ಕಾರವಾರ, (ಏ.14): ಇಲ್ಲಿನ ಕದಂಬ ನೌಕಾನೆಲೆಯ ಐಎನ್‌ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 5 ಜನ ಕೊರೋನಾ ಸೋಂಕಿತರು ಗುಣಮುಖರಾಗಿದ್ದು ಅವರನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.‌ 

ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 7 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದಂತಾಗಿದೆ. ಐವರ ಗಂಟಲು ದ್ರವದ ಪರೀಕ್ಷಾ ಮಾದರಿ ನೆಗೆಟಿವ್ ಬಂದಿದ್ದು, ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ಐವರನ್ನೂ ಮುಂಜಾಗ್ರತಾ ಕ್ರಮವಾಗಿ 14 ದಿನಗಳ ಕಾಲ ಸರಕಾರಿ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರು ತಿಳಿಸಿದರು.

ಡಿಸ್ಚಾರ್ಜ್ ಆಗಿದ್ದ ಇಬ್ಬರಿಗೆ ಮತ್ತೆ ಕೊರೋನಾ ಸೋಂಕು!

ನಾಲ್ಕು ದಿನಗಳ ಹಿಂದೆ ಇಬ್ಬರು ಗುಣಮುಖರಾಗಿದ್ದರು. ಈಗ ಐವರು ಗುಣಮುಖರಾಗಿದ್ದು ಆಸ್ಪತ್ರೆಯಲ್ಲಿ ಒಬ್ಬರಿಗೆ ಚಿಕಿತ್ಸೆ ಮುಂದುವರಿದಿದ್ದು ಅವರೂ ಚೇತರಿಸಿಕೊಳ್ಳುತ್ತಿದ್ದಾರೆ ಹರೀಶ್ ಕುಮಾರ್ ಸ್ಪಷ್ಟಪಡಿಸಿದರು.

ಜಿಲ್ಲೆಯ ಕೊರೊನಾ ಸೊಂಕಿತರು ಗುಣಮುಖರಾಗಿರುವುದು ಸಾರ್ವಜನಿಕರು ನಿಟ್ಟುಸಿರುವ ಬಿಡುವಂತಾಗಿದೆ. ಅಷ್ಟೇ ಅಲ್ಲದೇ ಇದೊಂದು ಒಳ್ಳೆ ಬೆಳವಣಿಗೆ ಕೂಡ. ಹೀಗೆ ಎಲ್ಲರೂ ಮಾಹಾಮಾರಿಯಿಂದ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸೋಣ. ಜತೆಗೆ ಎಲ್ಲರೂ ಮನೆ ಇದ್ದು, ಸೋಂಕು ಹರಡುವಿಕೆಯನ್ನು ನಿಯಂತ್ರಿಸೋಣ.