರಾರು ಪ್ರಾಣಿ,ಪಕ್ಷಿಗಳು ಬೆಂಕಿಗೆ ಆಹುತಿಯಾಗಿವೆ.

ಮುತ್ತುರಾಜಮ್ಮ. ಮಹಿಳೆ. ತೊಗರಿಘಟ್ಟ.

 ಬಿಸಿಲಿನ ತಾಪದಿಂದ ಅರಣ್ಯಕ್ಕೆ ಆಕಸ್ಮಿಕವಾಗಿ ಕಾಡ್ಗಿಚ್ಚು ಆವರಿಸಿದೆ. ಅಗ್ನಿಶಾಮಕ ವಾಹನ ತಡವಾಗಿ ಆಗಮಿಸಿದ ಪರಿಣಾಮ ಬೆಂಕಿಯು ನಾಲ್ಕು ದಿಕ್ಕಿಗೂ ಹರಡಿತ್ತು. ನಾವು ಪಶ್ಚಿಮ ದಿಕ್ಕಿಗೆ ಕರೆದರೂ ವಾಹನ ನಿಲ್ಲಿಸದೇ ಅಗ್ನಿಶಾಮಕ ದಳದವರು ಕಚೇರಿಗೆ ತೆರಳಿದ್ದಾರೆ. ನಾವು ಪ್ರಶ್ನಿಸಿದರೆ ಬೇರೆ ಕಡೆ ಕರೆಬಂದಿದೆ ನಾವು ತೆರಳಬೇಕಿದೆ ಎಂದು ಹೇಳುತ್ತಾರೆ. ನಮ್ಮ ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟು ನಂದಿಸುವ ಕೆಲಸ ಮಾಡಿದ್ದೇವೆ.

ರಾಮಚಂದ್ರಪ್ಪ. ಅರಣ್ಯಸಿಬ್ಬಂದಿ. ಕೊರಟಗೆರೆ

Latest Videos
Follow Us:
Download App:
  • android
  • ios