ಬೆಳಗಾವಿ(ನ.01): ನಗರದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ನಗರದ ಸಿಪಿಎಡ್ ಮೈದಾನದಲ್ಲಿ ಜಲಸಂಪನ್ಮೂಲ  ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಅವರು ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿದ್ದಾರೆ.  ಧ್ವಜಾರೋಹಣ ನೆರವೇರಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಅವರು ವಿವಿಧ ಪಥಸಂಚಲಗಳ ಪರಿವೀಕ್ಷಣೆ ಮಾಡಿದ್ದಾರೆ. 

"

ಇನ್ನು ಕನ್ನಡ ರಾಜ್ಯೋತ್ಸವ ಆಚರಿಸುವ ಬದಲು ಕರಾಳ ದಿನಾಚರಣೆ ಆಚರಣೆಗೆ ಮುಂದಾಗಿದ್ದ ಎಂಇಎಸ್‌ಗೆ ಮೊದಲ ಬಾರಿಗೆ ಮುಖಭಂಗ ಅನುಭವಿಸಿದೆ. ಹೌದು,  ಇದೇ‌ ಮೊದಲ ಬಾರಿಗೆ ಕರಾಳ ದಿನಾಚರಣೆ ಆಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ.  ಹೀಗಾಗಿ ಎಂಇಎಸ್‌ಗೆ ಭಾರೀ ಮುಖಭಂಗವಾಗಿದೆ. 

ಒಂದು ಲಕ್ಷ ಕಪ್ಪು ಬಲೂನ್‌ ಹಾರಿಸಲು MES ಸಿದ್ಧತೆ : ಯಾಕೆ..?

ಜಿಲ್ಲಾಧಿಕಾರಿ ಎಂ‌ಜಿ ಹಿರೇಮಠ ಅವರು ಕರಾಳ ದಿನಾಚರಣೆ ಮಾಡದಂತೆ ಖಡಕ್ ಸಂದೇಶ ರವಾನಿಸಿದ್ದಾರೆ. ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಎಂಇಎಸ್‌ ನಾಯಕರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆಗೆ ನಗರದ ಶಿವಾಜಿ ಗಾರ್ಡನ್ ಬಳಿ ಪ್ರತಿಭಟನೆ ಮಾಡಲು ಯೋಚಿಸುತ್ತಿದೆ ಎಂದು ತಿಳಿದು ಬಂದಿದೆ.  

ಮನೆಯ ಮಹಡಿ ಮೇಲೆ ನಿಂತು ಕಪ್ಪು ಬಲೂನ್‌ಗಳನ್ನ ಹಾರಿ ಬಿಡಲು ಕೆಲ ಪುಂಡರು ಪ್ಲಾನ್ ಮಾಡಿದ್ದಾರೆ. ಇಂತಹ ನಾಡದ್ರೋಹಿಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ ಬೆಂಬಲ ವ್ಯಕ್ತವಾಗಿದೆ. ಮಹಾರಾಷ್ಟ್ರದಲ್ಲಿ ಸಚಿವರೆಲ್ಲರೂ ಕಪ್ಪು ಪಟ್ಟಿ ಕಟ್ಟಿಕೊಂಡು ಕೆಲಸ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.  ಹೀಗಾಗಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಆಯಾಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.