Asianet Suvarna News Asianet Suvarna News

Koppal: ಕಿತ್ತು ತಿನ್ನುವ ಬಡತನ: ಇಳಿವಯಸ್ಸಲ್ಲೂ ದುಡಿಯುತ್ತಿರುವ 70ರ ವೃದ್ಧೆ..!

*  ಉದ್ಯೋಗ ಖಾತ್ರಿ ಯೋಜನೆಯಿಂದ ಬದುಕು ಕಟ್ಟಿಕೊಂಡ ಅಜ್ಜಿ ಲೈಲಾಬಿ
*  ನರೇಗಾ ಯೋಜನೆ ಬಡವರಿಗೆ ಅನುಕೂಲ
*  ನರೇಗಾ ಕೆಲಸಕ್ಕೆ ಹೋಗಿ ಬದುಕು ಕಟ್ಟಿಕೊಂಡಿರುವ ವೃದ್ಧೆ 
 

70 Years Old Age Woman Did Work in MGNREGA at Koppal grg
Author
Bengaluru, First Published May 11, 2022, 11:12 AM IST

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು(ಮೇ.11): ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಭಾಗದ ಬಡವರಿಗೆ ವರದಾನವಾಗಿದೆ. ಅದೇ ರೀತಿ ತಾಲೂಕಿನ ಇಟಗಿ ಗ್ರಾಮದ 70 ವರ್ಷದ ವೃದ್ಧೆ(Old Age Woman) ಲೈಲಾಬಿ ಜಾಫರ್‌ಸಾಬ್‌ ನೂರಭಾಷ ಬದುಕಿಗೆ ನರೇಗಾ(MGNREGA) ಊರುಗೋಲಾಗಿದೆ.

ಮನೆಯಲ್ಲಿ ಕೂರಬೇಕಾದ ವಯಸ್ಸು, ಆದರೆ ಕಿತ್ತು ತಿನ್ನುವ ಬಡತನ(Poverty). ಗೇಣು ಹೊಟ್ಟೆ ತುಂಬಿಸಿಕೊಳ್ಳಲು ದುಡಿಯಬೇಕೆಂದರೆ ಬಯಲುಸೀಮೆ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕೃಷಿ ಕೆಲಸ ಸಹ ಇರುವುದಿಲ್ಲ. ಇದರ ಮಧ್ಯೆ ಬಡತನಕ್ಕೆ ಬೇಸತ್ತು, ಈ ಲೈಲಾಬಿ ಅಜ್ಜಿ ಪ್ರತಿವರ್ಷ ನರೇಗಾ ಕಾಮಗಾರಿಯಲ್ಲಿ ತೊಡಗಿ ಬದುಕು ಕಟ್ಟಿಕೊಂಡಿದ್ದಾರೆ.

ಬೈಕ್‌ನಲ್ಲೇ ಭಾರತ ಸುತ್ತುತ್ತಿರುವ ಭಾರತಿ: ಇಂಡಿಯಾ ಟೂರ್‌ ಹಿಂದಿದೆ ರೋಚಕ ಕಥೆ..!

ಸಂಸಾರ ನೌಕೆ ಸುಸೂತ್ರವಾಗಿ ನಡೆಯಬೇಕಿದ್ದ ಸಮಯದಲ್ಲಿಯೇ ಅಂದರೆ 30 ವರ್ಷದ ಹಿಂದೆಯೇ ಗಂಡನನ್ನು ಕಳೆದುಕೊಂಡು ಲೈಲಾಬಿ ತನ್ನ ಮತ್ತು ತನ್ನಿಬ್ಬರ ಮಕ್ಕಳ ಜೀವನ ನಿರ್ವಹಣೆಗೆ ಕೂಲಿ ಮಾಡಿಯೇ ಬದುಕಬೇಕಿತ್ತು. ಧೃತಿಗೆಡದೆ ಲೈಲಾಬಿ ನೂರಭಾಷ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಅವರಿವರ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿಯೇ ನರೇಗಾ ಯೋಜನೆ ಕೂಲಿ ಕೆಲಸದ ಮಾಹಿತಿ ಸಿಕ್ಕು, ಬದುಕಿಗೆ ಆಶಾಕಿರಣವಾಯಿತು. ಪ್ರತಿವರ್ಷ ತಪ್ಪದೆ ನರೇಗಾ ಕೆಲಸಕ್ಕೆ ಹೋಗಿ ಬದುಕು ಕಟ್ಟಿಕೊಂಡಿದ್ದಾರೆ. ಲೈಲಾಬಿ ಅವರಿಗೆ ತುಂಡು ಜಮೀನು ಇಲ್ಲದಿದ್ದರೂ ಲೈಲಾಬಿ ನರೇಗಾ ಮತ್ತು ಇತರೆ ಕೂಲಿ ಕೆಲಸ ನಂಬಿ ಬದುಕು ಸಾಗಿಸುತ್ತಿದ್ದಾರೆ.

ದುಡಿಮೆಯಿಂದ ಬಂದ ಹಣದಲ್ಲಿಯೇ ತನ್ನಿಬ್ಬರ ಮಕ್ಕಳ ವಿದ್ಯಾಭ್ಯಾಸ, ಪಾಲನೆ ಮತ್ತು ಮಕ್ಕಳ ಮದುವೆ ಸಹ ಮಾಡಿದ್ದಾರೆ. ಬದುಕಿನ ಇಳಿಸಂಜೆಯಲ್ಲಿರುವ ಲೈಲಾಬಿ ತಮ್ಮ ಗ್ರಾಮದಲ್ಲಿಯೇ ದುಡಿಮೆ ಮಾಡಲು ಸಹಕಾರಿಯಾದ ನರೇಗಾ ಕೆಲಸಕ್ಕೆ ತನ್ನಂತೆ ಇತರ ಮಹಿಳೆಯರು ತಡಗಿಸಿಕೊಳ್ಳಬೇಕು ಎಂದು ಜಾಗೃತಿ ಮೂಡಿಸುತ್ತಾರೆ.

ಗ್ರಾಮ ಪಂಚಾಯಿತಿಯಿಂದ ಕೆಲಸ ಕೊಟ್ಟಿರುವುದಕ್ಕೆ ತುಂಬಾ ಖುಷಿ ಆಗೈತ್ರಿ. ಕೂಲಿಯಿಂದ ಬಂದ ರೊಕ್ಕವನ್ನು ಮನೆಗೆ ಬೇಕಾಗುವ ಕಿರಾಣಿ ತರಾಕ, ಸಂಘಕ್ಕ ರೊಕ್ಕ ಕಟ್ಟಾಕ, ಬಟ್ಟೆತರಾಕ ಬಳಸುತ್ತೇವ್ರಿ. ನರೇಗಾ ಕೆಲಸ ಆರಂಭ ಆದಾಗಿನಿಂದ ಕೆಲಸಕ್ಕೆ ಬರೋದನ್ನು ತಪ್ಪಿಸಿಲ್ಲ ಅಂತ 70 ವರ್ಷದ ವೃದ್ಧೆ ಲೈಲಾಬಿ ತಿಳಿಸಿದ್ದಾರೆ. 

ಇಳಿವಯಸ್ಸಿನಲ್ಲಿ ಹುಮ್ಮಸ್ಸಿನಿಂದ ಲೈಲಾಬಿ ನರೇಗಾ ಕೆಲಸಕ್ಕೆ ಬರುವುದು ನೋಡಿದರೆ ನಿಜಕ್ಕೂ ಮಾದರಿ ಅನಿಸುತ್ತದೆ. ನರೇಗಾ ಯೋಜನೆ ಬಡವರಿಗೆ ಅನುಕೂಲವಾಗಿದೆ. ಅದನ್ನು ಲೈಲಾಬಿ ಅಜ್ಜಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಂತ ಕುಕನೂರು ತಾಪಂ ಪ್ರಭಾರಿ ಇಒ ರಾಮಣ್ಣ ದೊಡ್ಮನಿ ತಿಳಿಸಿದ್ದಾರೆ. 
 

Follow Us:
Download App:
  • android
  • ios